ಔರಾದ್: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳ ಬದುಕಿಗೆ ಆಸರೆಯಾದ ಮೂತ್ರಪಿಂಡ ಕಸಿ (ಡಯಾಲಿಸಿಸ್)ಗೆ ತಾಲ್ಲೂಕು ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೇ ತಾಲ್ಲೂಕಿನ ಅನೇಕ ರೋಗಿಗಳು ಪರದಾಡುತ್ತಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರ ಇದ್ದರೂ ಅವು ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತೆ. ಒಂದು ಪೂರ್ಣ ಹಾಳಾಗಿ ಮೂಲೆಗೆ ಸೇರಿದರೆ, ಇನ್ನೊಂದು ಸರಿಯಾಗಿ ಕೆಲಸ ಮಾಡದ ಕಾರಣ ರೋಗಿಗಳು ತಾಲ್ಲೂಕು ಬಿಟ್ಟು ಬೇರೆ ಬೇರೆ ಆಸ್ಪತ್ರೆಗೆ ಅಲೆಯಬೇಕಾಗಿದೆ.
ನಾನು ಕಳೆದ ನಾಲ್ಕು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದೇನೆ. ಆರಂಭದ ಒಂದು ವರ್ಷ ಹೊರತುಪಡಿಸಿದರೆ ಇಲ್ಲಿ ಸರಿಯಾಗಿ ಡಯಾಲಿಸಿಸ್ ವ್ಯವಸ್ಥೆ ಇಲ್ಲ. ಬೀದರ್ ಸಾರ್ವಜನಿಕ ಆಸ್ಪತ್ರೆಗೆ ಹೋದರೆ ನಮ್ಮಲ್ಲಿ ರೋಗಿಗಳು ಜಾಸ್ತಿ ಇದ್ದಾರೆ. ನಿಮ್ಮ ತಾಲ್ಲೂಕಿಗೆ ಹೋಗಿ ಎಂದು ಅವರು ವಾಪಸ್ ಕಳುಹಿಸುತ್ತಿದ್ದಾರೆ. ಹೀಗಾಗಿ ನಾನು ಬೀದರ್‌ನ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಂಡು ಬದುಕುತ್ತಿದ್ದೇನೆ. ಬದುಕಿನೂದ್ದಕ್ಕೂ ಗಳಿಸಿದ ಹಣವೆಲ್ಲ ಅದಕ್ಕೆ ಹೋಗಿದೆ ಎಂದು ಪಟ್ಟಣದ ಬಳೆ ವ್ಯಾಪಾರಿ ಶಾಮದಮಿಯ್ಯಾ ಗೋಳು ತೋಡಿಕೊಂಡರು.
‘ನನಗೆ ಬಿಪಿ-ಶುಗರ್ ಇಲ್ಲ. ಯಾವುದೇ ವ್ಯಸನವೂ ಇಲ್ಲ. ಆದರೂ ನನಗೆ ಕಿಡ್ನಿ ಸಮಸ್ಯೆಯಾಗಿದೆ. ನಾಲ್ಕು ತಿಂಗಳ ಹಿಂದೆಯೇ ಔರಾದ್ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಡಯಾಲಿಸಿಸ್ ಮಾಡಿಸಲು ಹೆಸರು ನೋಂದಾಯಿಸಿದ್ದೇನೆ. ಆದರೆ ಇಂದಿಗೂ ನನಗೆ ಕರೆದಿಲ್ಲ. ಕೇಳಿದರೆ ಯಂತ್ರ ಕೆಟ್ಟು ಹೋಗಿದೆ ಎನ್ನುತ್ತಾರೆ. ಹೀಗಾಗಿ ನನಗೆ ಈಗ ಖಾಸಗಿ ಆಸ್ಪತ್ರೆಯೇ ಅನಿವಾರ್ಯವಾಗಿದೆ’ ಎನ್ನುತ್ತಾರೆ ಚಿಂತಾಕಿ ಗ್ರಾಮದ ನಿವಾಸಿ ಬಸವರಾಜ.
