ಔರಾದ್: ತಾಲ್ಲೂಕಿನ ಧುಪತಮಹಾಗಾಂವ್ ಗ್ರಾಮದ ಸ್ವಸಹಾಯ ಗುಂಪಿನ ಸುಜಾತಾ ನಾಗಭೂಷಣ ಪಾಟೀಲ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್ಆರ್‌ಎಲ್‌ಎಂ) ಯೋಜನೆಯಡಿ ಬಸವೇಶ್ವರ ಸ್ವಸಹಾಯ ಸಂಘ ಕಟ್ಟಿಕೊಂಡು ಶುದ್ಧ ಸಾವಯವ ಬೆಲ್ಲದಿಂದ ಶೇಂಗಾ ಚಿಕ್ಕಿ ತಯಾರಿಸಿ ತಮ್ಮದೇ ಚಿಕ್ಕಿ ವ್ಯಾಪಾರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಉತ್ಸವ, ಮೇಳ, ಜಾತ್ರೆಗಳಲ್ಲಿ ಇವರು ಹಾಕಿದ ಮಳಿಗೆಗಳಿಗೆ ಚಕ್ಕಿ ಖರೀದಿಸಲು ಜನ ಹುಡುಕಿಕೊಂಡು ಬರುತ್ತಾರೆ. ಇವರು ತಯಾರಿಸಿದ ಬೆಲ್ಲದ ಚಕ್ಕಿಗೆ ಆಹಾರ ಇಲಾಖೆ ಅಧಿಕೃತ (ಎಫ್ಎಸ್ಎಸ್ಐ) ಪ್ರಮಾಣಪತ್ರ ನೀಡಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಶುದ್ಧ ಸಾವಯವ ಬೆಲ್ಲದ ಶೆಂಗಾ ಚಿಕ್ಕಿಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ.
‘ನನ್ನ ಪತಿ ಐಟಿಐ ಕಲಿತಿದ್ದಾರೆ. ಇಬ್ಬರೂ ಬೀದರ್‌ನ ಕಂಪನಿವೊಂದರಲ್ಲಿ ಕೆಲಸ ಮಾಡುತ್ತಿದ್ದೇವು. ಆದರೆ ಅಲ್ಲಿ ಕೊಡುತ್ತಿದ್ದ ವೇತನ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಹೀಗಾಗಿ ಊರಿಗೆ ಬಂದು 10 ಜನ ಮಹಿಳೆಯರು ಸೇರಿ ಸ್ವಸಹಾಯ ಸಂಘ ಕಟ್ಟಿಕೊಂಡೆವು. ನಮ್ಮ ಸಂಘಕ್ಕೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಇಲಾಖೆಯಿಂದ ಪ್ರೋತ್ಸಾಹ ದೊರೆಯಿತು. ಸ್ವ-ಉದ್ಯೋಗಕ್ಕೆ ತರಬೇತಿಯನ್ನೂ ನೀಡಿದರು. ಅದರ ಫಲವಾಗಿ ನಾವು ಮನೆಯಲ್ಲೇ ಸಾವಯವ ಬೆಲ್ಲದಿಂದ ಶೇಂಗಾ ಚಕ್ಕಿ ತಯಾರಿಸಿ ತಿಂಗಳಿಗೆ ₹40 ಸಾವಿರದಿಂದ ₹50 ಸಾವಿರ ಆದಾಯ ಗಳಿಸುತ್ತಿದ್ದೇವೆ. ಇದರಿಂದಲೇ ನಮ್ಮ ನಡೆಯುತ್ತಿದೆ. ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸುತ್ತಿದ್ದೇವೆ’ ಎಂದು ಸುಜಾತಾ ಪಾಟೀಲ ತಿಳಸಿದರು.
