ADVERTISEMENT

600 ಆರೋಗ್ಯ ಸಿಬ್ಬಂದಿಗೆ ಲಸಿಕೆ, ಬೀದರ್ ಜಿಲ್ಲೆಗೆ 5,500 ಡೋಸ್ ‘ಕೊವಿಶೀಲ್ಡ್’

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 14:26 IST
Last Updated 15 ಜನವರಿ 2021, 14:26 IST
ಕಲಬುರ್ಗಿಯಿಂದ ಬಂದ ಕೊವಿಶೀಲ್ಡ್ ಲಸಿಕೆ ಪೆಟ್ಟಿಗೆಗಳನ್ನು ಆರೋಗ್ಯ ಸಿಬ್ಬಂದಿ ಬೀದರ್‌ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಆವರಣದಲ್ಲಿ ವಾಹನದಿಂದ ಕೆಳಗೆ ಇಳಿಸಿಕೊಂಡರು
ಕಲಬುರ್ಗಿಯಿಂದ ಬಂದ ಕೊವಿಶೀಲ್ಡ್ ಲಸಿಕೆ ಪೆಟ್ಟಿಗೆಗಳನ್ನು ಆರೋಗ್ಯ ಸಿಬ್ಬಂದಿ ಬೀದರ್‌ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಆವರಣದಲ್ಲಿ ವಾಹನದಿಂದ ಕೆಳಗೆ ಇಳಿಸಿಕೊಂಡರು   

ಬೀದರ್: ಕೊರೊನಾ ಲಸಿಕೆ ‘ಕೊವಿಶೀಲ್ಡ್’ ಗಡಿ ಜಿಲ್ಲೆ ಬೀದರ್‌ಗೂ ತಲುಪಿದೆ.

ಕಲಬುರ್ಗಿಯಿಂದ ವಾಹನದಲ್ಲಿ ಬಂದ 5,500 ಡೋಸ್ ಲಸಿಕೆಗೆ ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಪೂಜೆ ಸಲ್ಲಿಸಿ, ಆರತಿ ಬೆಳಗಿ ಸ್ವಾಗತಿಸಿದರು.

ಜಿಲ್ಲೆಯಲ್ಲಿ ಒಟ್ಟು 72 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಮೊದಲ ಹಂತದಲ್ಲಿ ಶನಿವಾರ (ಜ.16) ಬೀದರ್‌ನ ಬ್ರಿಮ್ಸ್, ತಾಲ್ಲೂಕಿನ ಆಣದೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಹುಮನಾಬಾದ್, ಔರಾದ್, ಬಸವಕಲ್ಯಾಣ ಹಾಗೂ ಭಾಲ್ಕಿ ತಾಲ್ಲೂಕು ಆಸ್ಪತ್ರೆಯ ಕೇಂದ್ರದಲ್ಲಿ ತಲಾ 100 ರಂತೆ 600 ಜನ ಆರೋಗ್ಯ ಸಿಬ್ಬಂದಿಗೆ ಲಸಿಕೆ ಕೊಡಲಾಗುವುದು. ಲಸಿಕಾ ಕಾರ್ಯಕ್ಕೆ ಈಗಾಗಲೇ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ADVERTISEMENT

ಜಿಲ್ಲೆಯಲ್ಲಿ ಈವರೆಗೆ ಲಸಿಕೆಗೆ 10,240 ಆರೋಗ್ಯ ಸಿಬ್ಬಂದಿ ಹೆಸರು ನೋಂದಾಯಿಸಿದ್ದಾರೆ. ಇವರಲ್ಲಿ ಬೀದರ್ ತಾಲ್ಲೂಕಿನ 4,734, ಭಾಲ್ಕಿ 1,312, ಬಸವಕಲ್ಯಾಣ, 1,463, ಹುಮನಾಬಾದ್ 1,487 ಹಾಗೂ ಔರಾದ್‍ನ 1,240 ಸಿಬ್ಬಂದಿ ಸೇರಿದ್ದಾರೆ.

ಜಿಲ್ಲೆಯಲ್ಲಿ ಮೊದಲು ಆರೋಗ್ಯ ಕಾರ್ಯಕರ್ತರು, ಪೊಲೀಸ್, ಕಂದಾಯ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಲಸಿಕೆ ನೀಡಲಾಗುವುದು. ಸರ್ಕಾರದಿಂದ ಸೂಚನೆ ಬಂದ ನಂತರ ಇತರರಿಗೂ ಲಸಿಕೆ ಕೊಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.