ADVERTISEMENT

ಬಸವಕಲ್ಯಾಣ: ಶರಣ ವಿಜಯೋತ್ಸವಕ್ಕೆ ದಶಕದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 6:13 IST
Last Updated 20 ಸೆಪ್ಟೆಂಬರ್ 2025, 6:13 IST
ಅಕ್ಕ ಗಂಗಾಂಬಿಕಾ
ಅಕ್ಕ ಗಂಗಾಂಬಿಕಾ   

ಬಸವಕಲ್ಯಾಣ: ಮಹಾಶರಣ ಹರಳಯ್ಯನವರು 12ನೇ ಶತಮಾನದ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಿಶ್ವಖ್ಯಾತಿಯ ಕಲ್ಯಾಣ ಕ್ರಾಂತಿಗೆ ಕಾರಣಿಕರ್ತರು. ಅವರ ಸ್ಮಾರಕವಾದ ನಗರದ ಗವಿಯಲ್ಲಿ ಆಯೋಜಿಸುವ ಶರಣ ವಿಜಯೋತ್ಸವ, ನಾಡಹಬ್ಬ ಮತ್ತು ಹುತಾತ್ಮ ದಿನಾಚರಣೆ ಈ ಸಲ ದಶಕದ ಸಂಭ್ರಮದಲ್ಲಿದೆ.

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಇಲ್ಲಿ ಗೋಷ್ಠಿಗಳು ನಡೆಯಲಿವೆ.

ಹರಳಯ್ಯ ವೃತ್ತದಿಂದ ಬಸವ ವನದ ಪಕ್ಕದ ರಸ್ತೆಯಿಂದ ಈ ಗವಿಗೆ ತಲುಪಬಹುದಾಗಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಇಲ್ಲಿ ಕಲ್ಲಿನ ಮಂಟಪ ಕಟ್ಟಿ ವಿಕಾಸ ಕಾರ್ಯ ಕೈಗೊಂಡಿದ್ದರಿಂದ ಈಚೆಗೆ ಇದಕ್ಕೆ ಹೊಸಕಳೆ ಪ್ರಾಪ್ತವಾಗಿದೆ. ಇಲ್ಲಿನ ಹೆಸಿರು ವನದ ಆಹ್ಲಾದಕರ ವಾತಾವರಣದಲ್ಲಿ ಪ್ರತಿದಿನ ವಿವಿಧ ಚಟುವಟಿಕೆಗಳು ನಡೆಯಲಿವೆ.

ADVERTISEMENT

ಸಮಾನತೆ ತಂದು, ಭಾತೃತ್ವ ಭಾವನೆ ಮೂಡಿಸಿ ಜನರು ಕಾಯಕ ಮತ್ತು ದಾಸೋಹಕ್ಕೆ ಅಣಿಯಾಗುವಂತೆ ಸಮಾಜವನ್ನು ರೂಪಿಸುವ ಮಹತ್ತರ ಕಾರ್ಯಕ್ಕೆ 12ನೇ ಶತಮಾನದ ಬಸವಾದಿ ಶರಣರು ಪ್ರಯತ್ನಿಸಿದ್ದರು. ಆ ಸಂದೇಶ ಈ ಹತ್ತು ದಿನಗಳ ಸಮಾರಂಭದ ಮೂಲಕ ಬಿತ್ತರಿಸಲಾಗುತ್ತದೆ.

ಕಾರ್ಯಕ್ರಮ: ಸೆಪ್ಟೆಂಬರ್ 22ರಂದು ಸಂಜೆ 6 ಗಂಟೆಗೆ ಶರಣ ವಿಜಯೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಜೇವರ್ಗಿಯ ಶಿವಾನಂದ ಸ್ವಾಮೀಜಿ, ಅಥಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಅಕ್ಕ ಗಂಗಾಂಬಿಕಾ ನೇತೃತ್ವ ವಹಿಸುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು.

ಸೆಪ್ಟೆಂಬರ್ 23ರಂದು ವಚನ ಓದು ಮತ್ತು ಮಕ್ಕಳ ಸಮಾವೇಶ ನಡೆಯುವುದು. ಸೆಪ್ಟೆಂಬರ್ 24ರಂದು ಸಂಜೆ 6 ಗಂಟೆಗೆ ಮಹಾಶಕ್ತಿಕೂಟಗಳ ಸಮಾವೇಶ ನಡೆಯುವುದು. ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಉದ್ಘಾಟಿಸುವರು. ಸೆಪ್ಟೆಂಬರ್ 25ರಂದು ಜನಪದರು ಕಂಡ ಶರಣರು ಗೋಷ್ಠಿ ನಡೆಯುವುದು. ಸೆಪ್ಟೆಂಬರ್ 26ಕ್ಕೆ ಹಿರಿಯ ನಾಗರಿಕರ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಸೆಪ್ಟೆಂಬರ್ 27ರಂದು ಸೂತ್ರದ ಗೊಂಬೆಯಾಟ ಗೊಷ್ಠಿ ನಡೆಯುವುದು. ಇಸ್ರೊ ಗ್ರೂಪ್ ನಿರ್ದೇಶಕಿ ರೂಪಾ ಎಂ.ವಿ ಅನುಭಾವ ನೀಡುವರು.