‘ಇವರು ಕಡಿಮೆ ಎಂದರೂ ನಿತ್ಯ 20 ಕೆ.ಜಿ ಬೆಲ್ಲದ ಚಕ್ಕಿ ಉತ್ಪಾದಿಸುತ್ತೇವೆ. ಕೆ.ಜಿ ಚಕ್ಕಿಗೆ ₹250 ನಿಗದಿ ಮಾಡಿದ್ದೇವೆ. ಶೇಂಗಾ, ಬೆಲ್ಲ ಖರೀದಿ ಜತೆ ಇಬ್ಬರು ಕೆಲಸದವರು ಇದ್ದಾರೆ. ಪ್ಯಾಕ್ ಮಾಡುವುದು ಸೇರಿ ಎಲ್ಲ ಖರ್ಚು ಕಳೆದು ನಿತ್ಯ ₹1500 ರಿಂದ ₹1800 ಉಳಿತಾಯವಾಗುತ್ತದೆ’ ಎಂದು ಮಾಹಿತಿ ನೀಡಿದರು.
ಶಾಲೆಗಳಿಗೆ ಬೆಲ್ಲದ ಚಕ್ಕಿ ಪೂರೈಕೆಗೆ ಸಿಇಒ ಆದೇಶ
ಎನ್ಆರ್‌ಎಲ್‌ಎಂ (ಸಂಜೀವಿನಿ) ಯೋಜನೆಯಡಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಆಹಾರ ಇಲಾಖೆಯಿಂದ ದೃಢೀಕರಣವಾದ ಬೆಲ್ಲದ ಶೇಂಗಾ ಚಕ್ಕಿ ಖರೀದಿಸಿ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆ ಕೊಡಲು ವ್ಯವಸ್ಥೆ ಮಾಡುವಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಈಗಾಗಲೇ ಅನೇಕ ಶಾಲೆ ಮುಖ್ಯ ಶಿಕ್ಷಕರು ಬೆಲ್ಲದ ಚಕ್ಕಿ ಖರೀದಿಸಿ ಮಕ್ಕಳಿಗೆ ಊಟದ ಜತೆ ಕೊಡುತ್ತಿದ್ದಾರೆ.
ನಮಗೆ ಮಾರುಕಟ್ಟೆ ಸಮಸ್ಯೆ ಇಲ್ಲ. ಅಂಗಡಿಗಳಿಗೆ ಹೋಗಿ ಮಾರಾಟ ಮಾಡುವುದಿಲ್ಲ. ರಾಜ್ಯದ ವಿವಿಧೆಡೆ ನಡೆಯುವ ಸಮ್ಮೇಳನ ಉತ್ಸಗಳು ಮೇಳಗಳಿಗೆ ಸರ್ಕಾರ ನಮ್ಮನ್ನು ಆಹ್ವಾನಿಸುತ್ತದೆ. ಮಾರಾಟಕ್ಕೂ ವ್ಯವಸ್ಥೆ ಮಾಡಿಕೊಡುತ್ತಾರೆ. ಸರ್ಕಾರಿ ಶಾಲೆಗಳಿಗೂ ನಮ್ಮ ಚಕ್ಕಿ ಪೂರೈಕೆಯಾಗುತ್ತಿವೆ.ಸುಜಾತಾ ಪಾಟೀಲ, ಚಿಕ್ಕಿ ತಯಾರಕಿ
ಧುಪತಮಹಾಗಾಂವ್ ಗ್ರಾಮದ ಸುಜಾತಾ ಪಾಟೀಲ ಅವರು ಬೆಲ್ಲದ ಚಕ್ಕಿ ಅಷ್ಟೇ ಅಲ್ಲದೆ ಸಿರಿಧಾನ್ಯದಿಂದ ಇತರೆ ಗುಣಮಟ್ಟದ ಆಹಾರ ಪದಾರ್ಥ ತಯಾರಿ ಮಾಡುತ್ತಿದ್ದಾರೆ. ಇತರ ಸ್ವಸಹಾಯ ಗುಂಪಿನ ಮಹಿಳೆಯರಿಗೂ ತರಬೇತಿ ಕೊಡಿಸಲಾಗುತ್ತಿದೆ.ಸುಲೋಚನಾ ಜಾಧವ್, ಎನ್ಆರ್‌ಎಲ್‌ಎಂ ತಾಲ್ಲೂಕು ವ್ಯವಸ್ಥಾಪಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.