ADVERTISEMENT

ಕಲ್ಯಾಣ ಕರ್ನಾಟಕಕ್ಕೆ ಘೋರ ಅನ್ಯಾಯ: ಈಶ್ವರ ಖಂಡ್ರೆ ವಾಗ್ದಾಳಿ

ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 13:51 IST
Last Updated 7 ಫೆಬ್ರುವರಿ 2022, 13:51 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೀದರ್‌: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 38 ತಿಂಗಳು ಗತಿಸಿದರೂ ಈವರೆಗೆ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಘೋರ ಅನ್ಯಾಯ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.

ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಾಣ ಕನಸಾಗಿಯೇ ಉಳಿದಿದೆ. ಆಧುನಿಕ ಅನುಭವ ಮಂಟಪ ಕೇವಲ ಕಾಗದದ ಮೇಲೆ ಇದೆ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಗೊರುಚ ನೇತೃತ್ವದಲ್ಲಿ ಸಲಹಾ ಸಮಿತಿ ರಚನೆ ಮಾಡಿ ₹ 550 ಕೋಟಿ ವೆಚ್ಚದ ಅನುಭವ ಮಂಟಪದ ನೀಲನಕ್ಷೆ ಸಿದ್ಧಪಡಿಸಲಾಗಿತ್ತು. ಬಿ.ಎಸ್‌.ಯಡಿಯೂರಪ್ಪ ಅವರು 2021 ಜನವರಿ 6ರಂದು ಡಿಪಿಆರ್‌ ಮಾಡದೆ ಶಂಕುಸ್ಥಾಪನೆ ನೆರವೇರಿಸಿದರು. ಸರ್ಕಾರ ಅಧಿಕಾರಕ್ಕೆ ಬಂದು 13 ತಿಂಗಳಾದರೂ ಡಿಪಿಆರ್‌ಗೆ ಅನುಮೋದನೆ ನೀಡಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿಲ್ಲ. ತೋರಿಕೆಗೆ ₹ 200 ಕೋಟಿ ಬಿಡುಗಡೆ ಮಾಡಿ ಬ್ಯಾಂಕಿನಲ್ಲಿ ಇಡಲಾಗಿದೆ ಎಂದರು.

ADVERTISEMENT

ಜನರ ತೆರಿಗೆ ದುಡ್ಡು ಬಳಕೆಯಾಗಿಲ್ಲ. ಠೇವಣಿ ಇಟ್ಟಿದ್ದರೆ ಹಣಕ್ಕೆ ಒಂದಿಷ್ಟು ಬಡ್ಡಿಯಾದರೂ ಬರುತ್ತಿತ್ತು. ಲಕ್ಷಾಂತರ ಕೋಟಿ ರೂಪಾಯಿ ಸಾಲ ಮಾಡಿ ಸರ್ಕಾರ ಜನರಿಗೆ ಏನು ಸಂದೇಶ ಕೊಡುತ್ತಿದೆ ಗೊತ್ತಿಲ್ಲ.

ಆಧುನಿಕ ಅನುಭವ ಮಂಟಪ ಕಾಂಗ್ರೆಸ್‌ ಕೂಸು. ಅದನ್ನು ರಾಜಕೀಯ ದಾಳವಾಗಿ ಬಳಸುವುದು ಬೇಡ. ತಕ್ಷಣ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಆರೋಪಿ ರಕ್ಷಣೆ:

