ADVERTISEMENT

ಬಸವಕಲ್ಯಾಣ: ಪ್ರಸಿದ್ಧ ದೇವಿ ಶಕ್ತಿಪೀಠ ಬನಶಂಕರಿ ಗುಡಿ

ಜಾತ್ರೆ ನಿಮಿತ್ತ ವಿವಿಧ ಕಾರ್ಯಕ್ರಮ, ಪಲ್ಲಕ್ಕಿ ಮೆರವಣಿಗೆ, ರಥೋತ್ಸವ

ಮಾಣಿಕ ಆರ್ ಭುರೆ
Published 1 ಜನವರಿ 2025, 6:33 IST
Last Updated 1 ಜನವರಿ 2025, 6:33 IST
ಬಸವಕಲ್ಯಾಣದ ಬನಶಂಕರಿ ದೇವಿ ದೇವಸ್ಥಾನ
ಬಸವಕಲ್ಯಾಣದ ಬನಶಂಕರಿ ದೇವಿ ದೇವಸ್ಥಾನ   

ಬಸವಕಲ್ಯಾಣ: ಬನಶಂಕರಿ ದೇವಿ ದೇವಸ್ಥಾನವು ನಗರದ ಪ್ರಸಿದ್ಧ ಶಕ್ತಿಪೀಠವಾಗಿದ್ದು, ಅಪಾರ ಭಕ್ತರ ಶ್ರದ್ಧೆ ಮತ್ತು ಭಕ್ತಿಯ ಕೇಂದ್ರವಾಗಿದೆ. ಇಲ್ಲಿ 45 ನೇ ಜಾತ್ರೆ ಅಂಗವಾಗಿ ಜನವರಿ 7 ರಿಂದ ಜನವರಿ 13ರವರೆಗೆ ವಿವಿಧ ಕಾರ್ಯಕ್ರಮಗಳು ಮತ್ತು ರಥೋತ್ಸವ ಜರುಗಲಿವೆ.

ಬದಾಮಿ ಬನಶಂಕರಿ ಉತ್ತರ ಕರ್ನಾಟಕದವರ ಪ್ರಮುಖ ದೇವತೆ. ಅಲ್ಲಿನ ದೇವಿಯ ಪ್ರತಿರೂಪವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಂತರದಲ್ಲಿ ನಿರ್ಮಾಣಗೊಂಡಿರುವ ಕೆಲವೇ ಪ್ರಮುಖ ದೇವಸ್ಥಾನಗಳಲ್ಲಿ ಇದು ಒಂದು.  ಉತ್ತರಾಭಿಮುಖವಾದ ಗರ್ಭಗೃಹದಲ್ಲಿ ಆಕರ್ಷಕವಾದ ಬೆಳ್ಳಿಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ವಾಡೆಯಂತೆ ಕಮಾನುಗಳಿರುವ ಹಳೆಯ ಶೈಲಿಯ ಮುಖಮಂಟಪ ಹಾಗೂ ಸಭಾಮಂಟಪ ನಿರ್ಮಿಸಲಾಗಿದೆ. ಆವರಣದಿಂದ ಒಳಪ್ರವೇಶಿಸುವ ಮುಖ್ಯ ದ್ವಾರವೂ ಕೆತ್ತನೆಯ ಕಲ್ಲಿನದಾಗಿದ್ದು, ಈ ದೇವಸ್ಥಾನ ಅತ್ಯಂತ ಹಳೆಯದು ಎಂಬುದಕ್ಕೆ ಸಾಕ್ಷಿಯಂತಿದೆ.

ಆವರಣದಲ್ಲಿ ಎರಡು ದೀಪಸ್ತಂಬಗಳಿವೆ. ಗರ್ಭಗೃಹದ ಮೇಲೆ ಐದಾರು ಮೆಟ್ಟಿಲುಗಳಿರುವ ಚಿಕ್ಕ ಗೋಪುರ, ಕಲಶವಿದೆ. ಈ ದೇವಸ್ಥಾನದ ಕಾರಣ ಈ ಓಣಿಗೆ ಬನಶಂಕರಿ ಓಣಿ ಎನ್ನಲಾಗುತ್ತದೆ. ಎದುರಿನ ಮುಖ್ಯ ರಸ್ತೆಗೂ ದೇವಿಯ ಹೆಸರಿದೆ. ಜಾತ್ರೆಯಲ್ಲಿನ ರಥ ಕಬ್ಬಿಣದ ಸಲಾಕೆಗಳದ್ದಾಗಿದೆ. ಇಡೀ ಜಿಲ್ಲೆಯಲ್ಲಿ ಬನಶಂಕರಿಯ ಇದೊಂದೇ ದೊಡ್ಡ ದೇವಸ್ಥಾನವಿರುವ ಕಾರಣ ದೂರದೂರದ ಭಕ್ತರು ಬರುತ್ತಾರೆ.

