ADVERTISEMENT

ಖುಷಿಯಿಂದ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 16 ಮೇ 2022, 15:41 IST
Last Updated 16 ಮೇ 2022, 15:41 IST
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾದ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹೂವು ನೀಡಿ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳಲಾಯಿತು
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾದ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹೂವು ನೀಡಿ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳಲಾಯಿತು   

ಬೀದರ್‌: ಸಾಮಾನ್ಯವಾಗಿ ಮಳೆಗಾಲದಲ್ಲಿ ಶುರುವಾಗುತ್ತಿದ್ದ ಶಾಲೆಗಳು ಈ ಬಾರಿ ಬೇಸಿಗೆಯಲ್ಲೇ ಆರಂಭವಾಗಿವೆ. ಪಾಲಕರು ಕೆಂಡದಂತಹ ಬಿಸಿಲಿನಲ್ಲಿ ಮಕ್ಕಳನ್ನು ಶಾಲೆಗೆ ಹೇಗೆ ಕಳಿಸುವುದು ಎನ್ನುವ ಆತಂಕದಲ್ಲಿದ್ದರು. ಆದರೆ, ಸೂರ್ಯದೇವ ಮೋಡದಲ್ಲಿ ಅವಿತುಕೊಂಡರೆ, ವರುಣದೇವರು ಮಳೆಯ ಸಿಂಚನ ಮಾಡಿ ಮಕ್ಕಳು ಸಂಭ್ರಮದೊಂದಿಗೆ ಶಾಲೆಗೆ ಬರಲು ಅನುವು ಮಾಡಿಕೊಟ್ಟರು.

ಮಕ್ಕಳು ಅಚ್ಚುಕಟ್ಟಾಗಿ ಸಮವಸ್ತ್ರ ಧರಿಸಿ ತಂಪಾದ ವಾತಾವರಣದಲ್ಲಿ ಖುಷಿಯಿಂದ ಶಾಲೆಯತ್ತ ಹೆಜ್ಜೆ ಹಾಕಿದರು. ಕೆಲ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಆವರಣದಲ್ಲಿ ಶಿಕ್ಷಕಿಯರು ಅಂದದ ರಂಗೋಲಿ ಬಿಡಿಸಿದ್ದರು.

ಮಕ್ಕಳಲ್ಲಿ ಉತ್ಸಾಹ ತುಂಬಲು ಶಾಲಾ ಸಿಬ್ಬಂದಿ ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳ ಮೇಲೆ ಹೂಮಳೆ ಗರೆದರು. ಮಕ್ಕಳು ಸರತಿ ಸಾಲಿನಲ್ಲಿ ಬಂದು ಕೊಠಡಿಗಳಿಗೆ ತೆರಳಿದರು.

ADVERTISEMENT

ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಸರಸ್ವತಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿ ನಾಡಗೀತೆ ಹಾಡಿದರು. ಕೆಲ ಶಾಲೆಗಳಲ್ಲಿ ಮೊದಲ ದಿನವೇ ಮಕ್ಕಳಿಗೆ ನೋಟ್‌ಬುಕ್‌, ಪೆನ್‌ ಹಾಗೂ ಪೆನ್ಸಿಲ್‌ ವಿತರಿಸಿದ್ದರಿಂದ ಮಕ್ಕಳು ಅವುಗಳನ್ನು ಪಡೆದು ಖುಷಿಪಟ್ಟರು.

ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆ ಸಿಹಿ ವಿತರಿಸಲಾಯಿತು. ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಬಾಳೆಹಣ್ಣು ಕೊಡಲಾಯಿತು. ಶಾಲೆಗಳಲ್ಲಿ ಬೇಸಿಗೆ ಮುಗಿಯಿತು ಬಾ ಹೋಗೋಣ ಶಾಲೆಗೆ ಎಂದು ಬ್ಯಾನರ್‌ ಬರೆಯಲಾಗಿತ್ತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಬಾರಾಟಕ್ಕೆ, ಜಿಲ್ಲೆಯ ಆಯಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ವಿಷಯ ಪರಿವೀಕ್ಷಕರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜನಸೇವಾ ಶಾಲೆ: ವಿದ್ಯಾರ್ಥಿಗಳಿಗೆ ಅಪೂರ್ವ ಸ್ವಾಗತ

2022-23ನೇ ಶೈಕ್ಷಣಿಕ ವರ್ಷದ ಮೊದಲ ದಿನವಾದ ಸೋಮವಾರ ಇಲ್ಲಿಯ ಪ್ರತಾಪನಗರದ ಜನಸೇವಾ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಪೂರ್ವ ಸ್ವಾಗತ ನೀಡಲಾಯಿತು.
ಶಾಲೆಗೆ ಬಂದ ವಿದ್ಯಾರ್ಥಿಗಳ ಮೇಲೆ ಆಡಳಿತ ಮಂಡಳಿ ಸದಸ್ಯರು, ಅತಿಥಿಗಳು ಹಾಗೂ ಶಿಕ್ಷಕರು ಪುಷ್ಪ ವೃಷ್ಟಿ ಮಾಡಿ, ಸ್ವಾಗತಿಸಿ ಬರಮಾಡಿಕೊಂಡರು.
ಇದಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಗೋ ಪೂಜೆ ನಡೆಯಿತು. ಮೊದಲ ದಿನವನ್ನು ವಿದ್ಯಾರ್ಥಿಗಳು ಆಟೋಟ, ಸಾಂಸ್ಕøತಿಕ ಚಟುವಟಿಕೆ ಮೊದಲಾದವುಗಳಲ್ಲೇ ಸಂಭ್ರಮದಿಂದ ಕಳೆದರು.

