ADVERTISEMENT

ಬೀದರ್ | ಆರು ಮಂದಿ ಸಾವು: ಮನೆ ಮಾಡಿದ ಸೂತಕ

ಜಿಲ್ಲೆಯ ಜನರಿಗೆ ಆಘಾತ : ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯದ ಚಿಕಿತ್ಸೆ

ಚಂದ್ರಕಾಂತ ಮಸಾನಿ
Published 4 ಜುಲೈ 2020, 15:29 IST
Last Updated 4 ಜುಲೈ 2020, 15:29 IST
ಬೀದರ್‌ನ ಕೋವಿಡ್‌ ಆಸ್ಪತ್ರೆಯ ಹಿಂಬದಿಯ ಕಿಟಕಿಯಿಂದ ಕೋವಿಡ್‌ 19 ಸೋಂಕಿತರನ್ನು ಮಾತನಾಡಿಸುತ್ತಿರುವ ಸಂಬಂಧಿಗಳು
ಬೀದರ್‌ನ ಕೋವಿಡ್‌ ಆಸ್ಪತ್ರೆಯ ಹಿಂಬದಿಯ ಕಿಟಕಿಯಿಂದ ಕೋವಿಡ್‌ 19 ಸೋಂಕಿತರನ್ನು ಮಾತನಾಡಿಸುತ್ತಿರುವ ಸಂಬಂಧಿಗಳು   

ಬೀದರ್: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೂ, ಜನ ಗಂಭೀರವಾಗಿಲ್ಲ. ಜಿಲ್ಲಾಡಳಿತದ ಬಿಗುವೂ ಸಡಿಲವಾಗಿದೆ. ಆರಂಭದಲ್ಲಿ ಪ್ರತಿ ದಿನ ಇಬ್ಬರು, ಮೂವರು ಸೋಂಕಿತರು ಮಾತ್ರ ಪತ್ತೆಯಾಗುತ್ತಿದ್ದರು. ಒಂದೂವರೆ ತಿಂಗಳಿಂದ ನಿತ್ಯ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೇ ಇದೆ.

ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ 19 ಸೋಂಕಿತರ ಸಂಖ್ಯೆ 675ಕ್ಕೆ ಏರಿದೆ. ಬ್ರಿಮ್ಸ್‌ ಆಸ್ಪತ್ರೆ ವಿಶೇಷ ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದ 512 ಜನ ಗುಣಮುಖರಾಗಿದ್ದಾರೆ. 187 ಪ್ರಕರಣಗಳು ಸಕ್ರೀಯವಾಗಿವೆ. ಮೃತರ ಸಂಖ್ಯೆಯಲ್ಲಿ ಬೀದರ್‌ ಜಿಲ್ಲೆ ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಕೋವಿಡ್ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ಸೋಂಕಿತರನ್ನು ಭೇಟಿಯಾಗಲು ನಿತ್ಯ ನೂರಾರು ಜನ ಬರುತ್ತಿದ್ದಾರೆ. ಬ್ರಿಮ್ಸ್‌ ಅಧಿಕಾರಿಗಳು ಗಂಭೀರವಾಗಿಲ್ಲ. ಆಸ್ಪತ್ರೆಯ ಮುಂಭಾಗದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳನ್ನು ನಿಯೋಜಿಸಿದ್ದರೂ ಜನ ಆಸ್ಪತ್ರೆಯ ಹಿಂಭಾಗದಿಂದ ಬಂದು ಸೋಂಕಿತರ ಕ್ಷೇಮ ವಿಚಾರಿಸುತ್ತಿದ್ದಾರೆ.

ADVERTISEMENT

ಸಂಬಂಧಿಕರು ಸೋಂಕಿತರ ಜತೆಗೆ ಮಾತನಾಡಿ ಆವರಣದಲ್ಲಿ ಸುತ್ತಾಡಿ ಮನೆಗಳಿಗೆ ತೆರಳುತ್ತಿದ್ದಾರೆ. ಅನೇಕ ಜನ ಮಾಸ್ಕ್‌ ಸಹ ಹಾಕಿಕೊಳ್ಳುತ್ತಿಲ್ಲ. ಬ್ರಿಮ್ಸ್‌ ಸಿಬ್ಬಂದಿ ನೋಡಿಯೂ ನೋಡಿದಂತೆ ವರ್ತಿಸುತ್ತಿದ್ದಾರೆ. ಈಗಾಗಲೇ ಕೋವಿಡ್‌ 19 ಸೋಂಕು ಸಮುದಾಯಕ್ಕೆ ಪ್ರವೇಶ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಖಾಸಗಿ ಆಸ್ಪತ್ರೆಗಳು ಜ್ವರ ಹಾಗೂ ನೆಗಡಿ ಬಂದ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸ್ಪಷ್ಟವಾಗಿ ನಿರಾಕರಿಸುತ್ತಿವೆ. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಹೋದಾಗ ನನಗೆ ಚಿಕಿತ್ಸೆ ನೀಡಲಿಲ್ಲ. ಜಿಲ್ಲಾಡಳಿತ ಜನ ಸಾಮಾನ್ಯರಿಗೆ ಆರೋಗ್ಯ ಸೇವೆ ಒದಗಿಸುವ ದಿಸೆಯಲ್ಲಿ ಕ್ರಮಕೈಗೊಳ್ಳಬೇಕು’ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಬುರಾವ್‌ ಹೊನ್ನಾ ಮನವಿ ಮಾಡಿದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಸೌಲಭ್ಯಗಳಿಲ್ಲದ ಕಣ್ಣಿನ ಆಸ್ಪತ್ರೆಗಳ ಪಟ್ಟಿ ಸಿದ್ಧಪಡಿಸಿ ಕೋವಿಡ್ ಆಸ್ಪತ್ರೆಗಳಾಗಿ ಪರಿಗಣಿಸಬಹುದು ಎಂದು ತಿಳಿಸುವ ಮೂಲಕ ಸರ್ಕಾರದ ದಿಕ್ಕು ತಪ್ಪಿಸುವ ಕಾರ್ಯ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.