
ಕಮಠಾಣ (ಜನವಾಡ): ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಕ್ರೀಡಾಪಟುಗಳ ಕಲರವ ಕಂಡು ಬಂದಿತು.
ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾದ ಎರಡು ದಿನಗಳ ಬೀದರ್ ವಿಶ್ವವಿದ್ಯಾಲಯದ ಪ್ರಥಮ ಅಂತರ ಕಾಲೇಜು ಪುರುಷ ಹಾಗೂ ಮಹಿಳಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿಶ್ವವಿದ್ಯಾಲಯದ ಅಧೀನದ 25 ಕಾಲೇಜುಗಳ 322 ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡರು.
ಮೊದಲ ದಿನ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 100 ಮೀ ಓಟ, 1,500 ಮೀ ಓಟ, 4*100 ಮೀ ರಿಲೇ, ಜಾವೆಲಿನ್ ಥ್ರೋ, ಶಾಟ್‍ಪಟ್, ಉದ್ದ ಜಿಗಿತ, ಎತ್ತರ ಜಿಗಿತ ಸ್ಪರ್ಧೆಗಳು ನಡೆದವು. ಪುರುಷರ ವಿಭಾಗದಲ್ಲಿ 5,000 ಮೀ ಓಟದ ಸ್ಪರ್ಧೆ ಜರುಗಿತು.
ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗಿಯಾದರು. ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು.
‘ಕ್ರೀಡೆಯಿಂದ ಆರೋಗ್ಯ, ಆತ್ಮಸ್ಥೈರ್ಯ ವೃದ್ಧಿ’: ‘ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ಹಾಗೂ ಆತ್ಮಸ್ಥೈರ್ಯ ವೃದ್ಧಿಸುತ್ತದೆ’ ಎಂದು ಹುಬ್ಬಳ್ಳಿ ಎಸ್.ಜೆ.ವಿ.ಎಸ್. ಕಾಲೇಜು ನಿರ್ದೇಶಕಿ ಮಹೇಶ್ವರಿ ಉಡಗಟ್ಟಿ ಹೇಳಿದರು.
ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಬೀದರ್ ವಿಶ್ವವಿದ್ಯಾಲಯದ ಮೊದಲ ಅಂತರ ಕಾಲೇಜು ಪುರುಷ ಮತ್ತು ಮಹಿಳಾ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿ,‘ಯುವ ಜನರಿಗೆ ದೈಹಿಕ ಸದೃಢತೆ ಬಹಳ ಅವಶ್ಯಕವಾಗಿದೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ಮಾತನಾಡಿ,‘ಕ್ರೀಡೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ’ ಎಂದು ಹೇಳಿದರು.
‘ಬೀದರ್ ವಿಶ್ವವಿದ್ಯಾಲಯದ ಅನೇಕ ಕ್ರೀಡಾಪಟುಗಳು 2023-24 ಹಾಗೂ 2024-25ನೇ ಸಾಲಿನಲ್ಲಿ ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ’ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಪರಮೇಶ್ವರ್ ನಾಯ್ಕ ಮಾತನಾಡಿ,‘ಕ್ರೀಡೆ ವ್ಯಕ್ತಿಯನ್ನು ಕ್ರಿಯಾಶೀಲಗೊಳಿಸುತ್ತದೆ. ಕ್ರೀಡೆಯ ಮಹತ್ವ ಎಲ್ಲರಿಗೂ ತಿಳಿಸಬೇಕಾಗಿದೆ’ ಎಂದು ಹೇಳಿದರು.
ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಕೆ.ಸಿ.ವೀರಣ್ಣ ಮಾತನಾಡಿದರು.
ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಕಮಠಾಣೆ, ಪ್ರೊ.ಶಿವನಾಥ ಪಾಟೀಲ, ಸಚಿನ್ ಮಲ್ಕಾಪುರೆ, ಪ್ರೊ.ವಿಠ್ಠಲದಾಸ್ ಪ್ಯಾಗೆ, ಅರ್ಜುನ ಕನಕ, ಅಬ್ದುಲ್ ಸತ್ತಾರ್, ಕವಿರತ್ನ ಕಾಳಿದಾಸ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಓಂಕಾರ ಮಾಶೆಟ್ಟಿ, ಘೋಡಂಪಳ್ಳಿಯ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎನ್.ಎಸ್.ಕುಲಕರ್ಣಿ ಹಾಗೂ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.