
ಬೀದರ್: ಲಿಂಗಾಯತ ಧರ್ಮ ಗ್ರಂಥ ವಚನ ಸಾಹಿತ್ಯದ ಭವ್ಯ ಮೆರವಣಿಗೆ ಹಾಗೂ ಅದಕ್ಕೆ ಪಟ್ಟಾಭಿಷೇಕ ಮಾಡುವುದರೊಂದಿಗೆ ನಗರದ ಬಸವಗಿರಿಯಲ್ಲಿ ಏರ್ಪಡಿಸಿದ್ದ ಮೂರು ದಿನಗಳ 24ನೇ ವಚನ ವಿಜಯೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ ವಿದ್ಯುಕ್ತ ತೆರೆ ಬಿತ್ತು.
ಬೆಳಿಗ್ಗೆ ನಗರದ ಬಸವೇಶ್ವರ ವೃತ್ತದಿಂದ ಪಾಪನಾಶ ಸಮೀಪದ ಬಸವಗಿರಿ ತನಕ ಭವ್ಯ ಮೆರವಣಿಗೆ ನಡೆಯಿತು. ಅಪಾರ ಸಂಖ್ಯೆಯ ಶರಣ–ಶರಣೆಯರು ಶ್ವೇತವಸ್ತ್ರ ಧರಿಸಿ, ಷಟಕೋನ ಚಿಹ್ನೆ ಇರುವ ಸ್ಕಾರ್ಫ್ ಧರಿಸಿ, ತಲೆಯ ಮೇಲೆ ವಚನ ಸಾಹಿತ್ಯ ಹೊತ್ತುಕೊಂಡು ಹೆಜ್ಜೆ ಹಾಕಿದರು. ಮಾರ್ಗದುದ್ದಕ್ಕೂ ವಿಶ್ವಗುರು ಬಸವಣ್ಣನವರಿಗೆ ಜಯವಾಗಲಿ, ವಚನ ಸಾಹಿತ್ಯಕ್ಕೆ ಜಯವಾಗಲಿ, ವಚನ ವಿಜಯೋತ್ಸವಕ್ಕೆ ಜಯವಾಗಲಿ ಎಂದು ಘೋಷಣೆಗಳನ್ನು ಹಾಕಿದರು.
ಮೆರವಣಿಗೆಯಲ್ಲಿ 30 ಅಡಿ ಎತ್ತರದ ಬಸವೇಶ್ವರರ ಪುತ್ಥಳಿ ಗಮನ ಸೆಳೆಯಿತು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಮಡಿವಾಳ ಮಾಚಿದೇವರ ಸೇರಿದಂತೆ ಇತರೆ ಶರಣರ ವೇಷಧಾರಿಗಳಾಗಿ ಮಕ್ಕಳು ಒಂಟೆ ಮೇಲೆ ಕುಳಿತು ಗಮನ ಸೆಳೆದರು. ಷಟಸ್ಥಲ ಧ್ವಜ ಬೀಸುತ್ತ ವಚನಗಳಿಗೆ ಮೈಮರೆತು ಭಕ್ತಿಭಾವದಿಂದ ಹೆಜ್ಜೆ ಹಾಕಿದರು. ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ, ನಿವೃತ್ತ ಐಎಎಸ್ ಅಧಿಕಾರಿ, ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸಿ. ಸೋಮಶೇಖರ್ ಅವರು ವಚನ ಪಠಣ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆ ಸಮಿತಿ ಸಂಯೋಜಕ ರಾಜೇಂದ್ರಕುಮಾರ ಗಂದಗೆ ದಂಪತಿ ಗುರುಪೂಜೆಗೈದರು. ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನ್ಯೂಜಿಲೆಂಡ್ ಬಸವ ಸಮಿತಿ ಅಧ್ಯಕ್ಷ ಲಿಂಗಣ್ಣ ಕಲಬುರಗಿ ಷಟಸ್ಥಲ ಧ್ವಜಾರೋಹಣಗೈದರು. ಕಲ್ಪನಾ ಕರಬಸಪ್ಪ ಬೀದೆ ದಂಪತಿ ಗುರುವಚನ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡಿದರು.
