ADVERTISEMENT

ಬೀದರ್‌ | ಬಸವಕಲ್ಯಾಣದಲ್ಲಿ ಸೂಫಿ–ಸಂತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 7:26 IST
Last Updated 5 ಡಿಸೆಂಬರ್ 2025, 7:26 IST
ವಿಜಯ್‌ ಸಿಂಗ್‌
ವಿಜಯ್‌ ಸಿಂಗ್‌   

ಬೀದರ್‌: ‘ಬಸವಕಲ್ಯಾಣದ ಅಲ್ಫಾ ಮೈದಾನದಲ್ಲಿ ಡಿ. 7ರಂದು ಸಂಜೆ 6ಕ್ಕೆ ಸೂಫಿ–ಸಂತರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ತಿಳಿಸಿದರು.

ಕೋಮು ಸೌಹಾರ್ದ, ಕೋಮು ಸಾಮರಸ್ಯ, ಶಾಂತಿ, ನೆಮ್ಮದಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಮೊದಲ ಕಾರ್ಯಕ್ರಮ, ಕೊಪ್ಪಳದಲ್ಲಿ ಎರಡನೇ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚಿನ ಸ್ಪಂದನೆ ದೊರೆತಿದೆ. ಎಲ್ಲಾ ವರ್ಗಗಳ ಜನ ಅದರಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ಕೂಡ ನಿರೀಕ್ಷೆಗೂ ಮೀರಿ ಜನ ಸೇರುವ ಸಾಧ್ಯತೆ ಇದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇಡೀ ಜಗತ್ತಿಗೆ ಪ್ರಜಾಪ್ರಭುತ್ವ, ಸಂಸತ್ತಿನ ಪರಿಕಲ್ಪನೆ ಕೊಟ್ಟ ನಾಡು ಬಸವಕಲ್ಯಾಣ. ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಾದಿ ಶರಣರು ಮೆಟ್ಟಿದ ಪವಿತ್ರ ಸ್ಥಳ ಕಲ್ಯಾಣ. ಇಲ್ಲಿ ಕಾರ್ಯಕ್ರಮ ಸಂಘಟಿಸಿ ಇಡೀ ರಾಜ್ಯಕ್ಕೆ ಒಂದು ದೊಡ್ಡ ಸಂದೇಶ ಕೊಡಲಾಗುವುದು ಎಂದರು.

ADVERTISEMENT

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹಾರಕೂಡದ ಚನ್ನವೀರ ಶಿವಾಚಾರ್ಯರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಹವಾ ಮಲ್ಲಿನಾಥ ಸ್ವಾಮೀಜಿ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು, ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌, ವಕ್ಫ್‌ ಬೋರ್ಡ್‌ ನೂತನ ಅಧ್ಯಕ್ಷ ಸೈಯದ್‌ ಮುಹಮ್ಮದ್‌ ಅಲಿ ಅಲ್ ಹುಸೇನಿ ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು ಎಂದು ವಿವರಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮನ್ನಾನ್‌ ಸೇಠ್‌, ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ, ಬಸವಕಲ್ಯಾಣ ದರ್ಗಾದ ಸೈಯದ್‌ ಅಲಿ ಹಾಜರಿದ್ದರು.

