ADVERTISEMENT

ಜಿಲ್ಲೆಯಲ್ಲಿ ಸರಳ ಸಂಕ್ರಾಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 16:13 IST
Last Updated 14 ಜನವರಿ 2022, 16:13 IST
ಬೀದರ್‌ ತಾಲ್ಲೂಕಿನ ಬಾವಗಿ ಗ್ರಾಮದ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಮಕ್ಕಳು ಎಳ್ಳು, ಸಕ್ಕರೆ ಕೊಟ್ಟರು
ಬೀದರ್‌ ತಾಲ್ಲೂಕಿನ ಬಾವಗಿ ಗ್ರಾಮದ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಮಕ್ಕಳು ಎಳ್ಳು, ಸಕ್ಕರೆ ಕೊಟ್ಟರು   

ಬೀದರ್: ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಮತ್ತೆ ನೂರಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಸಂಕ್ರಾಂತಿ ವರ್ಷದ ಮೊದಲ ಹಬ್ಬವಾದರೂ ಹೆಚ್ಚು ಜನ ಮನೆಗಳಿಂದ ಹೊರಗೆ ಬರಲಿಲ್ಲ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ಮಹಿಳೆಯರು ಮನೆ ಅಂಗಳದಲ್ಲಿ ಚಿತ್ತಾಕರ್ಷಕ ರಂಗೋಲಿ ಬಿಡಿಸಿದರು. ಮನೆ ಮಂದಿಯಲ್ಲ ಮೈಗೆ ಎಳ್ಳಿನ ಹಿಟ್ಟು ಹಚ್ಚಿಕೊಂಡು ಸ್ನಾನ ಮಾಡಿದರು. ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಭಾವದಿಂದ ನೈವೇದ್ಯ ಸಮರ್ಪಿಸಿದರು.

ಮಕ್ಕಳು, ಮಹಿಳೆಯರು ಎಳ್ಳು-ಸಕ್ಕರೆ, ಪೇರಲ, ಬಾರೆಹಣ್ಣು, ಕ್ಯಾರೆಹಣ್ಣು, ಕಬ್ಬು ಸವಿದರು. ಕುಟುಂಬದ ಸದಸ್ಯರೊಂದಿಗೆ ಶೇಂಗಾ ಹೋಳಿಗೆ, ಸಿಹಿ ತಿನಿಸುಗಳೊಂದಿಗೆ ಸಾಮೂಹಿಕ ಭೋಜನ ಮಾಡಿದರು. ಸಂಜೆ ಕೆಲ ಕಡೆ ಯುವಕರು ಹಾಗೂ ಮಕ್ಕಳು ಗಾಳಿ ಪಟ ಹಾರಿಸಿ ಸಂಭ್ರಮಿಸಿದರು.

ADVERTISEMENT

ಗ್ರಾಮೀಣ ಪ್ರದೇಶದಲ್ಲಿ ರೈತರು ಹೊಲಗಳಲ್ಲಿ ಬೆಳೆಗಳಿಗೆ ಪೂಜೆ ಸಲ್ಲಿಸಿದರು. ಕೆಲ ಗ್ರಾಮಗಳಲ್ಲಿ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಿದರು.

ನಗರದಲ್ಲಿ ಮಕ್ಕಳು ಹೊಸಬಟ್ಟೆ ಧರಿಸಿ ಗುಂಪುಗೂಡಿ ಮನೆ ಮನೆಗೆ ತೆರಳಿ ಎಳ್ಳು ವಿತರಿಸಿ ಸಂಭ್ರಮಿಸಿದರು. ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.