ADVERTISEMENT

ಬೀದರ್‌ | 300 ವಿದ್ಯಾರ್ಥಿಗಳಿಗೆ ಇಬ್ಬರೇ ಉಪನ್ಯಾಸಕರು

ಗಡಿ ತಾಲ್ಲೂಕಿನ ಔರಾದ್‌ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು 

ಪ್ರಜಾವಾಣಿ ವಿಶೇಷ
Published 18 ಆಗಸ್ಟ್ 2023, 4:18 IST
Last Updated 18 ಆಗಸ್ಟ್ 2023, 4:18 IST
ಔರಾದ್‌ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಕಟ್ಟಡ 
ಔರಾದ್‌ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಕಟ್ಟಡ    

–ಮನ್ಮಥ ಸ್ವಾಮಿ

ಔರಾದ್ (ಬೀದರ್‌ ಜಿಲ್ಲೆ): ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಒಟ್ಟು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಬ್ಬರೇ ಉಪನ್ಯಾಸಕರು ಪಾಠ ಮಾಡುತ್ತಿದ್ದಾರೆ. 

ಕಾಲೇಜಿಗೆ ಒಟ್ಟು 31 ಉಪನ್ಯಾಸಕರ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 13 ಹುದ್ದೆಗಳನ್ನು ಸರ್ಕಾರ ತುಂಬಿತ್ತು. ಜನವರಿಯಿಂದ ಇದುವರೆಗೆ 8 ಜನ ವರ್ಗಾವಣೆಗೊಂಡಿದ್ದಾರೆ. ಕಳೆದ ವರ್ಷ 3 ಜನ ಬೇರೆಡೆ ವರ್ಗಾವಣೆಯಾಗಿದ್ದರು. ಖಾಲಿಯಾದ ಹುದ್ದೆಗಳಿಗೆ ಬೇರೆಯವರನ್ನು ನಿಯೋಜಿಸಿಲ್ಲ. ಹಾಲಿ ಉಪನ್ಯಾಸಕರಲ್ಲಿ ಒಬ್ಬರು ಪ್ರಭಾರ ಪ್ರಾಚಾರ್ಯರಾಗಿದ್ದು, ಅವರ ವರ್ಗಾವಣೆಯೂ ಆಗಿದೆ. ಅವರು ಆದೇಶ ಪತ್ರದ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ಕಾಲೇಜಿನ ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಆಟೊಮೇಷನ್ ರೊಬೊಟಿಕ್, ಅಲ್ಟರ್‌ನೆಟಿವ್ ಎನರ್ಜಿ ಟೆಕ್ನಾಲಜಿ ಕೋರ್ಸ್‍ಗಳಿಗೆ ಇರಬೇಕಾದ 31 ಬೋಧನಾ ಸಿಬ್ಬಂದಿ ಪೈಕಿ ಇಬ್ಬರಷ್ಟೇ ಇದ್ದಾರೆ. 

ಕಾಲೇಜು ಆರಂಭವಾದ 2008ರಿಂದಲೂ ಇದುವರೆಗೆ ರಿಜಿಸ್ಟ್ರಾರ್‌ ಹುದ್ದೆ ಖಾಲಿ ಇದೆ. ಮೂವರು ಕಚೇರಿ ಸೂಪರಿಟೆಂಡೆಂಟ್‌ಗಳಲ್ಲಿ ಒಂದು, ನಾಲ್ಕು ಪ್ರಥಮ ದರ್ಜೆ ಸಹಾಯಕರು, ಮೂರು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಖಾಲಿ ಇವೆ. ಒಬ್ಬ ಬೆರಳಚ್ಚುಗಾರರು ಇತ್ತೀಚೆಗೆ ಬೀದರ್‌ ನಗರಕ್ಕೆ ನಿಯೋಜನೆಗೊಂಡಿದ್ದಾರೆ. 

‘ಆರು ಸೆಮಿಸ್ಟರ್ ಸೇರಿ ಸುಮಾರು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಗುಣಮಟ್ಟದ ಶಿಕ್ಷಣ ಕೊಡಲು ಪ್ರಯತ್ನಿಸಲಾಗುವುದು’ ಎಂದು ಪ್ರಭಾರ ಪ್ರಾಂಶುಪಾಲೆ ಶೈಲಜಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಮ್ಮ‌ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂದು ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದೇವೆ. ಆದರೆ, ಉಪನ್ಯಾಸಕರ ಕೊರತೆ ಇರುವುದು ಚಿಂತೆಗೀಡು ಮಾಡಿದೆ’ ಎಂದು ಪೋಷಕ ಸಂಜುರೆಡ್ಡಿ ಖರ್ಡಾ ಹೇಳಿದ್ದಾರೆ.

‘ಡಾ. ನಂಜುಂಡಪ್ಪ ವರದಿ ಶಿಫಾರಸ್ಸಿನಂತೆ ಹಿಂದುಳಿದ ತಾಲ್ಲೂಕಿನ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ನೀಡಿ ಅವರ ಬದುಕು ರೂಪಿಸುವ ಉದ್ದೇಶದಿಂದ ಆರಂಭವಾದ ಪಾಲಿಟೆಕ್ನಿಕ್ ಕಾಲೇಜು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆ ಮೇಲೆ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಕಾಳಜಿ ವಹಿಸಿ ಖಾಲಿ ಹುದ್ದೆ ತುಂಬಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.