ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ತಾಕೀತು

ಶಾಸಕ ಖಂಡ್ರೆ ಅಧ್ಯಕ್ಷತೆಯಲ್ಲಿ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 11:49 IST
Last Updated 4 ಜನವರಿ 2020, 11:49 IST
ಭಾಲ್ಕಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಈಶ್ವರ ಖಂಡ್ರೆ ಮಾತನಾಡಿದರು
ಭಾಲ್ಕಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಈಶ್ವರ ಖಂಡ್ರೆ ಮಾತನಾಡಿದರು   

ಭಾಲ್ಕಿ: ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಭಾಲ್ಕಿ ತಾಲ್ಲೂಕು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿರಬೇಕು ಎಂದು ಶಾಸಕ ಈಶ್ವರ ಖಂಡ್ರೆ ಮುಖ್ಯಶಿಕ್ಷಕರಿಗೆ ತಾಕೀತು ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸರ್ಕಾರಿ, ಅನುದಾನಿತ ಮುಖ್ಯ ಶಿಕ್ಷಕರ ಶೈಕ್ಷಣಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿವರ್ಷದ ಫಲಿತಾಂಶದಲ್ಲಿ ಭಾಲ್ಕಿ ತಾಲೂಕು ಜಿಲ್ಲೆಗೆ ಪ್ರಥಮವಾಗಿರುತ್ತಿತ್ತು. ಆದರೆ ಕಳೆದ ಸಾಲಿನಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಈ ಸಾಲಿನ ಫಲಿತಾಂಶ ಜಿಲ್ಲೆಗೆ ಪ್ರಥಮವಾಗಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ADVERTISEMENT

ಅಧಿಕಾರಿಗಳು, ರಾಜಕಾರಣಿಗಳು ಶೈಕ್ಷಣಿಕ ಸುಧಾರಣೆಗೆ ಮಾರ್ಗದರ್ಶನ ಮಾಡಬಹುದು. ಆದರೆ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಮುಖ್ಯಶಿಕ್ಷಕರು, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸರ್ಕಾರಿ ಪ್ರೌಢ ಶಾಲೆಗಳಿಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಶಿಕ್ಷಕರು ಯಾವುದೇ ನೆಪ ಹೇಳದೆ ಶಿಕ್ಷಕ ದತ್ತು ಯೋಜನೆಯಲ್ಲಿ ದತ್ತು ಪಡೆದ ವಿದ್ಯಾರ್ಥಿ ಅನುತ್ತೀರ್ಣನಾಗದಂತೆ ನೋಡಿಕೊಳ್ಳಬೇಕು. ಶಿಕ್ಷಕರು ತಮ್ಮ ಸ್ವಂತ ಮಕ್ಕಳಂತೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ನೋಡಿಕೊಳ್ಳಬೇಕು. ಅಂದಾಗ ಮಾತ್ರ ಸಮಗ್ರ ವಿದ್ಯಾಭ್ಯಾಸ ಸಾಧ್ಯ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಮದಕಟ್ಟಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಮಹಾದೇವ ಸಜ್ಜನ್ ಇತ್ತೀಚೆಗೆ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳ ಬಿಸಿಯೂಟದ ಅಡುಗೆ ಕೋಣೆಗಳಲ್ಲಿ ಸರಣಿ ಕಳ್ಳತನ ನಡೆಯುತ್ತಿವೆ ಎಂದು ಶಾಸಕರ ಗಮನಕ್ಕೆ ತಂದರು. ಅದಕ್ಕೆ ಶಾಸಕರು ಹೆಚ್ಚಿನ ಗಸ್ತು ಕಾರ್ಯ ನಡೆಸಲು ಡಿವೈಎಸ್‍ಪಿ ಅವರಿಗೆ ಸೂಚಿಸಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾದಿಕಾರಿ ಸಿದ್ದವೀರಯ್ಯಾ ರುದನೂರ ಪ್ರಾಸ್ತಾವಿಕ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ತಾಲ್ಲೂಕಿನಲ್ಲಿ 2235 ವಿದ್ಯಾರ್ಥಿಗಳು, 1817 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 4052 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲಿದ್ದಾರೆ ಎಂದು ತಿಳಿಸಿದರು.

ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವ್ಹಾಣ ಇದ್ದರು.

ಬಾಲಾಜಿ ರಾಜೂರೆ ನಿರೂಪಿಸಿದರು. ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.