ಸೆಪ್ಟೆಂಬರ್ 28ರಂದು ಬೆಲ್ದಾಳ ಸಿದ್ಧರಾಮ ಶರಣರ ನೇತೃತ್ವದಲ್ಲಿ ‘ಲಿಂಗಾಯತ ಸ್ವತಂತ್ರ ಧರ್ಮ’ ಗೋಷ್ಠಿ ನಡೆಯುವುದು. ಸೆಪ್ಟೆಂಬರ್ 29ಕ್ಕೆ ‘ಮರೆತುಹೋದ ಲಿಂಗಾಯತ ಮಹಾಸಾಮ್ರಾಜ್ಯ ವಿಜಯನಗರ’ ಗೋಷ್ಠಿ ಆಯೋಜಿಸಲಾಗುತ್ತದೆ. ಮಹಾರಾಷ್ಟ್ರದ ವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್ ಡಾ.ಅಮರನಾಥ ಸೋಲಪುರೆ ಅನುಭಾವ ನೀಡಲಿದ್ದಾರೆ. ಸೆಪ್ಟೆಂಬರ್ 30ಕ್ಕೆ ‘ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರದ ಬಸವ ಬೆಳಕು’ ಗೋಷ್ಠಿ ನಡೆಯುವುದು. ಸಂಸದ ಸಾಗರ್ ಖಂಡ್ರೆ ಉದ್ಘಾಟಿಸುವರು.

ಅಕ್ಟೋಬರ್ 1ರಂದು ಹುತಾತ್ಮ ದಿನಾಚರಣೆ ನಡೆಯುವುದು. ಅಕ್ಟೋಬರ್ 2ರಂದು ಬೆಳಿಗ್ಗೆ ಕೋಟೆಯಿಂದ ಮುಖ್ಯರಸ್ತೆಯ ಮೂಲಕ ಎಳೆಹೂಟೆ ಶಿಕ್ಷೆಯ ಪ್ರಾತ್ಯಕ್ಷಿಕೆಯ ಮೆರವಣಿಗೆ ನಡೆಯುವುದು. ಸಂಜೆ 6 ಗಂಟೆಗೆ ಸಮಾರೋಪ ಮತ್ತು ಶರಣ ವಿಜಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿರುತ್ತದೆ. ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅನುಭವ ಮಂಟಪದ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರಿಗೆ ಪ್ರಶಸ್ತಿ ನೀಡಲಾಗುತ್ತದೆ. ನಿಡಸೋಸಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರತಿದಿನ ವಚನ ಗಾಯನ, ನೃತ್ಯ ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ನಿತ್ಯವೂ ಅನ್ನದಾಸೋಹವಿರುತ್ತದೆ ಎಂದು ತಿಳಿಸಲಾಗಿದೆ.

ಪ್ರೊ.ಸಿ.ಬಿ.ಪ್ರತಾಪುರೆ
ಪ್ರೊ.ಎಸ್.ಜಿ.ಕರ್ಣೆ
ಬಸವಕಲ್ಯಾಣದಲ್ಲಿರುವ ಮಹಾಶರಣ ಹರಳಯ್ಯನವರ ಸ್ಮಾರಕ ಮತ್ತು ಗುಹೆ
ಗುರು ಬಸವಣ್ಣನವರು ಕಲ್ಯಾಣದ ನೆಲದಿಂದ ಸಾರಿರುವ ಮಾನವೀಯ ಮೌಲ್ಯ ಸೌಹಾರ್ದ ಶರಣ ಸಂಸ್ಕೃತಿ ಬಿತ್ತರಿಸುವ ಈ ಸಮಾರಂಭ ಹತ್ತನೇಯದ್ದಾಗಿದೆಅಕ್ಕ ಗಂಗಾಂಬಿಕಾ ಅಧ್ಯಕ್ಷೆ ಲಿಂಗವಂತ ಹರಳಯ್ಯ ಪೀಠ ಶರಣರು ಮರಣವೇ ಮಹಾನವಮಿ ಎಂದರು. ಅಕ್ಕ ಗಂಗಾಂಬಿಕಾ ಅವರು ದಸರಾದಲ್ಲಿ ಕಾರ್ಯಕ್ರಮ ನಡೆಸಿ ಶರಣತತ್ವ ದರ್ಶನ ಮಾಡಿಸುತ್ತಿರುವುದು ಸಂದರ್ಭೋಚಿತವಾಗಿದೆಪ್ರೊ.ಸಿ.ಬಿ.ಪ್ರತಾಪುರೆ ಅಧ್ಯಕ್ಷ ಹಿರಿಯ ನಾಗರಿಕರ ವೇದಿಕೆ ಶರಣ ಹರಳಯ್ಯನವರು ಎಳೆಹೂಟೆ ಶಿಕ್ಷೆ ಅನುಭವಿಸಿದ್ದರು. ಅವರ ಗವಿಯಲ್ಲಿ ಹುತಾತ್ಮ ದಿನಾಚರಣೆ ನಡೆಸುತ್ತಿರುವುದು ಅವರಿಗೆ ಸಲ್ಲಿಸಿದ ನಿಜ ಗೌರವವಾಗಿದೆ.
ಪ್ರೊ.ಎಸ್.ಜಿ.ಕರ್ಣೆ ನಿವೃತ್ತ ಪ್ರಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.