ADVERTISEMENT

ಸಮುದಾಯ ಭವನ ಕಾಮಗಾರಿ ಶೀಘ್ರ ಆರಂಭಿಸಲು ಮರಾಠ ಸಮಾಜದಿಂದ ಒತ್ತಾಯ

ಮರಾಠ ಸಮಾಜದ ಮುಖಂಡರಿಂದ ಜಿಲ್ಲಾಧಿಕಾರಿಗೆ ಮನವಿ ಪತ್ರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 8:13 IST
Last Updated 16 ಜುಲೈ 2022, 8:13 IST
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಟೆಂಡರ್ ಪೂರ್ಣಗೊಳಿಸಲಾದ ಔರಾದ್ ತಾಲ್ಲೂಕಿನ ಗಣೇಶಪುರ ಬಳಿಯ ಮರಾಠ ಸಮುದಾಯ ಭವನದ ಕಾಮಗಾರಿ ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಮರಾಠ ಸಮಾಜದ ಮುಖಂಡರು ಬೀದರ್‍ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಟೆಂಡರ್ ಪೂರ್ಣಗೊಳಿಸಲಾದ ಔರಾದ್ ತಾಲ್ಲೂಕಿನ ಗಣೇಶಪುರ ಬಳಿಯ ಮರಾಠ ಸಮುದಾಯ ಭವನದ ಕಾಮಗಾರಿ ಕೂಡಲೇ ಆರಂಭಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಮರಾಠ ಸಮಾಜದ ಮುಖಂಡರು ಬೀದರ್‍ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು   

ಬೀದರ್: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಟೆಂಡರ್ ಪೂರ್ಣಗೊಳಿಸಲಾದ ಔರಾದ್ ತಾಲ್ಲೂಕಿನ ಗಣೇಶಪುರ ಬಳಿಯ ಮರಾಠ ಸಮುದಾಯ ಭವನದ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ಮರಾಠ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

ಸಮಾಜದ ಮುಖಂಡರಾದ ನಾರಾಯಣರಾವ್ ಪಾಟೀಲ ಭಂಡಾರಕುಮಟಾ, ಅಶೋಕ ಪಾಟೀಲ ಹೊಕ್ರಾಣ, ತೇಜರಾವ್ ಮುಳೆ ಹಾಗೂ ದೀಪಕ ಪಾಟೀಲ ಚಾಂದೋರಿ ಅವರು ನಗರದಲ್ಲಿ ನಿಯೋಗದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರನ್ನು ಭೇಟಿ ಮಾಡಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

ಶಾಸಕ ಪ್ರಭು ಚವಾಣ್ ಅವರು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ 2015-16ನೇ ಸಾಲಿನಲ್ಲಿ ತಾಲ್ಲೂಕಿನ ಗಣೇಶಪುರ ಬಳಿ ಹಾಗೂ 2017-18ನೇ ಸಾಲಿನಲ್ಲಿ ಔರಾದ್ ಪಟ್ಟಣದ ಮರಾಠ ಭವನದ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ತಲಾ ರೂ. 20 ಲಕ್ಷ ಅನುದಾನ ಒದಗಿಸಿದ್ದಾರೆ. ಜಿಲ್ಲಾ ಪಂಚಾಯಿತಿಯ ಪಂಚಾಯತ್‍ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಕಾಮಗಾರಿ ಸಹ ವಹಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಔರಾದ್ ಸಮೀಪದ ಗಣೇಶಪುರ ಬಳಿಯ ಸರ್ವೇ ಸಂಖ್ಯೆ 240/6 ರಲ್ಲಿ ಮರಾಠ ಭವನಕ್ಕೆ ಸ್ಥಳ ಗುರುತಿಸಿ, ಅಂದಾಜು ಪತ್ರಿಕೆ ಸಿದ್ಧಪಡಿಸಿ, ಜಿಲ್ಲಾ ಆಡಳಿತದ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರತ್ಯೇಕ ಗುತ್ತಿಗೆದಾರರೊಂದಿಗೆ ಕಾಮಗಾರಿಗಳ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಗಣೇಶಪುರ ಬಳಿಯ ನಿವೇಶನದಲ್ಲಿ ಆದಷ್ಟು ಬೇಗ ಭವನ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬೀದರ್ ಉಪ ವಿಭಾಗಾಧಿಕಾರಿ, ಜಿಲ್ಲಾ ಪಂಚಾಯಿತಿಯ ಪಂಚಾಯತ್‍ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಔರಾದ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೂ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.

ಗಣೇಶಪುರ ಬಳಿ ಭವನ: ಮರಾಠರ ಅಭಿಲಾಷೆ

ಬೀದರ್: ಮರಾಠ ಸಮುದಾಯದವರ ದೇಣಿಗೆ ಹಣದಿಂದ ಔರಾದ್ ತಾಲ್ಲೂಕಿನ ಗಣೇಶಪುರ ಬಳಿಯ ಸರ್ವೇ ಸಂಖ್ಯೆ 240/6 ರಲ್ಲಿ ಖರೀದಿಸಿರುವ ನಿವೇಶನದಲ್ಲಿ ಬೇಗ ಸುಸಜ್ಜಿತ ಹಾಗೂ ಮಾದರಿ ಭವನ ನಿರ್ಮಾಣವಾಗಬೇಕು ಎನ್ನುವುದು ಮರಾಠ ಸಮಾಜದವರ ಬಹು ದಿನಗಳ ಅಭಿಲಾಷೆಯಾಗಿದೆ ಎಂದು ಚಾಂದೋರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕ ಪಾಟೀಲ ಚಾಂದೋರಿ ಹೇಳಿದ್ದಾರೆ.
ಗಣೇಶಪುರ ಸಮೀಪದ ನಿವೇಶನಕ್ಕೆ ಹಿಂದೆ ದಾರಿ ಸಮಸ್ಯೆ ಕಾಡಿತ್ತು. ಇದೀಗ ಸುತ್ತಮುತ್ತಲಿನ ರೈತರು ಸ್ವಯಂ ಪ್ರೇರಣೆಯಿಂದ ದಾರಿ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ರಸ್ತೆ ತೊಡಕು ನಿವಾರಣೆಯಾಗಿದೆ. ಭವನ ನಿರ್ಮಾಣದ ದಾರಿ ಸುಗಮವಾಗಿದೆ ಎಂದು ತಿಳಿಸಿದ್ದಾರೆ. ಆದಷ್ಟು ಬೇಗ ಭವನ ನಿರ್ಮಾಣಗೊಂಡರೆ ಮರಾಠ ಸಮಾಜದವರಿಗೆ ವಿವಿಧ ಕಾರ್ಯಕ್ರಮ ಆಯೋಜಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.