ಔರಾದ್ (ಬೀದರ್ ಜಿಲ್ಲೆ): ತಾಲ್ಲೂಕಿನ ಬೋರಾಳ ಗ್ರಾಮದ ರೈತರೊಬ್ಬರು ಬರಡು ಭೂಮಿಯಲ್ಲಿ ಬಾವಿ ತೋಡಿ ನೀರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ಸಾಹಿ ರೈತ ಶಾಮರಾವ್ ಬಿರಾದಾರ (55) ಬೇಸಿಗೆಯಲ್ಲಿ ಮೂರು ತಿಂಗಳು ಬೆವರು ಸುರಿಸಿ 24 ಅಡಿ ಆಳದ ಬಾವಿ ತೋಡಿದ್ದು, ಅದರಲ್ಲಿ ಭರಪೂರ ನೀರು ಬಂದಿದೆ.
ಶಾಮರಾವ್ ಅವರು ನಾಲ್ಕು ಎಕರೆ ಜಮೀನು ಹೊಂದಿದ್ದಾರೆ. ಅದು ಗುಡ್ಡ, ಕಲ್ಲು, ಮುಳ್ಳಿನ ಪೊದೆಗಳಿಂದ ಕೂಡಿತ್ತು. ಅದನ್ನೆಲ್ಲ ತೆಗೆದು ಭೂಮಿಯನ್ನು ಹದ ಮಾಡಿದ್ದಾರೆ. ನರೇಗಾದಡಿ ₹1.50 ಲಕ್ಷ ನೆರವು ಪಡೆದು 24 ಅಡಿ ಆಳ ಹಾಗೂ 36 ಅಡಿ ಸುತ್ತಳತೆಯ ಬಾವಿ ಕೊರೆದಿದ್ದಾರೆ. ಬಾವಿಯಲ್ಲಿ 12 ಅಡಿಯಷ್ಟು ನೀರಿದ್ದು, ರೈತನ ಸಾಧನೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ನಾಲ್ಕು ಎಕರೆ ಒಣ ಭೂಮಿಯಲ್ಲಿ ಎಷ್ಟೇ ಕಷ್ಟಪಟ್ಟರೂ ವರ್ಷಕ್ಕೆ ಸಿಗುವುದು ₹50 ಸಾವಿರದಿಂದ ₹60 ಸಾವಿರ ಮಾತ್ರ. ಹೀಗಾಗಿ ಕೃಷಿಯ ಜೊತೆಗೆ ಜಾನುವಾರು ಖರೀದಿ–ಮಾರಾಟ ವ್ಯಾಪಾರ ಮಾಡಿಕೊಂಡಿದ್ದೇನೆ. ಕೃಷಿ ಕ್ಷೇತ್ರದಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ನರೇಗಾ ಯೋಜನೆಯಡಿ ಕಾರ್ಮಿಕರ ಸಹಾಯದಿಂದ ಬಾವಿ ತೋಡಿದ್ದೇನೆ. ಬಾವಿಯ ಮೇಲ್ಭಾಗದ ಸುತ್ತಲೂ ಎರಡು ಅಡಿಯಷ್ಟು ಗೋಡೆ ಕಟ್ಟಿದ್ದೇನೆ. ನನ್ನ ಕೈಯಿಂದಲೂ ₹2 ಲಕ್ಷ ಖರ್ಚು ಮಾಡಿದ್ದೇನೆ’ ಎಂದು ಶಾಮರಾವ್ ವಿವರಿಸುತ್ತಾರೆ.
ಔರಾದ್ ತಾಲ್ಲೂಕಿನ ಬೋರಾಳ ಗ್ರಾಮದ ರೈತ ಶಾಮರಾವ್ ತೋಡಿದ ಬಾವಿಯಲ್ಲಿ ಭರಪೂರ ನೀರು ಬಂದಿದೆ
‘ಬಾವಿಗೆ ವಿದ್ಯುತ್ ಸಂಪರ್ಕ ಹಾಗೂ ಮೋಟರ್ ವ್ಯವಸ್ಥೆಯಾದರೆ ಈರುಳ್ಳಿ, ತರಕಾರಿ ಬೆಳೆದು ವರ್ಷಕ್ಕೆ ₹4 ಲಕ್ಷದಿಂದ ₹5 ಲಕ್ಷದವರೆಗೂ ಲಾಭ ಪಡೆಯಬಹುದು. ಸದ್ಯ ವಿದ್ಯುತ್ ವ್ಯವಸ್ಥೆ ಇಲ್ಲ. ಇದಕ್ಕಾಗಿ ಜೆಸ್ಕಾಂಗೆ ₹40 ಸಾವಿರ ಠೇವಣಿ ಕಟ್ಟಬೇಕು. ಒಂದು ವಿದ್ಯುತ್ ಕಂಬಕ್ಕೆ ₹12 ಸಾವಿರ ಲೆಕ್ಕದಲ್ಲಿ ಒಟ್ಟು 12 ಕಂಬಕ್ಕೆ ₹1.44 ಲಕ್ಷ ಕಟ್ಟಿದರೆ ವಿದ್ಯುತ್ ವ್ಯವಸ್ಥೆ ಆಗುತ್ತದೆ. ಆದರೆ, ಅಷ್ಟು ಹಣ ನನ್ನ ಬಳಿ ಇಲ್ಲ. ಅಕ್ಕಪಕ್ಕದ ರೈತರು ಒಪ್ಪಿದರೆ ಎಲ್ಲರೂ ಸೇರಿ ಈ ಕೆಲಸ ಮಾಡುತ್ತೇವೆ. ಇಲ್ಲವಾದಲ್ಲಿ ಸದ್ಯ ಡೀಸೆಲ್ ಮೋಟರ್ ವ್ಯವಸ್ಥೆ ಮಾಡಿಕೊಳ್ಳಲು ಯೋಚಿಸಿದ್ದೇನೆ’ ಎಂದು ಅವರು ಹೇಳುತ್ತಾರೆ.
‘ನಾನು ಹಾಗೂ ಅಕ್ಕಪಕ್ಕದ ನಾಲ್ಕೈದು ರೈತರು ಕಷ್ಟಪಟ್ಟು ಬಾವಿ ತೋಡಿದ್ದೇವೆ. ಸರ್ಕಾರ 12 ಕಂಬ ಹಾಕಿ ವಿದ್ಯುತ್ ವ್ಯವಸ್ಥೆ ಮಾಡಿಕೊಟ್ಟರೆ ತುಂಬಾ ಉಪಕಾರ ಆಗಲಿದೆ’ ಎಂದು ರೈತ ಶಾಮರಾವ್ ಮನವಿ ಮಾಡಿದ್ದಾರೆ.
ರೈತ ಶಾಮರಾವ್ ನರೇಗಾ ಯೋಜನೆಯಲ್ಲಿ ತೋಡಿದ ಬಾವಿ ಬಹಳ ಅದ್ಭುತವಾಗಿದೆ. ಬೇಸಿಗೆಯಲ್ಲೂ 12 ಅಡಿಯಷ್ಟು ನೀರು ಬಂದಿದೆ. ಇದು ಇತರ ರೈತರಿಗೂ ಪ್ರೇರಣೆಯಾಗಲಿದೆ.ಶಿವಕುಮಾರ ಘಾಟೆ, ಸಹಾಯಕ ನಿರ್ದೇಶಕ, ತಾ.ಪಂ. ಔರಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.