ADVERTISEMENT

ಉಕ್ರೇನ್‌ನಿಂದ ಊರಿಗೆ ಮರಳಿದ ಅಪಹೃತ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 14:57 IST
Last Updated 22 ಜನವರಿ 2021, 14:57 IST
ಉಕ್ರೇನ್‍ನಲ್ಲಿ ಅಪಹರಣಕ್ಕೊಳಗಾಗಿ ಊರಿಗೆ ಮರಳಿದ ಔರಾದ್ ತಾಲ್ಲೂಕಿನ ಹುಲ್ಯಾಳ ತಾಂಡಾದ ವಿದ್ಯಾರ್ಥಿ ಅಜಯಕುಮಾರ ರಾಠೋಡ್ ಅವರ ಪಾಲಕರು ಹಾಗೂ ಸಂಬಂಧಿಕರು ಬೀದರ್‌ನಲ್ಲಿ ಶುಕ್ರವಾರ ಸಂಸದ ಭಗವಂತ ಖೂಬಾ ಅವರನ್ನು ಸನ್ಮಾನಿಸಿದರು
ಉಕ್ರೇನ್‍ನಲ್ಲಿ ಅಪಹರಣಕ್ಕೊಳಗಾಗಿ ಊರಿಗೆ ಮರಳಿದ ಔರಾದ್ ತಾಲ್ಲೂಕಿನ ಹುಲ್ಯಾಳ ತಾಂಡಾದ ವಿದ್ಯಾರ್ಥಿ ಅಜಯಕುಮಾರ ರಾಠೋಡ್ ಅವರ ಪಾಲಕರು ಹಾಗೂ ಸಂಬಂಧಿಕರು ಬೀದರ್‌ನಲ್ಲಿ ಶುಕ್ರವಾರ ಸಂಸದ ಭಗವಂತ ಖೂಬಾ ಅವರನ್ನು ಸನ್ಮಾನಿಸಿದರು   

ಬೀದರ್: ಮೆಡಿಕಲ್ ವ್ಯಾಸಂಗಕ್ಕಾಗಿ ಉಕ್ರೇನ್‍ಗೆ ತೆರಳಿ ಅಲ್ಲಿ ಅಪಹರಣಕ್ಕೆ ಒಳಗಾಗಿದ್ದ ಔರಾದ್ ತಾಲ್ಲೂಕಿನ ಹುಲ್ಯಾಳ ತಾಂಡಾದ ವಿದ್ಯಾರ್ಥಿ ಅಜಯಕುಮಾರ ರಾಮರಾವ್ ರಾಠೋಡ್ ಊರಿಗೆ ಮರಳಿದ್ದಾರೆ.

ತಮ್ಮ ಮಗನನ್ನು ಸುರಕ್ಷಿತವಾಗಿ ಕರೆ ತಂದಿದ್ದಕ್ಕಾಗಿ ವಿದ್ಯಾರ್ಥಿಯ ಪಾಲಕರು ನಗರದಲ್ಲಿ ಶುಕ್ರವಾರ ಸಂಸದ ಭಗವಂತ ಖೂಬಾ ಅವರನ್ನು ಭೇಟಿ ಮಾಡಿ ಸನ್ಮಾನಿಸಿ, ಕೃತಜ್ಞತೆ ಅರ್ಪಿಸಿದರು.

‘ನಮ್ಮ ಮಗ ಮತ್ತೆ ಮನೆಗೆ ವಾಪಸ್ಸಾಗುವಲ್ಲಿ ನಿಮ್ಮ ಶ್ರಮ ಬಹಳ ಇದೆ. ವಿದೇಶಾಂಗ ಸಚಿವಾಲಯ, ರಾಯಭಾರ ಕಚೇರಿ ಹಾಗೂ ಉಕ್ರೇನ್‍ನಲ್ಲಿಯ ಭಾರತ ರಾಯಭಾರ ಕಚೇರಿ ಅಧಿಕಾರಿಗಳನ್ನು ತಾವು ಸಂಪರ್ಕಿಸಿದ ಕಾರಣದಿಂದಾಗಿಯೇ ಆತ ಸುರಕ್ಷಿತವಾಗಿ ಮರಳಲು ಸಾಧ್ಯವಾಗಿದೆ’ ಎಂದು ವಿದ್ಯಾರ್ಥಿ ತಾಯಿ ಶೋಭಾ ನುಡಿದರು.

ADVERTISEMENT

‘ದೆಹಲಿಯಲ್ಲಿನ ತಮ್ಮ ಕಚೇರಿ ಸಿಬ್ಬಂದಿ ಆನಂದ ಪ್ರತಿ ಕ್ಷಣದ ಮಾಹಿತಿ ನೀಡುತ್ತಿದ್ದರು. ಅದರ ಆಧಾರದಲ್ಲಿಯೇ ನಾವು ಧೈರ್ಯ ತಂದುಕೊಂಡೇವು’ ಎಂದು ತಿಳಿಸಿದರು.

ಭಗವಂತ ಖೂಬಾ ಮಾತನಾಡಿ, ‘ಅಜಯಕುಮಾರ ಹೆದರುವ ಅಗತ್ಯ ಇಲ್ಲ. ಮುಂದಿನ ವರ್ಷ ಆತನಿಗೆ ಕಲಬುರ್ಗಿಯಲ್ಲೇ ವೈದ್ಯಕೀಯ ಸೀಟು ಕೊಡಿಸಲು ಪ್ರಯತ್ನಿಸುವೆ’ ಎಂದು ಭರವಸೆ ನೀಡಿದರು.

ವಿದ್ಯಾರ್ಥಿ ತಂದೆ ರಾಮರಾವ್ ರಾಠೋಡ್, ಸಂಬಂಧಿಕರಾದ ಪ್ರದೀಪ ರಾಠೋಡ್, ಕಾಶೀನಾಥ ಜಾಧವ್, ಧೋಂಡಿಬಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.