ಔರಾದ್: ತಾಲ್ಲೂಕಿನ ಶಂಕರ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಗೊಂಡಿದೆ.
1ರಿಂದ 5ನೇ ತರಗತಿವರೆಗಿನ ಈ ಶಾಲೆಯಲ್ಲಿ 25 ಮಕ್ಕಳಿದ್ದು, ಇಬ್ಬರು ಶಿಕ್ಷಕರಿದ್ದಾರೆ. ಅಡುಗೆ ಕೋಣೆ ಸೇರಿದಂತೆ ಒಟ್ಟು ಮೂರು ಕೊಠಡಿಗಳಿದ್ದು, ಅವು ಶಿಥಿಲಗೊಂಡಿವೆ. ಅಪಾಯ ಆಗಬಾರದೆಂದು ಮಳೆಗಾಲದ ಸಮಯದಲ್ಲಿ ಶಿಥಿಲ ಕಟ್ಟಡದಿಂದ ಮಕ್ಕಳನ್ನು ಪಕ್ಕದ ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆಗಿನಿಂದ ಈಗಲೂ ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಕೂಡಿಸಿ ಪಾಠ ಮಾಡಲಾಗುತ್ತಿದೆ.
ಶಾಲಾ ಕಟ್ಟಡ ಶಿಥಿಲವಾಗಿರುವುದು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅದನ್ನು ಕೆಡವಿ ಹೊಸ ಕಟ್ಟಡ ಆಗುವ ತನಕ ಅಂಗನವಾಡಿ ಕೇಂದ್ರ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಹೀಗಾಗಿ ಎಲ್ಲ ಐದು ತರಗತಿ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂಡಿಸಿ ಬೋಧನೆ ಮಾಡುತ್ತಿದ್ದೇವೆ ಎಂದು ಶಂಕರ ತಾಂಡಾ ಶಾಲೆಯ ಶಿಕ್ಷಕರು ಹೇಳುತ್ತಾರೆ.
‘ನಮ್ಮ ಮಕ್ಕಳು ಆರು ತಿಂಗಳಿನಿಂದ ಅಂಗನವಾಡಿ ಕೇಂದ್ರದಲ್ಲೇ ಓದುತ್ತಿದ್ದಾರೆ. ಶಿಥಿಲಗೊಂಡ ಕಟ್ಟಡದಲ್ಲೇ ಮಧ್ಯಾಹ್ನದ ಬಿಸಿಯೂಟ ಮಾಡುತ್ತಿದ್ದಾರೆ. ಹೊಸ ಕಟ್ಟಡಕ್ಕೆ ಅನುದಾನ ಬಂದಿದೆ ಎಂದು ಹೇಳುತ್ತಿದ್ದಾರೆ. ಆದರೆ ಕೆಲಸ ಯಾವಾಗ ಶುರು ಮಾಡುತ್ತಾರೆ ಎಂಬುದನ್ನು ಯಾರೂ ಸ್ಪಷ್ಟವಾಗಿ ಹೇಳುತ್ತಿಲ್ಲ’ ಎಂದು ಶಾಲಾ ಸಮಿತಿ ಅಧ್ಯಕ್ಷ ಚಂದ್ರಕಾಂತ ರಾಠೋಡ್ ತಿಳಿಸಿದ್ದಾರೆ.
ಈ ಶೈಕ್ಷಣಿಕ ವರ್ಷ ಆರಂಭವಾಗುವುದರಲ್ಲಿ ಶಾಲೆಗೆ ಹೊಸ ಕಟ್ಟಡ ಆಗಬೇಕು. ನಮ್ಮ ತಾಂಡಾದಿಂದ ವಡಗಾಂವ್ 2 ಕಿ.ಮೀ ದೂರ ಇದ್ದು, ಹೈಸ್ಕೂಲ್‌ಗೆ ಅಲ್ಲಿಗೆ ಹೋಗಲು ಬಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಅವರು ಬೇಡಿಕೆ ಮಂಡಿಸಿದ್ದಾರೆ.
ಶಂಕರ ತಾಂಡಾ ಪ್ರಾಥಮಿಕ ಶಾಲೆ ಕಟ್ಟಡ ಹಳೆಯದಾಗಿರುವುದರಿಂದ ಅದನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಮೂರು ಹೊಸ ಕೊಠಡಿ ನಿರ್ಮಾಣ ಆಗಲಿವೆ. ಇದಕ್ಕಾಗಿ ಅನುದಾನವೂ ಬಂದಿದೆ ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ. ಆದಷ್ಟು ಬೇಗ ಹೊಸ ಕಟ್ಟಡ ಆಗುತ್ತದೆ. ಅಲ್ಲಿಯ ತನಕ ಮಕ್ಕಳಿಗೆ ಅಂಗನವಾಡಿಯಲ್ಲಿ ಪಾಠ ಮಾಡಲು ತಿಳಿಸಲಾಗಿದೆ ಎಂದು ವಡಗಾಂವ್ ಸಿಆರ್‌ಪಿ ರವೀಂದ್ರ ಡಿಗ್ಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.