ADVERTISEMENT

ಗುಡುಗು– ಸಿಡಿಲು ಸಹಿತ ಮಳೆಯ ಅಬ್ಬರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 20:28 IST
Last Updated 29 ಸೆಪ್ಟೆಂಬರ್ 2020, 20:28 IST
ಬೆಂಗಳೂರಿನಲ್ಲಿ ಮಳೆ.
ಬೆಂಗಳೂರಿನಲ್ಲಿ ಮಳೆ.   

ಬೆಂಗಳೂರು: ನಗರದಲ್ಲಿ ಕೆಲ ದಿನ ಬಿಡುವು ನೀಡಿದ್ದ ಮಳೆ, ಮಂಗಳವಾರ ಮಧ್ಯಾಹ್ನ ಹಾಗೂ ರಾತ್ರಿ ಧಾರಾಕಾರವಾಗಿ ಸುರಿಯಿತು. ಗುಡುಗು–ಸಿಡಿಲಿನ ಅಬ್ಬರವೂ ಜೋರಾಗಿತ್ತು.

ನಗರದ ಹಲವೆಡೆ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಲವೆಡೆ ಜಿಟಿ ಜಿಟಿಯಾಗಿ ಮಳೆ ಆರಂಭವಾಯಿತು. ನಂತರ ಮಳೆ ಅಬ್ಬರ ಜೋರಾಗಿತ್ತು. ಸಂಜೆ ಬಿಡುವು ಕೊಟ್ಟ ಮಳೆ, ರಾತ್ರಿ 9ರ ಸುಮಾರಿಗೆ ಪುನಃ ಜೋರಾಗಿ ಸುರಿಯಿತು.

ಹೆಣ್ಣೂರು, ನಾಗವಾರ, ರಾಜಾಜಿನಗರ, ಬಸವೇಶ್ವರ ನಗರ, ವಿಜಯನಗರ, ನಂದಿನಿ ಲೇಔಟ್, ಪೀಣ್ಯ, ಮಲ್ಲೇಶ್ವರ, ಸಂಜಯನಗರ, ಆರ್‌.ಟಿ.ನಗರ, ಹೆಬ್ಬಾಳ, ಯಶವಂತಪುರ, ಕತ್ರಿಗುಪ್ಪೆ, ಬನಶಂಕರಿ, ಬಸವನಗುಡಿ, ಗಿರಿನಗರ, ರಾಜರಾಜೇಶ್ವರಿನಗರ, ಕೆಂಗೇರಿ, ದೀಪಾಂಜಲಿನಗರ, ಚಾಮರಾಜಪೇಟೆ, ಶಿವಾಜಿನಗರ, ಕೋರಮಂಗಲ, ಅಶೋಕನಗರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಮಳೆ ಇತ್ತು.

ADVERTISEMENT

ಮಳೆಯಿಂದಾಗಿ ಮೆಜೆಸ್ಟಿಕ್, ಶ್ರೀರಾಮಪುರ, ಶಿವಾನಂದ ವೃತ್ತದ ಕೆಲ ರಸ್ತೆಗಳ ಮೇಲೆಯೇ ನೀರು ಹರಿಯತು. ಅದರಲ್ಲೇ ವಾಹನಗಳು ಸಂಚರಿಸಿದವು. ರೈಲ್ವೆ ಕೆಳಸೇತುವೆಯಲ್ಲೂ ನೀರು ನಿಂತಿತ್ತು. ನೀರಿನಲ್ಲೇ ರಸ್ತೆ ದಾಟಲು ಮುಂದಾಗಿದ್ದ ಕೆಲ ವಾಹನಗಳು ಕೆಟ್ಟು ನಿಂತಿದ್ದು ಕಂಡುಬಂತು.

ರೇಸ್‌ಕೋರ್ಸ್ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ಗುಂಡಿಗಳನ್ನು ಅಗೆಯಲಾಗಿದೆ. ಮಳೆಯಿಂದಾಗಿ ಗುಂಡಿಯಲ್ಲಿ ನೀರು ತುಂಬಿಕೊಂಡು ರಸ್ತೆ ಮೇಲೆಯೇ ಹರಿಯಿತು.

’ನಗರದ ಬಹುತೇಕ ಕಡೆ ಮಳೆಯಾಗಿದೆ. ಗುಡುಗು–ಸಿಡಿಲು ಮಾತ್ರ ಇತ್ತು. ಗಾಳಿ ವೇಗವಾಗಿರಲಿಲ್ಲ. ರಸ್ತೆಯಲ್ಲಿ ನೀರು ನಿಂತಿದ್ದು ಬಿಟ್ಟರೆ ಬೇರೆ ಯಾವ ರೀತಿಯ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.