ADVERTISEMENT

ಯುಗಾದಿ: ದೇಗುಲಗಳಲ್ಲಿ ವಿಶೇಷ ಪೂಜೆ, ಭಜನೆ

ಧಾರ್ಮಿಕ ದಿನಾಚರಣೆ ಇಂದು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 14:52 IST
Last Updated 1 ಏಪ್ರಿಲ್ 2022, 14:52 IST
ನರಸಿಂಹ ಸ್ವಾಮಿ
ನರಸಿಂಹ ಸ್ವಾಮಿ   

ಬೀದರ್: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳ‍ಪಡುವ ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ಇದೇ ಮೊದಲ ಬಾರಿಗೆ ಯುಗಾದಿ ಹಬ್ಬವನ್ನು ಧಾರ್ಮಿಕ ದಿನ ಎಂದು ಆಚರಿಸಲು ನಿರ್ಧರಿಸಲಾಗಿದೆ.

ನಗರದ ಹೊರವಲಯದಲ್ಲಿರುವ ನರಸಿಂಹ ಝರಣಿ ಗುಹಾ ದೇಗುಲ, ಹೊನ್ನಿಕೇರಿ ಸಿದ್ಧೇಶ್ವರ ದೇವಸ್ಥಾನ ಹಾಗೂ ಭಾಲ್ಕಿ ತಾಲ್ಲೂಕಿನ ಖಾನಾಪುರ ಸಮೀಪದ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಶನಿವಾರ ಯುಗಾದಿ ದಿನ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ.

ನರಸಿಂಹ ಝರಣಿ ದೇವಸ್ಥಾನದಲ್ಲಿ ಏಪ್ರಿಲ್ 2 ರಂದು ಧಾರ್ಮಿಕ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಅನಂತರಾವ್‌ ಕುಲಕರ್ಣಿ ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯ ಎಲ್ಲ ದೇವಾಲಯಗಳಲ್ಲಿ ಮೊದಲ ಬಾರಿಗೆ ಯುಗಾದಿ ಹಬ್ಬವನ್ನು ಧಾರ್ಮಿಕ ದಿನ ಎಂದು ಆದರಿಸಲು ನಿರ್ಧರಿಸಲಾಗಿದೆ. ದೇವಾಲಯದ ಆಚಾರ, ವಿಚಾರ ಸಂಪ್ರದಾಯದಂತೆ ಅದ್ಧೂರಿಯಾಗಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ಶುಕ್ರವಾರ ಬೆಳಿಗ್ಗೆ ನರಸಿಂಹ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳವಾದ್ಯ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಬೇವು ಬೆಲ್ಲ ದೇವರಿಗೆ ಸಮರ್ಪಿಸಲಾಗುವುದು ಎಂದು ಕುಲಕರ್ಣಿ ಹೇಳಿದ್ದಾರೆ.

ಬೆಳಿಗ್ಗೆ ಹೊಸ ಮಾರಾಟ ಮಳಿಗೆಗಳು ಕಾರ್ಯಾರಂಭ ಮಾಡಲಾಗಿದೆ. ಈಗಾಗಲೇ ದೇಗುಲ ಬರುವ ಭಕ್ತರಿಗೆ ಬೂಂದಿ ಲಾಡು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತಿದೆ. ಶನಿವಾರ ಯುಗಾದಿ ಇರುವ ಕಾರಣ ನೆರೆಯ ರಾಜ್ಯಗಳಿಂದ ನರಸಿಂಹಸ್ವಾಮಿ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ. ಹೀಗಾಗಿ ದೇವಸ್ಥಾನದ ಆವರಣದಲ್ಲಿ ಉಚಿತ ಅನ್ನ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ಹೂವು ಹಣ್ಣು ಖರೀದಿ:ಶುಕ್ರವಾರ ಸಂಜೆ ಬಹುತೇಕರು ಮಾರು ಕಟ್ಟೆಗೆ ತೆರಳಿ ಬೇವು ಬೆಲ್ಲ, ಹೂ ಖರೀದಿಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿತು. ಮಾವಿನ ಎಲೆಗಳು ಹಾಗೂ ಬೇವಿನ ಎಲೆಗಳು ಮಾರಾಟಕ್ಕೆ ಬಂದಿವೆ. ದೇವರ ಪೂಜೆಗೆ ಜನ ಹೂವು, ಹಣ್ಣು ಖರೀದಿಸಿದರು.

ಬಟ್ಟೆ ಅಂಗಡಿಗಳಲ್ಲಿ ಸ್ವಲ್ಪ ಮಟ್ಟಿಗೆ ಖರೀದಿ ನಡೆಯಿತು. ದಸರಾ ಹಾಗೂ ದೀ‍ಪಾವಳಿ ಸಂದರ್ಭದಲ್ಲಿ ಇರುವಷ್ಟು ಖರೀದಿ ಭರಾಟೆ ಕಂಡು ಬರಲಿಲ್ಲ. ಯುಗಾದಿ ಹಬ್ಬಕ್ಕೆ ಎಲೆಕ್ಟ್ರಾನಿಕ್ ಉಪಕರಣಗಳ ಮಳಿಗೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.