ADVERTISEMENT

ಶಿಕ್ಷಕರ ಗೌರವ ಸರ್ವಶ್ರೇಷ್ಠ: ಸಾವಿತ್ರಿ

ರೋಟರಿ ಕ್ಲಬ್‍ನಿಂದ 30 ಶಿಕ್ಷಕರಿಗೆ ರಾಷ್ಟ್ರ ನಿರ್ಮಾಣಕಾರ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 13:30 IST
Last Updated 27 ಸೆಪ್ಟೆಂಬರ್ 2021, 13:30 IST
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಬೀದರ್‌ನ ಐಎಂಎ ಹಾಲ್‍ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಣಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಬೀದರ್‌ನ ಐಎಂಎ ಹಾಲ್‍ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಣಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಬೀದರ್: ಸಮಾಜದಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಸರ್ವಶ್ರೇಷ್ಠ ಎಂದು ಕಲಬುರ್ಗಿಯ ಕಂದಾಯ ಇಲಾಖೆಯ ವಲಯ ಆಯುಕ್ತೆ ಸಾವಿತ್ರಿ ಕೆ. ಬಿರಾದಾರ ಅಭಿಪ್ರಾಯಪಟ್ಟರು.

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಗರದ ಐಎಂಎ ಹಾಲ್‍ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ರಾಷ್ಟ್ರ ನಿರ್ಮಾಣಕಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರಿಗೆ ಸೇವೆಯಲ್ಲಿ ಇದ್ದಾಗಲೂ, ನಿವೃತ್ತರಾದಾಗಲೂ ಸಮಾನ ಗೌರವ ದೊರಕುತ್ತದೆ. ಅಂಥ ಗೌರವ ಬೇರೆ ಯಾವ ಉನ್ನತ ಹುದ್ದೆಯಲ್ಲಿದ್ದವರಿಗೂ ಸಿಗದು ಎಂದು ತಿಳಿಸಿದರು.

ಶಿಕ್ಷಕ ವೃತ್ತಿ ಪವಿತ್ರವಾಗಿದೆ. ಮಕ್ಕಳಿಗೆ ಜ್ಞಾನ ಧಾರೆ ಎರೆಯುವುದರಲ್ಲಿ ತೃಪ್ತಿ ಇದೆ. ಮೊದಲು ನಾನೂ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದೆ. ನಂತರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕಂದಾಯ ಇಲಾಖೆಯ ವಲಯ ಆಯುಕ್ತೆಯಾದೆ ಎಂದು ಹೇಳಿದರು.

ADVERTISEMENT

ಪಾಲಕರು ಓದಿನ ಬಗ್ಗೆ ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರಬಾರದು. ಅವರು ಸಂತಸದಿಂದ ಅಧ್ಯಯನದಲ್ಲಿ ತೊಡಗುವಂಥ ವಾತಾವರಣ ನಿರ್ಮಿಸಬೇಕು ಎಂದು ಸಲಹೆ ಮಾಡಿದರು.

ತೋಟಗಾರಿಕೆ ಕಾಲೇಜು ಡೀನ್ ಡಾ. ಎಸ್.ವಿ. ಪಾಟೀಲ ಮಾತನಾಡಿ, ಓದಿಗೆ ಸರ್ಕಾರಿ ಶಾಲೆ, ಖಾಸಗಿ ಶಾಲೆ, ಬಡತನ, ಸಿರಿತನ ಎಂಬ ಭೇದಭಾವಗಳು ಇಲ್ಲ. ಕಷ್ಟ ಪಟ್ಟು ಓದಿದರೆ ಯಶಸ್ಸು ಖಂಡಿತ ಲಭಿಸುತ್ತದೆ ಎಂದು ಹೇಳಿದರು.

ಪಾಲಕರು ಮಕ್ಕಳಿಗೆ ಅವರ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ಕೊಡಬೇಕು ಎಂದು ತಿಳಿಸಿದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಡಾ. ನಿತೇಶಕುಮಾರ ಬಿರಾದಾರ ಮಾತನಾಡಿ, ಶಿಕ್ಷಕರು ರಾಷ್ಟ್ರ ನಿರ್ಮಾತೃಗಳಾಗಿದ್ದಾರೆ. ಅವರನ್ನು ಗೌರವಿಸಲು ಪ್ರತಿ ವರ್ಷ ಕ್ಲಬ್‍ನಿಂದ ಶಿಕ್ಷಕರ ದಿನ ಆಚರಿಸುತ್ತ ಬರಲಾಗಿದೆ ಎಂದು ಹೇಳಿದರು.

ವಿಶ್ವದಲ್ಲಿ ಪೊಲಿಯೋ ನಿರ್ಮೂಲನೆಯಲ್ಲಿ ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಪಾತ್ರ ಬಹಳ ಮಹತ್ವದ್ದಾಗಿದೆ. ಸಂಸ್ಥೆ ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.

ಸಾಕ್ಷರತಾ ಮಿಷನ್ ಅಧ್ಯಕ್ಷರಾದ ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರೆ ಮಾತನಾಡಿದರು. 30 ಶಿಕ್ಷಕರಿಗೆ ರಾಷ್ಟ್ರ ನಿರ್ಮಾಣಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿಬಿಎಸ್‍ಇ 10ನೇ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ಎಂಟು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಶಿವಕುಮಾರ ಯಲಾಲ್, ರೋಟೆರಿಯನ್‍ಗಳಾದ ಸೂರ್ಯಕಾಂತ ರಾಮಶೆಟ್ಟಿ, ಡಾ. ಕಪಿಲ್ ಪಾಟೀಲ, ನಿತಿನ್ ಕರ್ಪೂರ, ಸತಿಶ್ ಸ್ವಾಮಿ, ಶಿವಕುಮಾರ ಪಾಖಲ್, ಡಾ. ಲೋಕೇಶ ಹಿರೇಮಠ, ಸಚ್ಚಿದಾನಂದ ಚಿದ್ರೆ, ಚೇತನ್ ಮೇಗೂರ ಉಪಸ್ಥಿತರಿದ್ದರು.

ಪ್ರಭು ನಿರೂಪಿಸಿದರು. ಕ್ಲಬ್ ಖಜಾಂಚಿ ಕಾಮಶೆಟ್ಟಿ ಚಿಕ್ಕಬಸೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.