ಬಸವಕಲ್ಯಾಣ: ಐತಿಹಾಸಿಕ ತ್ರಿಪುರಾಂತ ಕೆರೆಯ ನೀರು ಶನಿವಾರ ಕೋಡಿ ಹರಿಸಿದ್ದರಿಂದ ಸುತ್ತಲಿನ ಪ್ರದೇಶದ ಹೊಲ ಹಾಗೂ ನಗರದ ಕೆಲ ಓಣಿಗಳಲ್ಲಿ ನೀರು ಹರಿದು ಅಪಾರ ಹಾನಿಯಾಗಿದೆ.
ಮಳೆಗಾಲ ಆರಂಭದಲ್ಲಿಯೇ ಮಳೆ ಸಮರ್ಪಕವಾಗಿ ಆಗಿದ್ದರಿಂದ ಕೆರೆ ತುಂಬಿತ್ತು. ಕೆಲ ದಿನಗಳ ಹಿಂದೆ ಸುರಿದ ಮಳೆಗೆ ಕೋಡಿ ಭಾಗದ ಗೋಡೆ ಕೊರೆದು ನೀರು ಹರಿದುಹೋಗಿತ್ತು. ಮಣ್ಣು ಹಾಕಿ ಮುಚ್ಚಲಾಗಿತ್ತು. ಮಳೆ ಹೆಚ್ಚಿದ್ದರಿಂದ ಕೆರೆಗೆ ಹಾನಿ ಸಂಭವಿಸುವ ಸಾಧ್ಯತೆ ಉಂಟಾಗಿದೆ. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ನೀರು ಹೋಗುವುದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
ಕೋಡಿ ಭಾಗದಲ್ಲಿ ಭದ್ರ ಹಾಗೂ ಅಗಲ ಗೋಡೆಯಿಲ್ಲ. ಚಿಕ್ಕ ಗೋಡೆಯಿದ್ದು, ಅಲ್ಲಿಗೆ ನೀರು ಮುಟ್ಟಿಯೇ ಇರಲಿಲ್ಲ. ಹೀಗಾಗಿ ಆ ಬಗ್ಗೆ ಯಾರೂ ಕಾಳಜಿ ವಹಿಸಿರಲಿಲ್ಲ. ಆದರೆ, ಈ ಸಲ 40 ವರ್ಷಗಳಲ್ಲಿ ಎಂದೂ ಸುರಿಯದಷ್ಟು ಮಳೆಯಾಗಿದೆ. ಈ ಚಿಕ್ಕ ಗೋಡೆ ಕೊಚ್ಚಿಕೊಂಡು ಹೋಗಬಹುದು ಎಂಬ ಭಯದಿಂದ ನಾಲೆಗೆ ನೀರು ಹರಿಸಲಾಗಿದೆ. ಇದರಿಂದಾಗಿ ಪ್ರತಾಪಪುರ, ಖಾನಾಪುರ, ಗೌರ, ಜಾನಾಪುರ, ಬೆಟಬಾಲ್ಕುಂದಾಕ್ಕೆ ಹೋಗುವ ರಸ್ತೆಗಳ ಸೇತುವೆಗಳು ಮೇಲಿನಿಂದ ನೀರು ಹೋಗಿ ವಾಹನ ಸಂಚಾರಕ್ಕೆ ತೊಂದರೆ ಆಯಿತು.
‘ನೀರು ಅಧಿಕಗೊಂಡು ಕೆರೆಗೆ ಹಾನಿ ಆಗಬಾರದು ಎಂಬ ಕಾರಣಕ್ಕೆ ಕೋಡಿ ಹತ್ತಿರ ಸಂಬಂಧಿತ ಇಲಾಖೆಯ ಸಿಬ್ಬಂದಿಯವರು ಠಿಕಾಣಿ ಹೂಡಿದ್ದಾರೆ. ಇತರೆಡೆಯೂ ನಿಗಾ ವಹಿಸಲಾಗಿದೆ’ ಎಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ಜಗನ್ನಾಥರೆಡ್ಡಿ ತಿಳಿಸಿದ್ದಾರೆ.
ತಾಲ್ಲೂಕಿನ ಖೇರ್ಡಾ(ಬಿ) ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯದ ಕೋಡಿಯಿಂದಲೂ ಹೆಚ್ಚುವರಿ ನೀರು ಹರಿಯುತ್ತಿದೆ. ಈ ಕಾರಣ ಖೇರ್ಡಾ(ಬಿ), ಧನ್ನೂರ ಮುಂತಾದ ಗ್ರಾಮಗಳ ಸೇತುವೆಗಳ ಮೇಲಿನಿಂದ ನೀರು ನಡೆದಿದೆ. ಜಮೀನುಗಳಲ್ಲಿ ನೀರು ನುಗ್ಗಿದೆ. ನಾಲೆಗೆ ಇಳಿಯಬಾರದು ಎಂದು ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ.
ನೀರಿಗಿಳಿದ ಶಾಸಕ:
ತಪ್ಪು ಮಾಹಿತಿಯಿಂದ ಆತಂಕ ಅತಿವೃಷ್ಟಿಯಾಗಿತ್ತು. ತ್ರಿಪುರಾಂತ ಕೆರೆ ಒಡೆದಿದೆ ಎಂಬ ಊಹಾಪೋಹ ಹರಡಿತ್ತು. ನಗರದ ಕೆಲ ಓಣಿ ಹಾಗೂ ಹೊಲಗಳಲ್ಲಿ ನೀರು ನುಗ್ಗಿದ್ದರಿಂದ ಹಾಗೂ ಸೊಂಟ ಮಟ್ಟದವರೆಗೆ ನೀರು ಹರಿದು ಹೋಗುತ್ತಿದ್ದರಿಂದ ಜನರು ಗಾಬರಿಗೊಂಡರು. ಕೆರೆ ತುಂಬಿದ್ದರಿಂದ ಮತ್ತು ಹೆಚ್ಚಿನ ನೀರು ಹರಿದು ಬರುತ್ತಿದ್ದ ಕಾರಣ ಅಪಾಯ ಸಂಭವಿಸಬಾರದು ಎಂಬ ಕಾರಣಕ್ಕೆ ಕೋಡಿ ಭಾಗದಿಂದ ಕೆಲ ಪ್ರಮಾಣದಲ್ಲಿ ನೀರು ಬಿಡಲಾಗಿತ್ತು. ‘ನೀರು ಹರಿದುಹೋಗುವ ನಾಲೆ ಪಕ್ಕದವರಿಗೆ ಮಾಹಿತಿ ನೀಡಿಯೇ ನೀರು ಬಿಡಲಾಯಿತು’ ಎಂದು ನೀರಾವರಿ ಇಲಾಖೆಯ ಎಇಇ ಸಂತೋಷ ಮಾಕಾ ತಿಳಿಸಿದರು. ಶಾಸಕ ಶರಣು ಸಲಗರ ಅವರು ಸೊಂಟಮಟ್ಟದ ನೀರಿನಲ್ಲಿಯೇ ನಿಂತು ನೀರು ಬಿಟ್ಟಿದ್ದರಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸಬೇಕು. ತಾಲ್ಲೂಕಿನ ಇತರೆಡೆಯೂ ಆಗಿರುವ ಅಪಾರ ಹಾನಿಯ ಸಮೀಕ್ಷೆ ನಡೆಸಿ ರೈತರ ನೆರವಿಗೆ ಧಾವಿಸಬೇಕು ಎಂದು ಲೈವ್ ವಿಡಿಯೋ ಮೂಲಕ ಸರ್ಕಾರಕ್ಕೆ ವಿನಂತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.