ADVERTISEMENT

Teachers' Day | ಶಿಕ್ಷಕರದ್ದು ಜ್ಞಾನಧಾರೆ ಎರೆಯುವ ಪವಿತ್ರ ವೃತ್ತಿ: ಶಾಸಕ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 6:15 IST
Last Updated 6 ಸೆಪ್ಟೆಂಬರ್ 2025, 6:15 IST
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ವಿವಿಧ ಸಾಧನೆ ತೋರಿದ ಶಾಲೆಗಳ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು. ಚನ್ನವೀರ ಶಿವಾಚಾರ್ಯರು, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಇದ್ದರು
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ವಿವಿಧ ಸಾಧನೆ ತೋರಿದ ಶಾಲೆಗಳ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು. ಚನ್ನವೀರ ಶಿವಾಚಾರ್ಯರು, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಇದ್ದರು   

ಬಸವಕಲ್ಯಾಣ: ‘ಶಿಕ್ಷಕರದ್ದು ಜ್ಞಾನಧಾರೆ ಎರೆದು ಅಂಧಕಾರದಿಂದ ಬೆಳಕಿನೆಡೆಗೆ ಒಯ್ಯುವ ಪವಿತ್ರ ವೃತ್ತಿಯಾಗಿದೆ’ ಎಂದು ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು.

ನಗರದ ತೇರು ಮೈದಾನದಲ್ಲಿನ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವಕಲ್ಯಾಣ- ಹುಲಸೂರ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಬೇಕು. ನಾನೂ ಸಹಕಾರ ನೀಡುತ್ತೇನೆ’ ಎಂದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರು ಮಾತನಾಡಿ, ‘ಶಿಕ್ಷಕರಿಗೆ ಭಾರತೀಯ ಸಂಸ್ಕೃತಿಯಲ್ಲಿ ದೊಡ್ಡ ಸ್ಥಾನವಿದೆ.  ನಮ್ಮಿಂದ ಸಮಾಜ ಸುಧಾರಣೆ ಸಾಧ್ಯ ಎಂಬುದನ್ನು ತಿಳಿದು ಮುನ್ನಡೆಯಬೇಕು’ ಎಂದರು.

ತಹಶೀಲ್ದಾರ್ ದತ್ತಾತ್ರೇಯ ಜೆ.ಗಾದಾ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಭಾಕರ ಕಳಮಾಸೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂಜೀವಕುಮಾರ ಕಾಂಗೆ, ಶಿಕ್ಷಕಿ ಶಾಂತಾಬಾಯಿ ಯರನಳ್ಳೆ, ಶಿವಕುಮಾರ ಜಡಗೆ, ಮಹೇಶ ಮುಳೆ ಮಾತನಾಡಿದರು.

ಹುಲಸೂರ ತಹಶೀಲ್ದಾರ್ ಶಿವಾನಂದ ಮೇತ್ರೆ, ಸಾವಿತ್ರಿ ಸಲಗರ, ಸೂರ್ಯಕಾಂತ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಸವಕಲ್ಯಾಣ ತಾಲ್ಲೂಕು ಅಧ್ಯಕ್ಷ ಸಂತೋಷ ಅಕ್ಕಣ್ಣ, ಹುಲಸೂರ ಅಧ್ಯಕ್ಷ ರಾಜಪ್ಪ ನಂದೋಡೆ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕರನ್ನು, ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚಿನ ಅಂಕ ಪಡೆದ ಶಾಲೆಗಳ ಹಾಗೂ ಒಂದನೇ ತರಗತಿಯಲ್ಲಿ ಹೆಚ್ಚಿನ ದಾಖಲಾತಿ ಪಡೆದ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಇರಾ ಪಬ್ಲಿಕ್ ಶಾಲೆ ಮಕ್ಕಳು ಸಂಗೀತ ಪ್ರಸ್ತುತಪಡಿಸಿದರು.

ಸ್ವಾಮೀಜಿ ಉಪಸ್ಥಿತರಿದ್ದರೂ ಸಂದೇಶ ವಾಚನ

ಹಾರಕೂಡ ಚನ್ನವೀರ ಶಿವಾಚಾರ್ಯರು ಅನೇಕ ವರ್ಷಗಳಿಂದ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಿದ್ದು ನೇತೃತ್ವ ವಹಿಸುತ್ತಾರೆ. ಆದರೆ ಅವರು ಶುಕ್ರವಾರ ಎಲ್ಲಿಯೂ ಭಾಷಣ ಮಾಡುವುದಿಲ್ಲ. ಆದ್ದರಿಂದ ಅವರು ಬರೆದ ಸಂದೇಶವನ್ನು ಸೂರ್ಯಕಾಂತ ಮಠ ಓದಿದರು. ಬಸವಕಲ್ಯಾಣ ಮತ್ತು ಹುಲಸೂರ ತಾಲ್ಲೂಕುಗಳ ಶಿಕ್ಷಕರ ದಿನಾಚರಣೆ ಇದಾಗಿತ್ತು. ಎರಡೂ ತಾಲ್ಲೂಕುಗಳ ತಹಶೀಲ್ದಾರ್‌ ಶಿಕ್ಷಣ ಮತ್ತಿತರೆ ಇಲಾಖೆಗಳ ಅಧಿಕಾರಿಗಳು ಸರ್ಕಾರಿ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘ ಒಳಗೊಂಡು 16 ಶಿಕ್ಷಕರ ಸಂಘಟನೆಗಳ ಅಧ್ಯಕ್ಷರು ವೇದಿಕೆಯಲ್ಲಿದ್ದರು. ಎಸ್.ರಾಧಾಕೃಷ್ಣನ್ ಮತ್ತು ಸಾವಿತ್ರಿಬಾಯಿ ಫುಲೆ ಇಬ್ಬರ ಭಾವಚಿತ್ರಗಳಿಗೂ ಪೂಜೆ ಸಲ್ಲಿಸಲಾಯಿತು.

ಯಶಸ್ಸಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು’

ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಗ್ರಾಮ ಸಮೀಪದ ಬೀದರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಆಡಳಿತ ಕುಲಸಚಿವೆ ಸುರೇಖಾ ಇದ್ದರು

ಭಾಲ್ಕಿ: ‘ಪ್ರತಿ ವ್ಯಕ್ತಿಯ ಯಶಸ್ಸಿನ ಹಿಂದೆ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ’ ಎಂದು ಬೀದರ್ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಸುರೇಖಾ ಹೇಳಿದರು.

ತಾಲ್ಲೂಕಿನ ಹಾಲಹಳ್ಳಿ ಗ್ರಾಮ ಸಮೀಪದ ಬೀದರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಸಮಾಜವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯಲು ಶಿಕ್ಷಕರೇ ರೂವಾರಿಯಾಗಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಕರಿಗೆ, ಹೆತ್ತವರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ರವಿಂದ್ರನಾಥ ವಿ. ಗಬಾಡಿ ಮಾತನಾಡಿದರು. ಅರುಣಕುಮಾರ ಬೇಂದ್ರೆ, ತುಕಾರಾಮ ಮೇತ್ರೆ, ಶಿವರಾಜ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.