ಮೆರವಣಿಗೆಯಲ್ಲಿ ಠಾಣಾಕುಶನೂರಿನ ಸಿದ್ಧಲಿಂಗ ಸ್ವಾಮೀಜಿ, ಶಿವಾನಂದ ದೇವರು, ಸತ್ಯಕ್ಕತಾಯಿ, ಶಾಸಕ ಡಾ. ಶೈಲೆಂದ್ರ ಕೆ. ಬೆಲ್ದಾಳೆ, ಗುರುನಾಥ ಕೊಳ್ಳೂರ, ಸೋಮಶೇಖರ ಪಾಟೀಲ ಗಾದಗಿ, ಸುರೇಶ ಚನಶೆಟ್ಟಿ, ಜೈರಾಜ ಖಂಡ್ರೆ, ಶಿವಶಂಕರ ಕಾಮಶೆಟ್ಟಿ, ವಿರೂಪಾಕ್ಷ ಗಾದಗಿ, ಮಹಾಲಿಂಗಪ್ಪ ಬೆಲ್ದಾಳೆ, ಶಕುಂತಲಾ ಬೆಲ್ದಾಳೆ, ಬಸವರಾಜ ಪಾಟೀಲ, ಪ್ರದೀಪ ಬಿರಾದಾರ, ರವೀಂದ್ರ ಕೊಳಕೂರ, ಆಕಾಶ ಖಂಡಾಳೆ, ಧನರಾಜ ಹಂಗರಗಿ, ಅನಿಲ ಪಾಟೀಲ, ವೀರಶೆಟ್ಟಿ ಪಟ್ನೆ, ಮಲ್ಲಪ್ಪ ಗಿರಿ ಮತ್ತಿತರರು ಪಾಲ್ಗೊಂಡಿದ್ದರು.
ವಚನಗಳನ್ನು ರಕ್ಷಿಸಿದ ಅತ್ಯಂತ ಮಹತ್ವದ ದಿನವಿಂದು. ನಾವೆಲ್ಲರೂ ಲಿಂಗಾಯತ ಎನ್ನುವುದು ಮರೆಯಬಾರದು. ನಡೆ-ನುಡಿ ಒಂದಾಗಿರಬೇಕು. ವಿಶ್ವದೆಲ್ಲೆಡೆ ವಚನ ವಿಜಯೋತ್ಸವ ಆಚರಿಸುವ ದಿನ ಬರುತ್ತದೆ–ಶಿವಾನಂದ ಸ್ವಾಮೀಜಿ ಪೀಠಾಧಿಪತಿ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠ
ಜಗ ಬದುಕಲಿ ಜನ ಬದುಕಲೆಂದು ಬಸವಾದಿ ಶರಣರು ಪ್ರಾಣತ್ಯಾಗ ಮಾಡಿ ವಚನ ಸಾಹಿತ್ಯವನ್ನು ರಚಿಸಿ ರಕ್ಷಿಸಿದ್ದಾರೆ. ಕಲ್ಯಾಣ ಕ್ರಾಂತಿಯ ಫಲವಾಗಿ ಸ್ವಾತಂತ್ರ್ಯತೆ ಸಮಾನತೆಗೆ ಬೆಲೆ ಬಂದಿದೆಗಂಗಾಂಬಿಕಾ ಅಕ್ಕ ಅಧ್ಯಕ್ಷೆ ಬಸವ ಸೇವಾ ಪ್ರತಿಷ್ಠಾನ
ಬಸವತತ್ವ ಸಮಾನತೆ ಮಾನವೀಯತೆ ಮತ್ತು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಶಾಂತಿಯುತ ಮಾರ್ಗ ಧರ್ಮವಾಗಿದೆಬಸವಲಿಂಗ ಪಟ್ಟದ್ದೇವರು ಅಧ್ಯಕ್ಷ ಬಸವಕಲ್ಯಾಣ ಅನುಭವ ಮಂಟಪ
ಲಿಂಗಾಯತ ಎಂಬುದು ಜಾತಿಯಲ್ಲ ಅದೊಂದು ಧರ್ಮ. ಲಿಂಗಾಯತ ಎಂಬುದು ಒಂದು ಸ್ವತಂತ್ರ ಧರ್ಮ. ಕಾಯಕ ಮೊದಲು ಎಂದು ಬೆವರಿಗೆ ಬೆಲೆ ಕೊಟ್ಟಿದ್ದು ವಚನ ಪರಂಪರೆಗುರುಬಸವ ಸ್ವಾಮೀಜಿ ಪಾಂಡೋಮಟ್ಟಿ
