ADVERTISEMENT

ತುಳಸಿರಾಮ ಸುತಾರ್‌ಗೆ ರಾಜ್ಯ ಪ್ರಶಸ್ತಿ

ಎಲೆಯಲ್ಲೇ ಸಂಗೀತ ನುಡಿಸುವ ವಿಶಿಷ್ಟ ಕಲಾವಿದ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 15:24 IST
Last Updated 26 ಫೆಬ್ರುವರಿ 2020, 15:24 IST

ಬೀದರ್: ಎಲೆಯಲ್ಲೇ ಸಂಗೀತ ನುಡಿಸುವ ಜಿಲ್ಲೆಯ ಹಿರಿಯ ಕಲಾವಿದ ತುಳಸಿರಾಮ ಸುತಾರ್ ಅವರಿಗೆ ರಾಜ್ಯ ಜಾನಪದ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ದೊರೆತಿದೆ.

ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಅದ್ಭುತ ಕಲಾವಿದ: ಆಲದ ಎಲೆಯ ಸಹಾಯದಿಂದ ಸಂಗೀತ ನುಡಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ತುಳಸಿರಾಮ ಸುತಾರ್ ಅದ್ಭುತ ಕಲಾವಿದರಲ್ಲಿ ಒಬ್ಬರು.

ADVERTISEMENT

ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರೂ ಆಗಿರುವ ಭಾಲ್ಕಿ ತಾಲ್ಲೂಕಿನ ಲಂಜವಾಡ ಗ್ರಾಮದ 77 ವರ್ಷದ ತುಳಸಿರಾಮ ಸುತಾರ್ ಓದಿದ್ದು ಮರಾಠಿ ಮಾಧ್ಯಮದಲ್ಲಿ ನಾಲ್ಕನೇ ತರಗತಿವರೆಗೆ ಮಾತ್ರ.
ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ, ಪಾಪ್, ಲಘು ಸಂಗೀತ, ಭಕ್ತಿ ಗೀತೆ, ಚಿತ್ರಗೀತೆ, ಜಾನಪದ ಗೀತೆ, ಕವ್ವಾಲಿ, ವಚನ ಸಂಗೀತ, ಶಿಶು ಗೀತೆ ಸೇರಿದಂತೆ ಅನೇಕ ಪ್ರಕಾರದ ಸಂಗೀತವನ್ನು ಎಲೆಯಲ್ಲೇ ನುಡಿಸುತ್ತಾರೆ.

‘ಎ ಮೇರೆ ವತನ್ ಕೇ ಲೋಗೋ, ಜರಾ ಆಂಖೋ ಮೇ ಭರಲೋ ಪಾನಿ, ಜೋ ಶಹೀದ್ ಹುಯೆ ಹೈ ಉನಕೆ, ಜರಾ ಯಾದ ಕರೋ ಕುರಬಾನಿ...’, ‘ಮೇರೆ ನೈನಾ ಸಾವನ ಬಾಧೊ...’, ‘ವಚನದಲ್ಲಿ ನಾಮಾಮೃತ ತುಂಬಿ...’, ‘ದರುಶನ ದೇರೆ ದೇರೆ ಭಗವಂತ...’, ‘ನಗುತಾ ನಗುತಾ ಬಾಳು ನೂರು ವರ್ಷ....’ ಮೊದಲಾದ ಹಾಡುಗಳನ್ನು ಎಲೆ ನೆರವಿನಿಂದ ನುಡಿಸಿ ರಂಜಿಸುತ್ತಾರೆ.

ಸಂಗೀತ ವಾದ್ಯ ನುಡಿಸುವವರಿಂದ ಪ್ರೇರಿತರಾಗಿ ಸತತ ಪ್ರಯತ್ನದ ಮೂಲಕ ಎಲೆಯಲ್ಲಿ ಸಂಗೀತ ನುಡಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ. ಅವರ ಪ್ರಕಾರ ಮಾವಿನ ಎಲೆ, ನೇರಳೆ ಎಲೆ, ಅರಳಿ ಎಲೆ ಬಳಸಿ ಸಂಗೀತ ನುಡಿಸಬಹುದು. ಆಲದ ಎಲೆಯಿಂದ ಸುಶ್ರಾವ್ಯ ಸಂಗೀತ ಹೊರಹೊಮ್ಮುತ್ತದೆ.

ದೆಹಲಿಯ ಆಕಾಶವಾಣಿ ಕೇಂದ್ರವು ತುಳಸಿರಾಮ ಅವರ ವಿಶಿಷ್ಟ ಕಲೆಯನ್ನು ಗುರುತಿಸಿ ರಾಷ್ಟ್ರಪತಿಯಾಗಿದ್ದ ನೀಲಂ ಸಂಜೀವರೆಡ್ಡಿ ಹಾಗೂ ಪ್ರಧಾನಿಯಾಗಿದ್ದ ಚರಣಸಿಂಗ್ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಒದಗಿಸಿಕೊಟ್ಟಿತ್ತು. ಇವರ ಕಲಾ ಪ್ರತಿಭೆಗೆ ಅನೇಕ ಪ್ರಶಸ್ತಿ, ಸನ್ಮಾನಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.