ADVERTISEMENT

ಜನವರಿ 7 ರಂದು ಪ್ರವಚನ ಆರಂಭ ಆಗಲಿದೆ. ಮಲ್ಲಯ್ಯ ಶಾಸ್ತ್ರಿ ಐನಾಪುರ ಪ್ರವಚನ ಹೇಳುವರು. ಸಸ್ತಾಪುರ ಸದಾನಂದ ಸ್ವಾಮಿಜಿ ನೇತೃತ್ವ ವಹಿಸುವರು. ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಉದ್ಘಾಟಿಸುವರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮುಖಂಡ ಧನರಾಜ ತಾಳಂಪಳ್ಳಿ ಹಾಗೂ ಹಟಗಾರ ಸಮಾಜ ಸಂಘದ ಬೀದರ್ ಮತ್ತು ಚಿಟಗುಪ್ಪ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು. ಕಲ್ಯಾಣಕುಮಾರ ಮಲ್ಕೂಡ, ಮಡಿವಾಳಪ್ಪ ಕಳಸ್ಕರ ಸಂಗೀತ ಪ್ರಸ್ತುತಪಡಿಸುವರು.

ಜನವರಿ 10 ರಂದು ಸಂಜೆ 7 ಗಂಟೆಗೆ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಉದ್ಘಾಟಿಸುವರು. ಜನವರಿ 11 ರಂದು ಬೆಳಿಗ್ಗೆ ಕುಂಕುಮಾರ್ಚನೆ ಹಾಗೂ ಸಂಜೆ 7 ಗಂಟೆಗೆ ಸಮಾರೋಪ ನಡೆಯಲಿದೆ. ಶಾಸಕ ಶರಣು ಸಲಗರ, ನರರೋಗ ತಜ್ಞ ಡಾ.ಸಂಜೀವಕುಮಾರ ಮುನ್ನೋಳಿ ಪಾಲ್ಗೊಳ್ಳುವರು. ಜನವರಿ 12ರಂದು ಬೆಳಿಗ್ಗೆ ಕುಂಭ ಮೆರವಣಿಗೆ, ಸಂಜೆ 6 ಗಂಟೆಗೆ ತೊಟ್ಟಿಲು ಕಾರ್ಯಕ್ರಮವಿದೆ.

ಜನವರಿ 13 ರಂದು ಪಲ್ಲಕ್ಕಿ ಮೆರವಣಿಗೆಯ ನಂತರ ಸಂಜೆ 7 ಗಂಟೆಗೆ ರಥ ಎಳೆಯಲಾಗುತ್ತದೆ. ಮುಖಂಡ ಪ್ರದೀಪ ವಾತಡೆ ಚಾಲನೆ ನೀಡುವರು. ಸಬ್ ಇನ್‌ಸ್ಪೆಕ್ಟರ್ ಅಂಬರೀಶ ವಾಘಮೋಡೆ, ಡಾ.ಜಿ.ಎಸ್.ಭುರಳೆ, ಶರಣಪ್ಪ ಮೆಂಗದೆ, ದಿಲೀಪ ರುಮ್ಮಾ, ಬಸವಂತಪ್ಪ ಭುರಳೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಜನವರಿ 11,12 ಮತ್ತು 13 ರಂದು ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಅನ್ನಸಂತರ್ಪಣೆಯೂ ಇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಾಲ್ಲೂಕು ಹಟಗಾರ ಸಮಾಜ ಸಂಘ ಹಾಗೂ ದೇವಸ್ಥಾನ ಸಮಿತಿ ವತಿಯಿಂದ ವಿನಂತಿಸಲಾಗಿದೆ.

ಬನಶಂಕರಿ ದೇವಿಯ ಮೂರ್ತಿ
ಬನಶಂಕರಿ ದೇವಿಯ ಮೂರ್ತಿ
ಬಸವಕಲ್ಯಾಣದ ಬನಶಂಕರಿ ದೇವಿ ದೇವಸ್ಥಾನದ ಗರ್ಭಗೃಹದ ಎದುರಿನ ಮಂಟಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.