ADVERTISEMENT

ವಚನ ಜಾತ್ರೆ-2022: ‘ಮಾನಸಿಕ ಒತ್ತಡದಲ್ಲಿ ಸಿಲುಕಿದ ಮಾನವ’

ಪಟ್ಟದ್ದೇವರ 23ನೇಯ ಸ್ಮರಣೋತ್ಸವಕ್ಕೆ ನಾಡೋಜ ಗೊರುಚ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 3:25 IST
Last Updated 22 ಏಪ್ರಿಲ್ 2022, 3:25 IST
ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ನಡೆದ ವಚನ ಜಾತ್ರೆ, ಪಟ್ಟದ್ದೇವರ 23ನೇ ಸ್ಮರಣೋತ್ಸವವನ್ನು ನಾಡೋಜ ಗೊ.ರು.ಚನ್ನಬಸಪ್ಪ ಉದ್ಘಾಟಿಸಿದರು. ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ಇದ್ದರು
ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ನಡೆದ ವಚನ ಜಾತ್ರೆ, ಪಟ್ಟದ್ದೇವರ 23ನೇ ಸ್ಮರಣೋತ್ಸವವನ್ನು ನಾಡೋಜ ಗೊ.ರು.ಚನ್ನಬಸಪ್ಪ ಉದ್ಘಾಟಿಸಿದರು. ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ಇದ್ದರು   

ಭಾಲ್ಕಿ: ‘ಇಂದು ಎಲ್ಲೆಡೆ ಅನಾಚಾರ, ಭ್ರಷ್ಟಾಚಾರ, ಅನೈತಿಕ ಘಟನೆಗಳು ನಡೆದು ನಿಜವಾದ ಅರ್ಥದಲ್ಲಿ ಮಾನವ ಮಾನಸಿಕ ಒತ್ತಡದ ಹುತ್ತಕ್ಕೆ ಬಿದ್ದಂತಾಗಿದೆ.

ಇಂಥ ಹುತ್ತದಿಂದ ಹೊರಬರುವ ಏಕೈಕ ಮಾರ್ಗವೆಂದರೆ, ಶರಣರ ವಚನಗಳ ಅಧ್ಯಯನ’ ಎಂದು ನಾಡೋಜ ಗೊ.ರು.ಚನ್ನಬಸಪ್ಪ ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ವಚನ ಜಾತ್ರೆ-2022 ಮತ್ತು ಡಾ.ಚನ್ನಬಸವ ಪಟ್ಟದ್ದೇವರ 23ನೇ ಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ADVERTISEMENT

12ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವೂ ಸಾರ್ವಕಾಲಿಕ ಮೌಲ್ಯಗಳಾಗಿವೆ. ಇವುಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ನಡೆದರೆ ಸಮಾಜ ಅಭಿವೃದ್ಧಿ ಆಗಲಿದೆ ಎಂದರು.

ವಚನ ಸಾಹಿತ್ಯವೊಂದು ವಿನೂತನ ಸಂವಿಧಾನ. ಶರಣರು ತಮ್ಮ ಅನುಭಾವದ ಮೂಲಕ ರಚಿಸಿರುವ ವಚನಗಳಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಶರಣರ ಒಂದೊಂದು ವಚನಗಳು ಅರ್ಥಪೂರ್ಣವಾಗಿವೆ. ನ್ಯಾಯ, ಸ್ವಾತಂತ್ರ್ಯ, ಸತ್ಯ, ಪ್ರಾಮಾಣಿಕತೆ, ವಿನಯಶೀಲತೆ, ಕಾಯಕ, ದಾಸೋಹ ಎಲ್ಲವೂ ವಚನಗಳಲ್ಲಿ ಅಡಗಿವೆ. ಹಾಗಾಗಿ ಹಿಂದಿಗಿಂತಲೂ ಇಂದು ವಚನ ಅಧ್ಯಯನದ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿದರು. ಬೆಂಗಳೂರಿನ ಹಿರಿಯ ಸಾಹಿತಿ ಡಾ.ಬಸವರಾಜ ಸಾದರ್ ಅನುಭಾವ ಮಂಡಿಸಿದರು. ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಕೌಲಗಾ ಷಣ್ಮುಖ ಶಿವಯೋಗಿಗಳ ಮಠದ ಅಭಿನವ ಷಣ್ಮುಖ ಸ್ವಾಮೀಜಿ, ಸಿದ್ಧರಾಮೇಶ್ವರ ಪಟ್ಟದ್ದೇವರು, ಸಿದ್ಧರಾಮೇಶ್ವರ ಶರಣರು ಬೆಲ್ದಾಳ, ಪಂಚಾಕ್ಷರಿ ಸ್ವಾಮೀಜಿ, ಡಾ.ಅಕ್ಕ ಗಂಗಾಂಬಿಕಾ ಸಾನ್ನಿಧ್ಯ ವಹಿಸಿದ್ದರು.

ಭಾರತೀಯ ಬಸವ ಬಳಗ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಕುಂತಲಾ ಬೆಲ್ದಾಳೆ ಬಸವ ಗುರುವಿನ ಪೂಜೆ ನೆರವೇರಿಸಿದರು. ನಾರಂಜಾ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಜಾನಪದ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ, ಬಿಜಿಪಿ ಮುಖಂಡ ಗುರುನಾಥ ಕೊಳ್ಳುರು, ಉದ್ಯಮಿ ಜೈರಾಜ ಖಂಡ್ರೆ, ರುದ್ರಪ್ಪ ಬೆಂಗಳೂರು, ಬುಡಾ ಅಧ್ಯಕ್ಷ ಬಾಬು ವಾಲಿ, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಉಪಾಧ್ಯಕ್ಷೆ ರಾಜೇಶ್ವರಿ ಮೋರೆ ಇದ್ದರು. ಡಾ.ಚನ್ನಬಸವ ಪಟ್ಟದ್ದೇವರು ಯುವಕ ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಮಲ್ಲಮ್ಮ ಆರ್ ಪಾಟೀಲ ವಂದಿಸಿದರು. ಕುಮಾರಿ ಪುಷ್ಪಾಂಜಲಿ ಪಟ್ನೆ ವಚನ ನೃತ್ಯ ನಡೆಸಿಕೊಟ್ಟರು.

ಗ್ರಂಥ ಬಿಡುಗಡೆ: ಡಾ.ಬಸವಲಿಂಗ ಪಟ್ಟದ್ದೇವರು ಬರೆದ ಮಕ್ಕಳಿಗಾಗಿ ಪಂಚಾಚಾರ(ಕನ್ನಡ), ಡಾ.ಬಸವರಾಜ ಸಾದರ ಅವರು ಬರೆದ ವಚನ ಪುರುಷಾರ್ಥ ಮತ್ತು ಷಣ್ಮುಖಯ್ಯ ಸ್ವಾಮಿ ಅವರು ಬರೆದ ಮಹಾದಾಸೋಹಿ ಶರಣ ಬಸವೇಶ್ವರ ಗ್ರಂಥವನ್ನು ಹಿರಿಯರು ಚಿಂತಕ ಗೊ.ರು.ಚನ್ನಬಸಪ್ಪ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.