ADVERTISEMENT

ಸುರೇಶ ಚನಶೆಟ್ಟಿ ಪುನರಾಯ್ಕೆ ನಿಶ್ಚಿತ

ಪ್ರಾಚಾರ್ಯ ಬಂಡಯ್ಯ ಸ್ವಾಮಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 17:08 IST
Last Updated 20 ಏಪ್ರಿಲ್ 2021, 17:08 IST
ಬೀದರ್‌ನ ಹಳ್ಳದಕೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ ಚನಶೆಟ್ಟಿ ಪರ ಪರಿಷತ್ ಮಹಿಳಾ ಘಟಕದ ಪದಾಧಿಕಾರಿಗಳು ಮತ ಯಾಚನೆ ಮಾಡಿದರು
ಬೀದರ್‌ನ ಹಳ್ಳದಕೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಸುರೇಶ ಚನಶೆಟ್ಟಿ ಪರ ಪರಿಷತ್ ಮಹಿಳಾ ಘಟಕದ ಪದಾಧಿಕಾರಿಗಳು ಮತ ಯಾಚನೆ ಮಾಡಿದರು   

ಬೀದರ್: ‘ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸುರೇಶ ಚನಶೆಟ್ಟಿ ಪುನರಾಯ್ಕೆ ನಿಶ್ಚಿತವಾಗಿದೆ. ಅವರು ಕೈಗೊಂಡಿರುವ ಕನ್ನಡಪರ ಕಾರ್ಯಕ್ರಮಗಳೇ ಅವರಿಗೆ ಶ್ರೀರಕ್ಷೆ ಆಗಲಿದೆ’ ಎಂದು ಪ್ರಾಚಾರ್ಯ ಬಂಡಯ್ಯ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಹಳ್ಳದಕೇರಿ, ಲಾಡಗೇರಿ, ಚನ್ನಬಸವನಗರ, ಶಿವನಗರ ಮೊದಲಾದ ಕಡೆಗಳಲ್ಲಿ ಸುರೇಶ ಚನಶೆಟ್ಟಿ ಪರ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲೆಡೆ ಸುರೇಶ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಅವರು ಹೋದ ಕಡೆಗಳಲ್ಲೆಲ್ಲ ಮತದಾರರೇ ಸ್ವಾಗತಿಸಿ, ಅಭಿಮಾನದಿಂದ ಬರಮಾಡಿಕೊಳ್ಳುತ್ತಿದ್ದಾರೆ. ತಮ್ಮ ಬೆಂಬಲದ ಅಭಯ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಹಿಂದೆ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ನಡೆಯುತ್ತಿದ್ದ ಸಮ್ಮೇಳನಗಳನ್ನು ಹೋಬಳಿ, ಗ್ರಾಮ ಮಟ್ಟಕ್ಕೂ ಒಯ್ದ ಹಿರಿಮೆ ಅವರದ್ದಾಗಿದೆ. ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದ ಮೂಲಕ ಸಾಹಿತಿಗಳಿಗೆ ವೇದಿಕೆ ಒದಗಿಸಿದ್ದಾರೆ. ಮಕ್ಕಳನ್ನು ಸಾಧನೆಗೆ ಪ್ರೇರಣೆ ನೀಡಲು ಪ್ರತಿಭಾ ಪುರಸ್ಕಾರ, ಶಿಕ್ಷಕರ ಸನ್ಮಾನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅನೇಕ ಸಾಹಿತಿಗಳ ಪುಸ್ತಕ ಪ್ರಕಟಣೆಗೆ ನೆರವಾಗಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕನ್ನಡ ಭವನ ಇದ್ದರೂ, ಬೀದರ್‌ನಲ್ಲಿ ಮಾತ್ರ ಇರಲಿಲ್ಲ. ಆ ಕೊರಗನ್ನೂ ಅವರು ನಿವಾರಣೆ ಮಾಡಿದ್ದಾರೆ’ ಎಂದು ಹೇಳಿದರು.

‘ಗಡಿ ಜಿಲ್ಲೆಯಲ್ಲಿ ಐದು ವರ್ಷಗಳ ಅವಧಿಯಲ್ಲಿ ಅತಿಹೆಚ್ಚು ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಇದು, ಅವರ ಸಂಘಟನಾ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ತಿಳಿಸಿದರು.

‘ಚನಶೆಟ್ಟಿ ಅವರು ಜಿಲ್ಲೆಯ ಹಳ್ಳಿ ಹಳ್ಳಿಗೂ ಕನ್ನಡ ಕಾರ್ಯಕ್ರಮಗಳನ್ನು ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಜಿಲ್ಲೆಯಲ್ಲಿ ಕನ್ನಡದ ಬೆಳವಣಿಗೆಗೆ ನಿರಂತರ ಶ್ರಮಿಸುತ್ತಿರುವ ಅವರಿಗೆ ಮತದಾರರು ಇನ್ನೊಂದು ಅವಧಿಗೆ ಅವಕಾಶ ನೀಡಬೇಕು’ ಎಂದು ಕತೆಗಾರ್ತಿ ಪಾರ್ವತಿ ಸೋನಾರೆ ಮನವಿ ಮಾಡಿದರು.

ಮಂಗಲಾ ದಿಡಗೆ, ಗಂಗಾಂಬಿಕಾ ಬಿರಾದಾರ, ಸಕಲೇಶ್ವರಿ ಚನಶೆಟ್ಟಿ, ಶಿವಾನಂದ ಮೈಲಾರೆ, ಶಾಂತಮ್ಮ ಉಂಡೆ, ಶಶಿಕಲಾ ಉಂಡೆ, ಪ್ರಭಾವತಿ ಉಂಡೆ, ಜಯಶ್ರೀ ಉಂಡೆ, ಕಾವೇರಿ, ಗಂಗಮ್ಮ, ಸಿದ್ಧಾರೂಢ ಭಾಲ್ಕೆ, ವೀರಶೆಟ್ಟಿ ಚನಶೆಟ್ಟಿ, ಬಸವರಾಜ ಬಿರಾದಾರ, ಜಗನ್ನಾಥ ಶಿವಯೋಗಿ, ಅಶೋಕ ದಿಡಗೆ, ಶಾಂತಕುಮಾರ ಬಿರಾದಾರ, ಪ್ರದೀಪ್ ಚನಶೆಟ್ಟಿ, ಶಿವಕುಮಾರ ಚನಶೆಟ್ಟಿ, ಬೀನಾ ಕಾವಳೆ, ಮಧುಕರ ಎಲ್ಲನೋರ, ಬಸವರಾಜ ಹಳ್ಳಿ, ಶಿವಕುಮಾರ ಎಂ, ಶಿವಾನಂದ ಉಂಡೆ, ಧನರಾಜ ಹಂಗರಗೆ, ರವಿಕುಮಾರ ಉಂಡೆ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.