ಬಿಜೆಪಿ ಪಾಪ ಮುಚ್ಚಿಸಲು ಪೊಲೀಸರು ಆರೋ‍ಪಿಗಳ ಬೆಂಗಾವಲಾಗಿ ನಿಲ್ಲುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ದೊಡ್ಡ ಮಟ್ಟದ ತಪ್ಪು ಮಾಡಿದವರ ರಕ್ಷಣೆಗೆ ಪೊಲೀಸರು ಬಿ ರಿಪೋರ್ಟ್ ಕೈಯಲ್ಲಿ ಹಿಡಿದು ನಿಂತಿದ್ದಾರೆ. ಸೇಡಂ ಶಾಸಕರ ಮಹಿಳಾ ದೌರ್ಜನ್ಯ ಪ್ರಕರಣದ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಸೇಡಂ ಬಿಜೆಪಿ ಶಾಸಕರ ವಿರುದ್ಧ ಮಹಿಳೆಯೊಬ್ಬರು ದೌರ್ಜನ್ಯದ ಆರೋ‍ಪ ಮಾಡಿದ್ದಾರೆ. ಆದರೆ, ಶಾಸಕರು ವಿಧಾನಸೌಧ ಠಾಣೆಯಲ್ಲಿ ದೂರು ಕೊಟ್ಟ ಮೇಲೆ ಮಹಿಳೆಯನ್ನೇ ಠಾಣೆಗೆ ಕರೆಯಿಸಿ ಅವರ ಮೇಲೆ ಒತ್ತಡ ಹಾಕಿಸಿ ಹೇಳಿಕೆ ಕೊಡಿಸಲಾಗಿದೆ. ನೊಂದ ಮಹಿಳೆಗೆ ರಕ್ಷಣೆ ಕೊಡಬೇಕಾದ ಪೊಲೀಸರು ಆರೋ‍ಪಿಗಳಿಗೆ ರಕ್ಷಣೆ ಕೊಡುತ್ತಿದ್ದಾರೆ. ರಾಜ್ಯ ಪೊಲೀಸ್‌ ಠಾಣೆಗಳು ಸೆಟಲ್‌ಮೆಂಟ್‌ ಸೆಂಟರ್‌ಗಳಾಗಿ ಪರಿವರ್ತನೆಯಾಗುತ್ತಿವೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಬೇಟಿ ಬಚಾವೋ, ಬೇಟಿ ಪಢಾವೋ ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿ ಶಾಸಕರಿಂದ ದೌರ್ಜನ್ಯ ನಡೆದಾಗ ಸಂತ್ರಸ್ತ ಮಹಿಳೆಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯಿಂದ ಕೋಮುಭಾವನೆ ಕೆರಳಿಸುವ ಕೆಲಸ:

ಬಿಜೆಪಿ ವಿದ್ಯಾರ್ಥಿಗಳಲ್ಲಿ ಕೋಮುಭಾವನೆ ಕೆರಳಿಸುವ ಕೆಲಸ ಮಾಡುತ್ತಿದೆ. ಕುವೆಂಪು ಹೇಳಿದಂತೆ ಮಕ್ಕಳನ್ನು ವಿಶ್ವ ಮಾನವರನ್ನಾಗಿ ಮಾಡುವ ಬದಲು ಬಿಜೆಪಿ ಮಕ್ಕಳನ್ನು ಅಲ್ಪಮಾನವರನ್ನಾಗಿ ಮಾಡುತ್ತಿದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಹೆಚ್ಚು ಮಾತನಾಡಲಾರೆ ಎಂದರು.

ಕೇಂದ್ರ ಸಚಿವರು ಏನು ಮಾಡುತ್ತಿದ್ದಾರೆ:

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಡಬಲ್‌ ಎಂಜಿನ್‌ ಸರ್ಕಾರ ಇದ್ದರೂ ಬೀದರ್‌ ವಿಮಾನ ಹಾರಾಟ ನಿಂತಿದೆ. ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕದ ಜನರಿಗೆ ಅನ್ಯಾಯವಾಗುತ್ತಿದೆ. ಬಿಜೆಪಿ ಆಡಳಿತಕ್ಕೆ ಜನ ರೋಸಿ ಹೋಗಿದ್ದಾರೆ. ರಾಜ್ಯದ ಕೇಂದ್ರ ಸಚಿವರು ಏನು ಮಾಡುತ್ತಿದ್ದಾರೆ ಎಂದು ಖಂಡ್ರೆ ಪ್ರಶ್ನಿಸಿದರು.

ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಬೀದರ್‌ನ ನೌಬಾದ್‌ನಿಂದ–ಶಹಾಪುರ ಗೇಟ್‌ ವರೆಗಿನ ಹೈದರಾಬಾದ್‌ ರಸ್ತೆ ನಿರ್ಮಾಣಕ್ಕೆ ₹ 10 ಕೋಟಿ ಕೊಡಿಸಿದ್ದೆ. ನಾಲ್ಕು ವರ್ಷ ಆದರೂ ಕಾಮಗಾರಿ ಆರಂಭವಾಗಿಲ್ಲ. ಕೆಲವರು ಆಪ್ತರಿಗೆ ಗುತ್ತಿಗೆ ಕೊಡಿಸಲು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನಂಜುಂಡಪ್ಪ ವರದಿ ಆಧಾರದ ಮೇಲೆ 114 ತಾಲ್ಲೂಕುಗಳಿಗೆ ಹಣ ಹಂಚಿಕೆಯಾಗಿದೆ. ಬೀದರ್‌ ಜಿಲ್ಲೆಗೆ ₹ 20 ಕೋಟಿ ಬಂದಿದೆ. ಹಣಕಾಸು ವರ್ಷ ಪೂರ್ಣಗೊಳ್ಳಲು ಒಂದು ತಿಂಗಳು ಬಾಕಿ ಇದೆ. ಅಧಿಕಾರಿಗಳು ಇನ್ನೂ ಯೋಜನಾ ವರದಿಯನ್ನೇ ಸಿದ್ಧ ಮಾಡಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.