ADVERTISEMENT

ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಳಸುವಂತೆ ದಲಿತ ಸಂಘಟನೆಗಳ ಮನವಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 16:28 IST
Last Updated 11 ಅಕ್ಟೋಬರ್ 2020, 16:28 IST

ಬೀದರ್‌: 2019-20ನೇ ಸಾಲಿನ ಎಸ್.ಸಿ.ಪಿ./ಟಿ.ಎಸ್.ಪಿ. ಉಪ ಯೋಜನೆ ಅಡಿ ಬಳಕೆಯಾಗದೆ ಉಳಿದ ₹ 19 ಸಾವಿರ ಕೋಟಿ ಅನುದಾನವನ್ನು ಎಸ್.ಸಿ., ಎಸ್.ಟಿ. ಅಭಿವೃದ್ಧಿ ನಿಗಮಗಳಿಗೆ ವರ್ಗಾಯಿಸಿ ನಿರುದ್ಯೋಗಿ ಯುವ ಸಮುದಾಯಕ್ಕೆ ನೇರ ಸಾಲ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಆಗ್ರಹಿಸಿವೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗಾಗಿ ಎಸ್.ಸಿ.ಪಿ. ಟಿ.ಎಸ್.ಪಿ. ಉಪ ಯೋಜನೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಸರಕಾರ 2019-20ನೇ ಸಾಲಿನ ಬಜೆಟ್‍ನಲ್ಲಿ ಶೇ. 24.1 ರಷ್ಟು ಮೀಸಲಿರಿಸಿದೆ. ₹ 30.405 ಕೋಟಿ ಅನುದಾನವನ್ನು ವಿವಿಧ ಇಲಾಖಾವಾರು ಹಂಚಿಕೆಯನ್ನೂ ಮಾಡಿದೆ ಎಂದು ತಿಳಿಸಿವೆ.

ಒಟ್ಟು ಅನುದಾನದಲ್ಲಿ ಕೇವಲ ₹11.861 ಕೋಟಿ ಮಾತ್ರ ಬಳಕೆ ಮಾಡಲಾಗಿದೆ. ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಲೋಪ ಎಸಗಿದ್ದಾರೆ. ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳಿಗೆ ತಡೆ ಉಂಟು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿವೆ.

ADVERTISEMENT

ಎಸ್.ಸಿ.ಪಿ., ಟಿ.ಎಸ್.ಪಿ. ಉಪಯೋಜನೆಯ ಉಸ್ತುವಾರಿ ಇಲಾಖೆ (ನೋಡಲ್) ಆಗಿರುವ ಸಮಾಜ ಕಲ್ಯಾಣ ಇಲಾಖೆಯ ಸಚಿವ ಗೋವಿಂದ ಕಾರಜೋಳ ಅವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ದುರಂತದ ಸಂಗತಿ ಎಂದು ಹೇಳಿವೆ.

ಬಳಕೆಯಾಗದ ₹19 ಸಾವಿರ ಕೋಟಿ ಅನುದಾನವನ್ನು ತಕ್ಷಣ ಎಸ್.ಸಿ, ಎಸ್.ಟಿ. ಅಭಿವೃದ್ಧಿ ನಿಗಮಗಳಿಗೆ ವರ್ಗಾಯಿಸಿ, ನಿರುದ್ಯೋಗಿ ಯುವ ಸಮುದಾಯಕ್ಕೆ ನೇರ ಸಾಲ ಒದಗಿಸಬೇಕು. ಈ ಮೂಲಕ ನಿರುದ್ಯೋಗಿಗಳು ಉದ್ಯೋಗ ಕೈಗೊಳ್ಳಲು ನೆರವಾಗಬೇಕು ಎಂದು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ವಿಭಾಗೀಯ ಸಂಚಾಲಕ ರವಿಕುಮಾರ ವಾಘಮಾರೆ, ಡಿ.ಎಸ್.-4 ಕರ್ನಾಟಕದ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ದಲಿತ ಸಂಘರ್ಷ ಸಮಿತಿ, ಕರ್ನಾಟಕ (ಭೀಮ ಮಾರ್ಗ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಚಿಟ್ಟಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಬಿ.ಕೆ. ಬಣ) ಜಿಲ್ಲಾ ಸಂಚಾಲಕ ಓಂಪ್ರಕಾಶ ಭಾವಿಕಟ್ಟಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.