ADVERTISEMENT

ಚಿಟಗುಪ್ಪ: ಇತರ ದೇಶಗಳಿಂದ ಮರಳಿದವರಿಗೆ ಪ್ರತ್ಯೇಕ ವಾರ್ಡ್ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 10:04 IST
Last Updated 18 ಮಾರ್ಚ್ 2020, 10:04 IST
ಚಿಟಗುಪ್ಪ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್–19 ಸೋಂಕಿತರ ಚಿಕಿತ್ಸೆಗಾಗಿ ವಾರ್ಡ್‌ ನಿರ್ಮಿಸಲಾಗಿದೆ
ಚಿಟಗುಪ್ಪ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್–19 ಸೋಂಕಿತರ ಚಿಕಿತ್ಸೆಗಾಗಿ ವಾರ್ಡ್‌ ನಿರ್ಮಿಸಲಾಗಿದೆ   

ಚಿಟಗುಪ್ಪ: ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಇಲ್ಲಿಯವರೆಗೆ ದುಬೈ, ಅಮೆರಿಕ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಕುವೈತ್ ಸೇರಿದಂತೆ ಇತರ ದೇಶಗಳಿಂದ ಮರಳಿ ಬಂದಿರುವ 6 ಜನರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಸೋಂಕಿತರ ಚಿಕಿತ್ಸೆಗೆ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎರಡು ಬೆಡ್‍ಗಳ ಪ್ರತ್ಯೇಕ ವಾರ್ಡ್ ನಿರ್ಮಿಸಲಾಗಿದೆ.

ಕೊರೊನಾ ತಡೆಯಲು ಅಗತ್ಯವಾಗಿರುವ ಎಲ್ಲ ಮುಂಜಾಗ್ರತಾ ಕ್ರಮಗಳ ಬಗ್ಗೆ ಈಗಾಗಲೇ ಚಿಟಗುಪ್ಪ, ಮನ್ನಾಎಖ್ಖೇಳಿ, ನಿರ್ಣಾ ಆಸ್ಪತ್ರೆಗಳಲ್ಲಿ ಜಾಗೃತಿ ಸಭೆ ನಡೆಸಲಾಗಿದೆ.

ಆಯಾ ಗ್ರಾಮಗಳ ಅಭಿವೃದ್ಧಿ ಅಧಿಕಾರಿಗಳಿಂದ ವಿದೇಶದಿಂದ ವಾಪಸ್ ಆಗಿರುವ ಜನರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಪ್ರತಿನಿತ್ಯ ಆರೋಗ್ಯ ಇಲಾಖೆ ಸಿಬ್ಬಂದಿ ವಿದೇಶದಿಂದ ಹಿಂದಿರುಗಿರುವ ವ್ಯಕ್ತಿಗಳ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಅವರ ಮನೆಯವರಿಗೂ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಮನೆಯಲ್ಲಿಯೇ ಕೆಲ ದಿನಗಳವರೆಗೆ ಪ್ರತ್ಯೇಕವಾಗಿರಲು ಸಲಹೆ ನೀಡಿಲಾಗಿದೆ ಎಂದು ಮುಖ್ಯವೈದ್ಯಾಧಿಕಾರಿ ಡಾ.ವೀರನಾಥ್ ಕನಕ್ ತಿಳಿಸಿದ್ದಾರೆ.

ಪಟ್ಟಣ ಆಸ್ಪತ್ರೆಯಲ್ಲಿ ನಿತ್ಯ 200 ರಿಂದ 300 ಹೊರ ರೋಗಿಗಳು ಬರುತ್ತಿದ್ದರು. ಆದರೆ, ಈಗ ಸಾರ್ವಜನಿಕರು ಹೆಚ್ಚೆಚ್ಚು ಕೊರೊನಾ ಕುರಿತು ಜಾಗೃತಿ ವಹಿಸುತ್ತಿರುವುದರಿಂದ 100 ರಿಂದ 150 ಜನ ಮಾತ್ರ ಬರುತ್ತಿದ್ದಾರೆ. ಸಾಮಾನ್ಯ ನೆಗಡಿ, ಕೆಮ್ಮು, ಜ್ವರ ಇದ್ದರೂ ತುಂಬಾ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅಂತಹವರಿಗೆ ನಮ್ಮ ಆಸ್ಪತ್ರೆಯ ಎಲ್ಲ ಸಿಬ್ಬಂದಿ ಚಿಕಿತ್ಸೆ ನೀಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡರೆ ಪೋಷಕರು ನಿರ್ಲಕ್ಷ್ಯ ವಹಿಸದೇ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಬಂದು ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.