ADVERTISEMENT

ಹೊಸ ಕೈಗಾರಿಕಾ ನೀತಿ ಲಾಭ ಪಡೆಯಿರಿ: ಸಂಸದ ಭಗವಂತ ಖೂಬಾ

ನವೋದ್ಯಮಿಗಳಿಗೆ ಸಂಸದ ಭಗವಂತ ಖೂಬಾ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 14:27 IST
Last Updated 19 ಜನವರಿ 2021, 14:27 IST
ಬೀದರ್‌ನ ಶಾರದಾ ಆರ್‌ಸೆಟಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಹೊಸ ಕೈಗಾರಿಕೆ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳ ಅರಿವು ಕಾರ್ಯಕ್ರಮವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿದರು
ಬೀದರ್‌ನ ಶಾರದಾ ಆರ್‌ಸೆಟಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಹೊಸ ಕೈಗಾರಿಕೆ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳ ಅರಿವು ಕಾರ್ಯಕ್ರಮವನ್ನು ಸಂಸದ ಭಗವಂತ ಖೂಬಾ ಉದ್ಘಾಟಿಸಿದರು   

ಬೀದರ್: ‘ನವೋದ್ಯಮಿಗಳು ಹೊಸ ಕೈಗಾರಿಕೆ ನೀತಿಯ ಪೂರ್ಣ ಲಾಭ ಪಡೆದು ಜಿಲ್ಲೆಯಲ್ಲಿ ಉದ್ಯಮ ಆರಂಭಿಸಿ ನವೋದ್ಯಮಿಗಳು ಯಶ ಸಾಧಿಸಬೇಕು’ ಎಂದು ಸಂಸದ ಭಗವಂತ ಖೂಬಾ ಕರೆ ನೀಡಿದರು.

ನಗರದ ಪ್ರತಾಪನಗರದ ಶಾರದಾ ಆರ್‌ಸೆಟಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಹೊಸ ಕೈಗಾರಿಕೆ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು

’ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳು ಸ್ಥಾಪನೆಯಾದರೆ ಹೆಚ್ಚು ಜನರಿಗೆ ಉದ್ಯೋಗ ಲಭಿಸಲಿದೆ. ಸಣ್ಣ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ ಸಣ್ಣ ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಅನುಕೂಲ ಮಾಡಿಕೊಡಬೇಕು’ ಎಂದರು.

ADVERTISEMENT

‘ಹಲವು ಕಾರಣಗಳಿಂದಾಗಿ ಬೀದರ್‌ ಜಿಲ್ಲೆಯಲ್ಲಿ ಬೃಹತ್‌ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಆದರೆ, ಸಣ್ಣ ಕೈಗಾರಿಕೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಕೈಗಾರಿಕೆ ನೀತಿಯನ್ನು ಎಷ್ಟೇ ಸರಳೀಕರಣಗೊಳಿಸಿದರೂ ಕೆಲವು ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ತಿಳಿಸಿದರು.

‘ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆದ ಮೇಲೆ ಕೈಗಾರಿಕೆ ನೀತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಉದ್ಯಮ ಆರಂಭಿಸಲು ಹಣಕಾಸು ಸಂಸ್ಥೆಗಳಿಗೆ ಸಕಾಲದಲ್ಲಿ ಆರ್ಥಿಕ ನೆರವು ಕಲ್ಪಿಸಲಾಗಿದೆ. ಅನೇಕ ಬಗೆಯ ಸವಲತ್ತುಗಳನ್ನು ಒದಗಿಸಲಾಗಿದೆ’ ಎಂದು ತಿಳಿಸಿದರು.

‘ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟ ಅನುಭವಿಸಿದ ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಎಂಎಸ್‌ಎಂಇ ಮೂಲಕ ಪ್ರಯತ್ನಿಸಿದೆ’ ಎಂದು ಹೇಳಿದರು.

’ರಾಜ್ಯ ಸರ್ಕಾರದ ನೂತನ ಕೈಗಾರಿಕಾ ನೀತಿ 2020-25 ದೇಶದಲ್ಲೇ ಮಾದರಿಯಾಗಿದೆ. ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಅನುವು ಮಾಡಿಕೊಡುವಂತಹ ನೀತಿ ಇದಾಗಿದೆ’ ಎಂದು ತಿಳಿಸಿದರು.

ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಎಂಟರ್‌ಪ್ರೈಸಸ್‌ನ (ಎಂಎಸ್‌ಎಂಇ) ಹೆಚ್ಚುವರಿ ನಿರ್ದೇಶಕ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಎಚ್.ಎಂ.ಶ್ರೀನಿವಾಸ್, ಶಿವರಾಜ ಹಲಶೆಟ್ಟಿ, ಎಸ್‌.ಸಿ, ಎಸ್‌ಟಿ. ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ. ವಿಜಯಕುಮಾರ, ಜೆ.ಕೆ. ದೇವೇಂದ್ರಪ್ಪ, ಪಿ.ಎಂ.ಜಯಕುಮಾರ, ಭೀಮಾಶಂಕರ ಬಿ.‍ಪಾಟೀಲ, ಎನ್‌.ಆರ್‌.ಜಗದೀಶ,ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಬಿ.ಎಂ.ಕಮತಗಿ ಇದ್ದರು. ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ ವಂದಿಸಿದರು. ಕರ್ನಾಟಕ ಸಣ್ಣ ಕೈಗಾರಿಕೆಗಳ ಒಕ್ಕೂಟ(ಕಾಸಿಯಾ)ದ ವತಿಯಿಂದ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.