ಶಾಲೆ ಕಾರ್ಯ ಶ್ಲಾಘನೀಯ:

ಶಾಲಾ ಆರಂಭೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಬೀದರ್ ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರ, ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳಲ್ಲಿ ಭಾರತೀಯ ಸಂಸ್ಕøತಿ ಬೆಳೆಸುತ್ತಿರುವ ಜನಸೇವಾ ಶಾಲೆ ಕಾರ್ಯ ಶ್ಲಾಘನೀಯವಾಗಿದೆ. ಇಂಥ ಶಾಲೆಗಳ ಹೆಚ್ಚು ಹೆಚ್ಚು ಅವಶ್ಯಕತೆ ಇದೆ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದೇ ಶಾಲೆಯ ಧ್ಯೇಯವಾಗಿದೆ. ಶಾಲೆಯಲ್ಲಿ ಗುರುಕುಲ ಪದ್ಧತಿಯ ಶಿಕ್ಷಣ ನೀಡಲಾತ್ತಿದೆ. ಮಕ್ಕಳಿಗೆ ಅಕ್ಷರ ಜ್ಞಾನದೊಂದಿಗೆ ಭಾರತೀಯ ಸಂಸ್ಕೃತಿ, ಸಾಮಾಜಿಕ ಹೊಣೆಗಾರಿಕೆಯ ಅರಿವನ್ನೂ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಹಾಸ್ಯ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಅವರು ಒಂದೂವರೆ ತಾಸು ನಗೆ ಚಟಾಕಿಗಳನ್ನು ಹಾರಿಸಿದರು. ನಗೆ ಹನಿಗಳ ಮೂಲಕವೇ ಕನ್ನಡ ನೆಲ, ಜಲ, ಭಾಷೆಯ ಶ್ರೇಷ್ಠತೆಯನ್ನು ಮನವರಿಕೆ ಮಾಡಿದರು.
ಶಾಲೆಯ ಅಧ್ಯಕ್ಷ ಬಸವರಾಜ ಸ್ವಾಮಿ, ಹಿರಿಯ ಸದಸ್ಯರಾದ ಬಿ.ಎಸ್. ಕುದುರೆ, ಶಿವರಾಜ ಹುಡೇದ್, ಆಡಳಿತಾಧಿಕಾರಿ ಸೌಭಾಗ್ಯವತಿ, ಶಿಕ್ಷಕರಾದ ರಾಹುಲ್, ಕಾಶೀನಾಥ ಪಂಢರಾಪುರಕರ್ ಇದ್ದರು.
ರೇಣುಕಾ ನಿರೂಪಿಸಿದರು. ಮುಖ್ಯಶಿಕ್ಷಕ ಶಿವಾನಂದ ಮಲ್ಲ ವಂದಿಸಿದರು.

* *

ಗುಲಾಬಿ ಹೂಕೊಟ್ಟು ಮಕ್ಕಳನ್ನು ಬರಮಾಡಿಕೊಂಡ ಶಿಕ್ಷಕರು

ಬೀದರ್: ನಗರದ ಚಿದಂಬರ ಶಿಕ್ಷಣ ಸಂಸ್ಥೆ ಸಂಚಾಲಿತ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯಲ್ಲಿ ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಕರು ಗುಲಾಬಿ ಹೂ ಕೊಟ್ಟು ಬರಮಾಡಿಕೊಂಡರು.

ಶಿಕ್ಷಕರು ಶಾಲೆ ಮುಖ್ಯದ್ವಾರದಲ್ಲೇ ನಿಂತುಕೊಂಡು, ಮಕ್ಕಳ ಮೇಲೆ ಹೂ ಮಳೆ ಸುರಿಸಿ, ಅವರಿಗೆ ಗುಲಾಬಿ ಹೂ ಕೊಟ್ಟು ಸ್ವಾಗತ ಕೋರಿದರು. ಮಕ್ಕಳು ಉತ್ಸಾಹದಿಂದಲೇ ವರ್ಗ ಕೋಣೆಗಳತ್ತ ಹೆಜ್ಜೆ ಹಾಕಿದರು.

ಕಲಿಕಾ ಚೇತರಿಕೆ ವರ್ಷಾಚರಣೆ:

2022-23ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷ ಮಕ್ಕಳ ಕಲಿಕೆ ಚೇತರಿಕೆಗೆ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಶಾಲೆಯಲ್ಲಿ ನಡೆದ ಶಾಲಾ ಆರಂಭೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಹೇಳಿದರು.

ಕೋವಿಡ್ ಸಂದರ್ಭದಲ್ಲೂ ಶಾಲೆ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಎಸ್.ಎಂ. ಐನಾಪುರ ನುಡಿದರು.

ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ, ಶಾಂತಕುಮಾರ ರಗಟೆ, ನಿರ್ಮಲಾ ಕುಲಕರ್ಣಿ, ಕಾಶೀನಾಥ ಸಂಖ್, ಸತ್ಯವಾನ್ ಭೋಸ್ಲೆ, ಸಾಗರ್, ನಾಗನಾಥ, ನಾಗಪ್ಪ, ಶರಣಪ್ಪ ಪಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.