ADVERTISEMENT

ಆನೆಕಾಲು ರೋಗ ನಿರ್ಮೂಲನೆ: 17 ಲಕ್ಷ ಜನರಿಗೆ ತ್ರಿವಳಿ ಮಾತ್ರೆ ವಿತರಣೆ ಗುರಿ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 14:40 IST
Last Updated 12 ಮಾರ್ಚ್ 2021, 14:40 IST
ಬೀದರ್‌ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವರ್ಚ್ಯುವಲ್‌ ಪ್ಲಾಟ್‍ಫಾರ್ಮ್ ಮೂಲಕ ಮಾಧ್ಯಮ ಕಾರ್ಯಾಗಾರದಲ್ಲಿ ಡಾ.ವಿ.ಜಿ.ರೆಡ್ಡಿ ಮಾತನಾಡಿದರು. ಡಾ.ಸಂಜೀವಕುಮಾರ ಪಾಟೀಲ ಇದ್ದಾರೆ
ಬೀದರ್‌ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವರ್ಚ್ಯುವಲ್‌ ಪ್ಲಾಟ್‍ಫಾರ್ಮ್ ಮೂಲಕ ಮಾಧ್ಯಮ ಕಾರ್ಯಾಗಾರದಲ್ಲಿ ಡಾ.ವಿ.ಜಿ.ರೆಡ್ಡಿ ಮಾತನಾಡಿದರು. ಡಾ.ಸಂಜೀವಕುಮಾರ ಪಾಟೀಲ ಇದ್ದಾರೆ   

ಬೀದರ್‌: ‘ಜಿಲ್ಲೆಯ ಜನಸಂಖ್ಯೆ 18 ಲಕ್ಷ ಇದೆ. 17 ಲಕ್ಷ ಜನರಿಗೆ ತ್ರಿವಳಿ ಮಾತ್ರೆಗಳನ್ನು ನುಂಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ 1,833 ತಂಡಗಳನ್ನು ರಚಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ಬಂದಾಗ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ ಮನವಿ ಮಾಡಿದರು.

ಆನೆಕಾಲು ರೋಗ ನಿರ್ಮೂಲನೆಗಾಗಿ ಜಿಲ್ಲೆಯಲ್ಲಿ ಮಾರ್ಚ್ 15 ರಿಂದ 31 ರವರೆಗೆ ನಡೆಯಲಿರುವ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮದ ಪ್ರಯುಕ್ತ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವರ್ಚ್ಯುವಲ್‌ ಪ್ಲಾಟ್‍ಫಾರ್ಮ್ ಮೂಲಕ ಮಾಧ್ಯಮ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಬೀದರ್ ಆನೆಕಾಲುರೋಗ ನಿರ್ಮೂಲನೆಗೆ ರೂಪಿಸಿದ ಸಾಮೂಹಿಕ ಔಷಧ ಸೇವನೆ ಕಾರ್ಯಕ್ರಮನ್ನು ಪ್ರಾರಂಭಿಸಿದ ರಾಜ್ಯದ ಮೂರನೇ ಜಿಲ್ಲೆಯಾಗಿದೆ. ಇದೇ ಮೊದಲ ಬಾರಿ ತ್ರಿವಳಿ ಗುಳಿಗೆಗಳ ಸೇವನೆ ಮಾಡಿಸಲಾಗುತ್ತಿದೆ. ಈ ಗುಳಿಗೆಗಳನ್ನು ಎರಡು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ತೀವ್ರತರ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಎನ್‌ವಿಬಿಡಿಸಿಪಿ ಹೆಚ್ಚುವರಿ ನಿರ್ದೇಶಕ ಡಾ.ನೂಪುರ್ ರಾಯ್ ಮಾತನಾಡಿ, ‘ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಆನೆಕಾಲು ರೋಗ ನಿವಾರಣೆಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದರು.

‘ರಾಜ್ಯದ ಒಂಬತ್ತು ಜಿಲ್ಲೆಗಳ ಜನಸಂಖ್ಯೆ 1.8 ಕೋಟಿ ತಲುಪಿದೆ. 2020-21 ನೇ ಸಾಲಿನಲ್ಲಿ 14,357 ಕಾಲು ಊತ ಪ್ರಕರಣಗಳು ಮತ್ತು 1,185 ಹೈಡ್ರೋಸೀಲ್ ವೃಷಣಗಳ ಊತ ಪ್ರಕರಣಗಳು ದಾಖಲಾಗಿವೆ. ಪ್ರತಿಯೊಬ್ಬರು ರೋಗ ನಿವಾರಕ ಮಾತ್ರೆಗಳನ್ನು ಸೇವಿಸಬೇಕು’ ಎಂದು ತಿಳಿಸಿದರು.

‘ಈ ಔಷಧವು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ. ಔಷಧ ಸೇವನೆಯಿಂದ ಜಂತುಹುಳುಗಳ ನಿವಾರಣೆಯಾಗಿ ಮಕ್ಕಳು, ವಯಸ್ಕರಲ್ಲಿ ಪೌಷ್ಟಿಕತೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚುವುದು. ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕಜ್ಜಿ ಮತ್ತು ತುರಿಕೆಗೆ ಚಿಕಿತ್ಸೆಯು ದೊರೆಯುತ್ತದೆ’ ಎಂದರು.

ಡಾ.ರವಿಕುಮಾರ, ಆರೋಗ್ಯ ಇಲಾಖೆಯ ಎನ್‍ವಿಬಿಡಿಸಿಪಿ ವಿಭಾಗದ ಸಹ ನಿರ್ದೇಶಕ ಡಾ. ರಮೇಶ ಕೌಲಗುಡ್ಡಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸಂಜೀವಕುಮಾರ ಪಾಟೀಲ ಮಾತನಾಡಿದರು.

ಮಾಧ್ಯಮ ಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.