ಸಲೀಂ ಅಹಮ್ಮದ್‌
ಕಲ್ಯಾಣದಲ್ಲಿ ಮೊದಲ ಸಮಾವೇಶ
(ಚಿತ್ರ ಇದೆ–ವಿಜಯ್‌ ಸಿಂಗ್‌) ವಿಧಾನ ಪರಿಷತ್‌ ಮಾಜಿ ಸದಸ್ಯರೂ ಆದ ಕಾಂಗ್ರೆಸ್‌ ಮುಖಂಡ ವಿಜಯ್‌ ಸಿಂಗ್‌ ಮಾತನಾಡಿ ಮೊದಲ ಬಾರಿಗೆ ಬಸವಕಲ್ಯಾಣದಲ್ಲಿ ಸೂಫಿ–ಸಂತರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇಡೀ ಕರ್ನಾಟಕಕ್ಕೆ ಶಾಂತಿ ಸೌಹಾರ್ದದ ಬಗ್ಗೆ ಉತ್ತಮ ಸಂದೇಶ ಹೋಗಲೆಂದು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಲ್ಲಾ ವರ್ಗದವರನ್ನು ಇದಕ್ಕೆ ಆಹ್ವಾನಿಸಲಾಗಿದೆ ಎಂದರು.
‘ಸಿದ್ದರಾಮಯ್ಯ–ಶಿವಕುಮಾರ ರಾಮ ಲಕ್ಷ್ಮಣನಂತೆ’
(ಚಿತ್ರ ಇದೆ–ಸಲೀಂ ಅಹಮ್ಮದ್‌) ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ರಾಮ–ಲಕ್ಷ್ಮಣನಂತಿದ್ದಾರೆ. ಅವರು ಬ್ರೇಕ್‌ ಫಾಸ್ಟ್‌ ಲಂಚ್‌ ಡಿನ್ನರ್‌ ಏನು ಬೇಕಾದರೂ ಮಾಡಲಿ. ಬಿಜೆಪಿಯವರಿಗೆ ಅವರ ಉಸಾಬರಿ ಏಕೆ. ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರಬಹುದು. ಅದನ್ನು ಸರಿ ಮಾಡಲು ಪಕ್ಷದ ಹೈಕಮಾಂಡ್‌ ಇದೆ. ಬಿಜೆಪಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು’ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸಿದ್ದು–ಡಿಕೆಶಿ ಬ್ರೇಕ್‌ಫಾಸ್ಟ್‌ ಮೀಟ್‌ ಜೆಡಿಎಸ್‌ ಹಾಗೂ ಬಿಜೆಪಿಗೆ ಕಪಾಳಮೋಕ್ಷವಾಗಿದೆ. ಪಕ್ಷ ಒಡೆದು ಹೋಗುತ್ತದೆ ಎಂದು ಸುದ್ದಿ ಹಬ್ಬಿಸಿದ್ದರು. ಈಗೇನಾಯಿತು? ನಮ್ಮ ಪಕ್ಷದಲ್ಲಿ ನರೇಂದ್ರ ಮೋದಿ ರೀತಿ ಒಬ್ಬರೇ ಹೇಳಿದಂತೆ ನಡೆಯುವುದಿಲ್ಲ. ಹೈಕಮಾಂಡ್‌ ಇದೆ. ಟಿಕೆಟ್‌ ಸಚಿವ ಸ್ಥಾನ ಸೇರಿದಂತೆ ಎಲ್ಲವೂ ಅದೇ ನಿರ್ಧರಿಸುತ್ತದೆ. ಎಲ್ಲಾ ವರ್ಗಗಳ ಹಿತ ಕಾಪಾಡುವುದು ಕಾಂಗ್ರೆಸ್‌ ಪಕ್ಷದ ಧ್ಯೇಯ. ಸಮಯ ಸಂದರ್ಭ ನೋಡಿ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಈಗ ನಮ್ಮ ಮುಂದಿರುವುದು ಬೆಳಗಾವಿ ವಿಧಾನ ಮಂಡಲದ ಅಧಿವೇಶನ. ಅಲ್ಲಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲಾಗುವುದು ಎಂದರು.
‘ಎಲೆಕ್ಷನ್‌ ಕಮಿಷನ್‌ ಬಿಜೆಪಿ ಕಮಿಷನ್‌’
‘ಎಲೆಕ್ಷನ್‌ ಕಮಿಷನ್‌ ಈಗ ಬಿಜೆಪಿ ಕಮಿಷನ್‌ ಆಗಿದೆ. ಐಟಿ ಇಡಿ ಸಿಬಿಐ ಸೇರಿದಂತೆ ಇತರೆ ಸಂಸ್ಥೆಗಳನ್ನು ಬಿಜೆಪಿ ಯಾವ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆಯೋ ಅದೇ ರೀತಿ ಎಲೆಕ್ಷನ್‌ ಕಮಿಷನ್‌ ಅನ್ನು ಬಳಸಿಕೊಳ್ಳುತ್ತಿದೆ. ಒಂದೇ ಬೂತ್‌ನಲ್ಲಿ ಒಬ್ಬ ವಿದೇಶಿ ಮಾಡೆಲ್‌ 22 ಸಲ ಮತ ಹಾಕಿದ್ದಾರೆ. 1 ಲಕ್ಷ ಮತ ಕಳ್ಳತನ ಹೇಗೆ ನಡೆದಿದೆ ಎಂಬುದನ್ನು ರಾಹುಲ್‌ ಗಾಂಧಿ ಅವರು ಸಾಕ್ಷ್ಯ ಸಮೇತ ತೋರಿಸಿದ್ದಾರೆ’ ಎಂದು ಸಲೀಂ ಅಹಮ್ಮದ್‌ ಹೇಳಿದರು. ಬಿಹಾರದಲ್ಲಿ 60 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಚುನಾವಣೆಯಲ್ಲಿ ಬಿಜೆಪಿಯ ಸ್ಟ್ರೈಕ್‌ರೇಟ್‌ ಶೇ 95ರಷ್ಟಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಿತೀಶ್‌ ಕುಮಾರ್‌ ಕೂಡ ಅಷ್ಟೇ ಸಾಧನೆ ಮಾಡಿದ್ದಾರೆ. ಇದು ಓಟ್‌ ಚೋರಿಯಲ್ಲದೆ ಮತ್ತೇನೂ? ಎಲೆಕ್ಷನ್‌ ಕಮಿಷನ್‌ ದೇಶದಲ್ಲಿ ಜೀವಂತವಾಗಿದೆಯಾ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.