
ಔರಾದ್: ಪಟ್ಟಣದ ಉದ್ಭವಲಿಂಗ ಅಮರೇಶ್ವರ ಜಾತ್ರೆಯ ಅಂಗವಾಗಿ ಸೋಮವಾರ ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಆಯೋಜಿಸಲಾದ ಅಂತರರಾಜ್ಯ ಪಶುಪ್ರದರ್ಶನ ಗಮನ ಸೆಳೆಯಿತು.
ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಂದ ಬಂದಿದ್ದ ನೂರಾರು ರೈತರು ತಮ್ಮ ಅತ್ಯುತ್ತಮ ತಳಿಯ ಹೋರಿ-ಹಸುಗಳ ಪ್ರದರ್ಶನದಿಂದ ಪಶುಪ್ರಿಯರ ಮನಸೂರೆಗೊಂಡರು.
ಮೌಲ್ಯ ಮಾಪಕರಾಗಿದ್ದ ಪಶುವೈದ್ಯರು, ಪ್ರದರ್ಶನದಲ್ಲಿ ಪಾಲ್ಗೊಂಡ ಪಶುಗಳ ಜಾತಿ, ದೇಹದ ಕಟ್ಟಳೆ, ಆರೋಗ್ಯ ಸ್ಥಿತಿ, ತೂಕ, ಸಂರಕ್ಷಣೆ ಹಾಗೂ ಆಹಾರ ಪದ್ಧತಿ ಪರಿಶೀಲಿಸಿದರು. ಈ ವೇಳೆ ಮಹಾರಾಷ್ಟ್ರದ ದೇವರಜನ್ ಗ್ರಾಮದ ನಾರಾಯಣ ಅವರ ಎರಡೂವರೆ ವರ್ಷದ ದೇವಣಿ ತಳಿ ಹೋರಿ ₹ 10 ಸಾವಿರ ಪ್ರಥಮ ಚಾಂಪಿಯನ್ ಬಹುಮಾನ ನಡೆಯಿತು. ಈ ಹೋರಿ ಮಾರುಕಟ್ಟೆ ಮೌಲ್ಯ ₹ 5 ಲಕ್ಷ ಇದೆ.
ಮಹಾರಾಷ್ಟ್ರದ ಜಲಕೋಟ್‌ನ ತಿರುಪತಿ ದೇವರಾಜ ಅವರ ನಾಲ್ಕು ಹಲ್ಲಿನ ಹೋರಿ ದ್ವಿತೀಯ ಬಹುಮಾನ ₹ 7,500 ಪಡೆದುಕೊಂಡಿದೆ. ಔರಾದ್ ರೈತ ಖಂಡು ಕಿಶನರಾವ ಅವರ ದೇಶಿ ಆಕಳು ₹ 5 ಸಾವಿರ ತೃತೀಯ ಬಹುಮಾನ ಗಳಿಸಿದೆ. ಉಳಿದಂತೆ ಪ್ರದರ್ಶನಲ್ಲಿ ಪಾಲ್ಗೊಂಡ ಒಟ್ಟು 15 ತಳಿಯ ಜಾನುವಾರಿಗೆ ಪ್ರಥಮ ₹ 1 ಸಾವಿರ ದ್ವಿತೀಯ ಬಹುಮಾನ ₹ 500 ವಿತರಿಸಲಾಯಿತು.
ತಹಶೀಲ್ದಾರ್ ಮಹೇಶ ಪಾಟೀಲ, ತಾ.ಪಂ. ಇಒ ಕಿರಣ ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಸಂತೋಷ ಆನಂದ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಘುನಾಥ ಬಿರಾದಾರ, ಪಿಕೆಪಿಎಸ್ ಅಧ್ಯಕ್ಷ ಧೊಂಡಿಬಾ ನರೋಟೆ, ರವಿ ಮೀಸೆ, ಶಿವರಾಜ ಅಲ್ಮಾಜೆ, ಪ್ರಕಾಶ ಘುಳೆ, ಪ್ರಕಾಶ ಉಚ್ಚೆ, ತಾನಾಜಿ, ನಿಖಿಲ್ ಡೊಂಬಾಳೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.