ಬೇರೆ ಬೇರೆ ತಾಲ್ಲೂಕಿನಲ್ಲಿ ಡಯಾಲಿಸಿಸ್‌ನ ಅತ್ಯುತ್ತಮ ವ್ಯವಸ್ಥೆ ಇದೆ. ನಮ್ಮಲ್ಲಿ ಏಕಿಲ್ಲ ನಮ್ಮ ತಾಲ್ಲೂಕಿನ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.
ನಮ್ಮ ಆಸ್ಪತ್ರೆಯಲ್ಲಿನ ಎರಡು ಡಯಾಲಿಸಿಸ್ ಯಂತ್ರಗಳ ಪೈಕಿ ಒಂದು ಕೆಲಸ ಮಾಡುತ್ತಿಲ್ಲ. ಇನ್ನೊಂದು ಕೂಡ ಅಷ್ಟಕಷ್ಟೆ ಇದೆ. ಅದನ್ನು ರಿಪೇರಿ ಮಾಡಿ ನಡೆಸುತ್ತಿದ್ದೇವೆ. ಸದ್ಯ ನಮ್ಮಲ್ಲಿ 9 ರೋಗಿಗಳಿದ್ದು ಅವರಿಗೆ ವಾರದಲ್ಲಿ ಎರಡು ಸಲ ಒಬ್ಬರಿಗೆ ನಾಲ್ಕು ಗಂಟೆ ಡಯಾಲಿಸಿಸ್ ಚಿಕಿತ್ಸೆ ಕೊಡಬೇಕು. ಕೆಲವೊಮ್ಮೆ ಯಂತ್ರ ಕೆಲಸ ಮಾಡದೆ ಇರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಹೊಸದಾಗಿ ಹೆಸರು ನೋಂದಾಯಿಸಿಕೊಂಡ ರೋಗಿಗಳಿಗೆ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ.
ಔರಾದ್ ಹಾಗೂ ಕಮಲನಗರ ತಾಲ್ಲೂಕು ಸೇರಿ ಕ್ಷೇತ್ರದಲ್ಲಿ ಒಂದೇ ಡಯಾಲಿಸಿಸ್ ಘಟಕ ಇದೆ. ಸದ್ಯ ಇಲ್ಲಿ 9 ಡಯಾಲಿಸಿಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಎಂಟು ರೋಗಿಗಳು ಹೆಸರು ನೋಂದಾಯಿಸಿದ್ದಾರೆ. ಹೀಗಾಗಿ ಇಲ್ಲಿ ಎರಡು ಹೊಸ ಡಯಾಲಿಸಿಸ್ ಯಂತ್ರಗಳ ಅಗತ್ಯವಿದೆ. ಈ ಬಗ್ಗೆ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.ಡಾ.ಗಾಯತ್ರಿ ತಾಲ್ಲೂಕು ಆರೋಗ್ಯಾಧಿಕಾರಿ ಔರಾದ್
ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ನನಗೆ ನನ್ನ ಊರಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಪ್ರತಿ ವಾರ ಬೀದರ್ ಹೋಗಿ ಬಂದು ಸಾಕಾಗಿದೆ.ಶಾಮದಮಿಯ್ಯಾ ಔರಾದ್ ಪಟ್ಟಣ ನಿವಾಸಿ
ನಮ್ಮ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿರುವ ಪ್ರಭು ಚವಾಣ್ ಅವರು ತಾಲ್ಲೂಕಿನ ಆಸ್ಪತ್ರೆಗೆ ಎರಡು ಗುಣಮಟ್ಟದ ಡಯಾಲಿಸಿಸ್ ಯಂತ್ರ ಕೊಡಿಸಿ ನಮ್ಮಂತಹ ರೋಗಿಗಳ ನೆರವಿಗೆ ಬರಬೇಕು.ಬಸವರಾಜ ಚಿಂತಾಕಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.