ADVERTISEMENT

ಬೀದರ್‌: ಮತ್ತೆ ಏರಿದ ನುಗ್ಗೆಕಾಯಿ, ಹಿಗ್ಗಿದ ಹಿರೇಕಾಯಿ

ಚವಳೆಕಾಯಿ, ತುಪ್ಪದ ಹಿರೇಕಾಯಿ, ಸಬ್ಬಸಗಿ ಬೆಲೆ ಕ್ವಿಂಟಲ್‌ಗೆ ₹2 ಸಾವಿರ ಇಳಿಕೆ

ಚಂದ್ರಕಾಂತ ಮಸಾನಿ
Published 30 ಸೆಪ್ಟೆಂಬರ್ 2022, 22:15 IST
Last Updated 30 ಸೆಪ್ಟೆಂಬರ್ 2022, 22:15 IST
ಬೀದರ್‌ನಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್‌: ಸಾಲು ಹಬ್ಬಮುಂದುವರಿದಿದೆ. ಮೊದಲೇ ಹಬ್ಬದ ಖರ್ಚು ಕುಟುಂಬದ ಮುಖ್ಯಸ್ಥರನ್ನು ಹೈರಾಣು ಮಾಡಿದೆ. ಈ ವಾರ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗಿರುವುದು ಗ್ರಾಹಕರ ಪಾಲಿಗೆ ನುಂಗಲಾಗದ ಬಿಸಿ ತುಪ್ಪವಾಗಿದೆ.

ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಸೌತೆಕಾಯಿ, ಕರಿಬೇವು, ಪಾಲಕ್ ಬೆಲೆ ಸ್ಥಿರವಾಗಿದೆ. ಈ ವಾರ ಚವಳೆಕಾಯಿ, ತುಪ್ಪದ ಹಿರೇಕಾಯಿ, ಸಬ್ಬಸಗಿ ಬೆಲೆ ಮಾತ್ರ ₹ 2 ಸಾವಿರ ಕಡಿಮೆಯಾಗಿದೆ. ಬಹುತೇಕ ತರಿಕಾರಿಗಳ ಬೆಲೆ ಹೆಚ್ಚಾಗಿದೆ.

ಮೆಣಸಿನಕಾಯಿ ₹3 ಸಾವಿರ, ಗಜ್ಜರಿ ₹4 ಸಾವಿರ, ಟೊಮೆಟೊ, ಬೆಂಡೆಕಾಯಿ, ಡೊಣಮೆಣಸಿನ ಕಾಯಿ ತಲಾ ₹2 ಸಾವಿರ ಹಾಗೂ ಎಲೆಕೋಸು ₹1 ಸಾವಿರ ಹೆಚ್ಚಾಗಿದೆ. ಹೀಗಾಗಿ ಖಾನಾವಳಿ ಹಾಗೂ ಹೋಟೆಲ್‌ಗಳ ಮಾಲೀಕರು ಕಡಿಮೆ ಬೆಲೆ ಇರುವ ತರಕಾರಿಗಳನ್ನೇ ಖರೀದಿಸಿದ್ದಾರೆ.

ADVERTISEMENT

ತರಕಾರಿ ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಬೆಲೆ ದ್ವಿಶತಕ ಬಾರಿಸಿದೆ. ಪ್ರತಿ ಕೆ.ಜಿಗೆ ₹ 180ಕ್ಕೆ ಮಾರಾಟವಾಗುತ್ತಿದ್ದ ನುಗ್ಗೆಕಾಯಿ ₹ 200 ತಲುಪಿ ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ. ಕೊತ್ತಂಬರಿ ಬೆಲೆಯೂ ಪ್ರತಿ ಕೆ.ಜಿಗೆ ₹ 200 ಏರಿ ಅಚ್ಚರಿ ಮೂಡಿಸಿದೆ.

ಮೆಂತೆ, ಬೀನ್ಸ್‌, ಹೂಕೂಸು ಬೆಲೆ ಸ್ಥಿರವಾಗಿದ್ದರೂ ಗ್ರಾಹಕರ ಕೈಗೆಟುಕುವ ದರದಲ್ಲಿ ಲಭ್ಯವಿಲ್ಲ. ಕಾರಣ ಇವುಗಳ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಹೆಚ್ಚಾಗಿದೆ. ಬೆಲೆ ಮಾರುಕಟ್ಟೆಯಲ್ಲಿ ಶತಕ ಬಾರಿಸಿರುವ ಹಿರೇಕಾಯಿ ಹಬ್ಬಕ್ಕೆ ತುರಾಯಿ ಏರಿಸಿಕೊಂಡರೆ, ತರಕಾರಿ ರಾಜ ಬದನೆಕಾಯಿ ತಲೆಯ ಮೇಲೆ ಬಾಗಿದ ಕೊಂಬ ನೆಟ್ಟಗೆ ಮಾಡಿಕೊಂಡಿದೆ.

‘ಹೊರ ಜಿಲ್ಲೆಗಳಿಂದ ಬೀದರ್‌ ಸಗಟು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬಂದಿರುವ ಕಾರಣ ಬಹುತೇಕ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ ನುಗ್ಗೆಕಾಯಿ, ಚವಳೆಕಾಯಿ, ಬೀಟ್‌ರೂಟ್‌, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಗಜ್ಜರಿ, ಪಡವಲಕಾಯಿ, ಹಾಗಲಕಾಯಿ, ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.