ADVERTISEMENT

ಸ್ವಯಂ ಉದ್ಯೋಗ ಆರಂಭಿಸಿ, ಬದುಕು ಕಟ್ಟಿಕೊಳ್ಳಿ

ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 15:51 IST
Last Updated 11 ಅಕ್ಟೋಬರ್ 2022, 15:51 IST
ಬೀದರ್‌ನ ಹಿಂದ್ ಎಜುಕೇಶನ್ ಸೊಸೈಟಿಯ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಕೌಶಲ ತರಬೇತಿ ಪಡೆದ ಮಹಿಳೆಯರಿಗೆ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ ಹೊಲಿಗೆ ಯಂತ್ರ ವಿತರಿಸಿದರು. ಉಪ ನಿರ್ದೇಶಕ ರಮೇಶ ಮಠಪತಿ ಇದ್ದಾರೆ
ಬೀದರ್‌ನ ಹಿಂದ್ ಎಜುಕೇಶನ್ ಸೊಸೈಟಿಯ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಕೌಶಲ ತರಬೇತಿ ಪಡೆದ ಮಹಿಳೆಯರಿಗೆ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ ಹೊಲಿಗೆ ಯಂತ್ರ ವಿತರಿಸಿದರು. ಉಪ ನಿರ್ದೇಶಕ ರಮೇಶ ಮಠಪತಿ ಇದ್ದಾರೆ   

ಬೀದರ್: ‘ರಾಜ್ಯ ಸರ್ಕಾರ ಬಡ ಮಹಿಳೆಯರಿಗೆ ನೀಡುವ ಮೂರು ತಿಂಗಳ ಸ್ವಯಂ ಉದ್ಯೋಗದ ಉಚಿತ ತರಬೇತಿಯ ಲಾಭ ಪಡೆದು ಬದುಕು ಕಟ್ಟಿಕೊಳ್ಳಬೇಕು’ ಎಂದು ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ ಹೇಳಿದರು.

ನಗರದ ಹಿಂದ್ ಎಜುಕೇಶನ್ ಸೊಸೈಟಿಯ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ಸ್ವ-ಸಹಾಯ ಸಂಘದ ಸದಸ್ಯರಿಗೆ ತರಬೇತಿ ಮತ್ತು ಕೌಶಲ್ಯ ಮಿಷನ್ ಯೋಜನೆಯಡಿಯಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಟೂಲ್ ಕಿಟ್ ವಿತರಿಸಿ ಅವರು ಮಾತನಾಡಿದರು.

‘ಪ್ರತಿಯೊಬ್ಬರು ಸರ್ಕಾರ ನೀಡುವ ಸೌಲಭ್ಯಗಳ ಸದುಪಯೋಗ ಪಡೆಯಬೇಕು. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಹಲವು ಕಡೆ ಉದ್ಯೋಗ ಅವಕಾಶ ಕಲ್ಪಿಸಿಕೊಡಲು ಪ್ರಯತ್ನಿಸಲಾಗುತ್ತದೆ. ತರಬೇತಿ ನೀಡಿದ ನಂತರ ಸರ್ಕಾರದ ವತಿಯಿಂದ ಪ್ರಮಾಣಪತ್ರ ಮತ್ತು ಹೊಲಿಗೆ ಯಂತ್ರದ ಜತೆ ಟೂಲ್ ಕಿಟ್, ಕೈಕಸೂತಿ ಮಾಡುವ ಉಪಕರಣಗಳನ್ನು ನೀಡಿ ಅವರಿಗೆ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿ ಕೊಡಲಾಗುತ್ತಿದೆ’ ಎಂದರು.

ADVERTISEMENT

ಗ್ರಾಮೀಣ ಹಾಗೂ ನಗರದ ಪ್ರದೇಶಗಳಲ್ಲಿನ ಸಣ್ಣ ಕುಟುಂಬದ ಮಹಿಳೆಯರು ಹೊಲಿಗೆ ಹಾಗೂ ಕಸೂತಿಯಂತಹ ಕೌಶಲ್ಯ ತರಬೇತಿ ಪಡೆದರೆ ಅವರಿರುವ ಜಾಗದಲ್ಲೇ ಉದ್ಯೋಗ ಆರಂಭಿಸಬಹುದು. ಇದಕ್ಕಾಗಿ ಮನೆ ಬಿಟ್ಟು ದೂರ ಹೋಗುವ ಅಗತ್ಯವೂ ಇರುವುದಿಲ್ಲ. ಕೌಶಲ ಬೆಳೆಸಿಕೊಂಡರೆ ಮನೆಯಲ್ಲೇ ಕುಳಿತು ಉತ್ತಮ ಆದಾಯ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಉಪ ನಿರ್ದೇಶಕ ರಮೇಶ ಮಠಪತಿ ಮಾತನಾಡಿ, ‘ಪ್ರತಿಯೊಬ್ಬರಿಗೆ ಉದ್ಯೋಗ ದೊರೆಯುವುದು ಕಷ್ಟ. ಆದರೆ, ಸ್ವಯಂ ಉದ್ಯೋಗ ಆರಂಭಿಸಿ ಆರ್ಥಿಕ ಪ್ರಗತಿ ಸಾಧಿಸುವುದು ಕಷ್ಟದ ಕೆಲಸವಲ್ಲ’ ಎಂದು ಹೇಳಿದರು.

ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ ವತಿಯಿಂದ ಮಹಿಳೆಯರಿಗೆ ಮೂರು ತಿಂಗಳ ಸ್ವಯಂ ಉದ್ಯೋಗ ತರಬೇತಿ ನೀಡಲಾಗುತ್ತಿದೆ. ಬಡ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ 30 ಜನ ಮಹಿಳಾ ತರಬೇತಿದಾರರಿಗೆ 30 ಹೊಲಿಗೆ ಯಂತ್ರ ಮತ್ತು 60ಜನ ಮಹಿಳೆಯರಿಗೆ ಕೈ ಕಸೂತಿ ಉಪಕರಣಗಳ ಕಿಟ್‌ಗಳನ್ನು ವಿತರಿಸಲಾಯಿತು.

ಸ್ವಯಂ ಉದ್ಯೋಗ ತರಬೇತಿ ಪಡೆದ ಮಹಿಳೆಯರು ಹಾಗೂ ಹಿಂದ್ ಎಜುಕೇಶನ್ ಸೊಸೈಟಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ತರಬೇತುದಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.