ADVERTISEMENT

‘ಬ್ರಿಮ್ಸ್‌ನಲ್ಲಿ ಕ್ಯಾಥ್‌ಲ್ಯಾಬ್‌ ಆರಂಭಿಸಿ’

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 2:34 IST
Last Updated 4 ಜೂನ್ 2021, 2:34 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಭಾಲ್ಕಿ: ಬ್ರಿಮ್ಸ್‌ನಲ್ಲಿ ಹೃದ್ರೋಗ ಸಂಬಂಧಿತ ಕ್ಯಾಥ್‌ಲ್ಯಾಬ್‌ ಸ್ಥಾಪಿಸಲು ತಾವು ಸಚಿವರಾಗಿದ್ದ ಅವಧಿಯಲ್ಲೇ ಮಂಜೂರಾತಿ ದೊರಕಿಸಿ ₹7.5 ಕೋಟಿ ಬಿಡುಗಡೆ ಆಗಿದ್ದರೂ, ಇನ್ನೂ ಲ್ಯಾಬ್ ಕಾರ್ಯಗತವಾಗಿಲ್ಲ ಎಂದು ಶಾಸಕ ಈಶ್ವರ ಖಂಡ್ರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಜಯದೇವ ಆಸ್ಪತ್ರೆ ಮಾದರಿಯಲ್ಲೇ ಬೀದರ್ ಜಿಲ್ಲಾ ಆಸ್ಪತ್ರೆ ಬ್ರಿಮ್ಸ್‌ನಲ್ಲಿ ಹೃದ್ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸರ್ಕಾರದ ಮೇಲೆ ಒತ್ತಡ ಹೇರಿ ಮೂರು ವರ್ಷಗಳ ಹಿಂದೆ ಹಣ ಬಿಡುಗಡೆ ಮಾಡಿಸಿದ್ದರೂ ಸರ್ಕಾರ ಕ್ಯಾಥ್‌ಲ್ಯಾಬ್‌ ಸ್ಥಾಪನೆಗೆ ಆಸಕ್ತಿ ತೋರಿಲ್ಲ’ ಎಂದು ಆರೋಪಿಸಿದ್ದಾರೆ.

‘ಕೊರೊನಾ ಸೋಂಕಿತರಲ್ಲಿ ಬಹುತೇಕರು ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆಯಿಂದ ಸಾವಿಗೀಡಾಗಿ ದ್ದಾರೆ. ಈ ಲ್ಯಾಬ್ ಕಾರ್ಯಾರಂಭ ಮಾಡಿದ್ದರೆ, ಈ ಸಾವು ನೋವಿನ ಸಂಖ್ಯೆಯನ್ನು ತಗ್ಗಿಸಬಹುದಾಗಿತ್ತು. 3ನೇ ಅಲೆ ಬರುವ ಮೊದಲೇ ಲ್ಯಾಬ್ ನಿರ್ಮಿಸಬೇಕು’ ಎಂದು ಆರೋಗ್ಯ ಸಚಿವ ಡಾ. ಸುಧಾಕರ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

‘ಸರ್ಕಾರ ಬೀದರ್ ಜಿಲ್ಲೆಯನ್ನು ಇಷ್ಟು ಕಡೆಗಣಿಸಿರುವುದಾದರೂ ಏಕೆ? ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬೀದರ್ ಅಭಿವೃದ್ಧಿಗೆ ಸರ್ಕಾರ ಗಮನಹರಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇನ್ನೂ ವಿಳಂಬ ಮಾಡದೆ ಅಗತ್ಯ ವೈದ್ಯಕೀಯ ಪರಿಕರಗಳನ್ನು ಒದಗಿಸಿ ಜನರ ರಕ್ಷಣಗೆ ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.

‘ದೊರೆಯದ ಚುಚ್ಚುಮದ್ದು’

‘ರಾಜ್ಯದ ಡಿ.ವಿ.ಸದಾನಂದ ಗೌಡ ಅವರು ಕೇಂದ್ರ ಸಚಿವರಾಗಿದ್ದರೂ ಕರ್ನಾಟಕಕ್ಕೆ ಸೂಕ್ತ ಪ್ರಮಾಣದಲ್ಲಿ ಕೋವಿಡ್-19 ಮತ್ತು ಶಿಲೀಂಧ್ರ ಸೋಂಕಿನಿಂದ ನರಳುತ್ತಿರುವವರಿಗೆ ಅತ್ಯವಶ್ಯಕ ಚುಚ್ಚುಮದ್ದು, ಔಷಧ ದೊರಕಿಲ್ಲ’ ಎಂದು ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

‘ರಾಜ್ಯದಲ್ಲಿ ಅತಿ ಹೆಚ್ಚು ಜನರು ಕೋವಿಡ್‌ನಿಂದ ಬಳಲಿ, ಹಾಸಿಗೆಯಲ್ಲೇ ನರಳಿ ಸಾಯುತ್ತಿದ್ದಾಗ ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ, ರೆಮ್‌ಡಿಸಿವಿರ್ ಸಿಗಲಿಲ್ಲ. ಇತರ ರಾಜ್ಯಗಳಿಗೆ ಯತೇಚ್ಛವಾಗಿ ಹಂಚಿಕೆ ಮಾಡಿದರೂ ರಾಜ್ಯಕ್ಕೆ ಮಾತ್ರ ಅತ್ಯಲ್ಪ ಪ್ರಮಾಣದಲ್ಲಿ ಹಂಚಿಕೆ ಮಾಡಲಾಯಿತು’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.