ADVERTISEMENT

ಔರಾದ್: ಸಿಎಸ್, ಇಸಿ ಕೋರ್ಸ್ ಪುನರಾರಂಭಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:12 IST
Last Updated 18 ಡಿಸೆಂಬರ್ 2025, 4:12 IST
ಔರಾದ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಔರಾದ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಬಳಿ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಔರಾದ್: ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಥಗಿಗೊಂಡ ಕಂಪ್ಯೂಟರ್ ಸೈನ್ಸ್ (ಸಿಎಸ್) ಹಾಗೂ ಎಲೆಕ್ಟ್ರಾನಿಕ್ಸ್ (ಇಸಿ) ಕೋರ್ಸ್ ಪುನರಾರಂಭಿಸಲು ಆಗ್ರಹಿಸಿ ವಿದ್ಯಾರ್ಥಿಗಳು ಬುಧವಾರ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.

‘ಸಿ.ಎಸ್, ಇ.ಸಿ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಗಡಿ ಭಾಗದ ಬಡ ವಿದ್ಯಾರ್ಥಿಗಳು ನಗರಗಳಿಗೆ ಹೋಗಿ ಈ ಕೋರ್ಸ್ ಮಾಡಲು ಸಾಧ್ಯವಿಲ್ಲ. ಸ್ಥಗಿತಗೊಂಡ ಕೋರ್ಸ್ ಪುನರಾರಂಭಿಸಬೇಕು’ ಎಂದು ಒತ್ತಾಯಿಸಿದರು.

‘ಡಾ.ನಂಜುಡಪ್ಪ ವರದಿ ಅನುಸಾರ ಅತಿ ಹಿಂದುಳಿದ ಈ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಸುಲಭವಾಗಿ ತಾಂತ್ರಿಕ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಇಲ್ಲಿ ಪಾಲಿಟೆಕ್ನಿಕ್ ಕೋರ್ಸ್ ಆರಂಭಿಸಿದೆ. ಇರುವ ಕೋರ್ಸ್‌ಗಳಿಗೆ ಬೇಕಾದ 36 ಉಪನ್ಯಾಸಕರ ಪೈಕಿ ಒಬ್ಬರೂ ಕಾಯಂ ಇಲ್ಲ. ಹೀಗಾಗಿ ಪ್ರತಿ ವರ್ಷ ಪ್ರವೇಶ ಪಡೆಯುವರ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರ ಇದನ್ನೇ ನೆಪ ಮಾಡಿಕೊಂಡು ಕೋರ್ಸ್‌ ಸ್ಥಗಿತ ಮಾಡಿ ಈ ಹಿಂದುಳಿದ ತಾಲ್ಲೂಕಿಗೆ ಅನ್ಯಾಯ ಮಾಡುತ್ತಿದೆ’ ಎಂದು ಪ್ರತಿಭಟನನಿರತರು ದೂರಿದರು.

ADVERTISEMENT

‘ಬೀದರ್ ಜಿಲ್ಲೆಯಲ್ಲಿಯೇ ಬೀದರ್ ಹಾಗೂ ಔರಾದ್ ಎರಡು ಕಡೆ ಮಾತ್ರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿವೆ. ಉಪನ್ಯಾಸಕರನ್ನು ನೇಮಕ ಮಾಡದೆ ಒಂದೊಂದು ಕೋರ್ಸ್ ರದ್ದು ಮಾಡಿ ಕಾಲೇಜು ಮುಚ್ಚುವ ಹುನ್ನಾರ ನಡೆಯತ್ತಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ’ ಎಂದರು.

ಬೇಡಿಕೆ ಕುರಿತು ಉನ್ನತ ಶಿಕ್ಷಣ ಸಚಿವರ ಹೆಸರಿಗೆ ಬರೆದ ಮನವಿಪತ್ರವನ್ನು ಉಪ ತಹಶೀಲ್ದಾರ್ ಅವರಿಗೆ ಸಲ್ಲಿಸಿ ಪ್ರಸಕ್ತ ಸಾಲಿನಿಂದ ಸಿ.ಎಸ್, ಇ.ಸಿ ಕೋರ್ಸ್ ಪುನರಾರಂಭಿಸಲು ಹಿಂದೇಟು ಹಾಕಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಎಬಿವಿಪಿ ಮುಖಂಡ ಶಿವಶರಣು ಚಾಂಬೊಳೆ, ಜಿಲ್ಲಾ ಸಂಚಾಲಕ ನಾಗರಾಜ ಸುಲ್ತಾನಪುರ, ತಾಲ್ಲೂಕು ಸಂಚಾಲಕ ನಿತಿನ್ ಮೂಲಗೆ, ಸುರೇಶ, ಮಲ್ಲಿಕಾರ್ಜುನ ಟೆಕರಾಜ, ಪ್ರಶಾಂತ ಮೇತ್ರೆ, ಅರುಣ, ರಾಹುಲ, ಮಹಾದೇವ, ಅಂಕುಶ, ಶುಭಂ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.