‘ವೈಚಾರಿಕ ತಳಹದಿಯ ಮೇಲೆ ಸಮಾಜ ಕಟ್ಟಬೇಕು ಎನ್ನುವುದು ಬಸವಾದಿ ಶರಣರ ಆಶಯವಾಗಿತ್ತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು. ನಗರದ ಬಸವಗಿರಿಯಲ್ಲಿ ಭಾನುವಾರ ಸಂಜೆ ನಡೆದ ವಚನ ಸಾಹಿತ್ಯಕ್ಕೆ ಪಟ್ಟಾಭಿಷೇಕ ಹಾಗೂ ಗುರುಬಸವ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು. 12ನೇ ಶತಮಾನದಲ್ಲಿ ಬಸವಾದಿ ಶರಣರು ಇಡೀ ಜಗತ್ತಿನಲ್ಲಿ ಜಾತಿ ರಹಿತ ಅಸ್ಪೃಶ್ಯತೆ ಮೇಲು-ಕೀಳು ಮೂಢನಂಬಿಕೆಗಳನ್ನು ತೊಡೆದು ಹಾಕಿ ವೈಜ್ಞಾನಿಕ ವೈಚಾರಿಕ ತಳಹದಿಯ ಮೇಲೆ ಸಮ ಸಮಾಜ ನಿರ್ಮಿಸಲು ಶ್ರಮಿಸಿದ್ದರು. ಶರಣರು ತಮ್ಮ ಪ್ರಾಣ ತ್ಯಾಗ ಮಾಡಿ ವಚನ ಸಾಹಿತ್ಯ ಸಂರಕ್ಷಣೆ ಮಾಡಿದ್ದಾರೆ. ಅದರ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣವಾಗಬೇಕು. ಭೌತಿಕವಾಗಿ ಎಷ್ಟೇ ಪ್ರಗತಿಯಾದರೂ ವಿಜ್ಞಾನ ಮುಂದುವರೆದಿದೆ. ಆದರೆ ಜಗತ್ತಿನಲ್ಲಿ ಆತಂಕವಿದೆ. ಇಂದಿಗೂ ಮೌಢ್ಯತೆ ಕಂದಾಚಾರ ಅಸ್ಪೃಶ್ಯತೆ ಜಾತಿಯತೆ ದ್ವೇಷ ದುರಾಸೆ ಅನಿಷ್ಠಗಳು ಹೋಗಿಲ್ಲ. ಇವೆಲಕ್ಕೂ ವಚನ ಸಾಹಿತ್ಯದಲ್ಲಿ ಪರಿಹಾರವಿದೆ. ಇಡೀ ಜಗತ್ತಿಗೆ ಬಸವ ತತ್ವ ಪ್ರಸಾರ -ಪ್ರಚಾರ ಮಾಡುವ ಉದ್ದೇಶದಿಂದ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ಸಚಿವ ರಹೀಂ ಖಾನ್ ಮಾತನಾಡಿ ವಚನ ಸಾಹಿತ್ಯದ ಬಗ್ಗೆ ಹೆಮ್ಮೆ ಮತ್ತು ವಿಶ್ವಾಸವಿದೆ. ಪ್ರತಿದಿನ ವಚನ ಹೇಳಿದ ರೀತಿಯಲ್ಲಿ ನಾವೆಲ್ಲರೂ ಸಾಗಬೇಕು. ದೇವರೊಬ್ಬನೆ ಆತ ಸರ್ವವ್ಯಾಪಿಯಾಗಿದ್ದಾನೆ. ಶರಣರು ಹೇಳಿದಂತೆ ನಡೆದರೆ ಸಮೃದ್ಧ ರಾಷ್ಟ್ರ ಕಟ್ಟುವಲ್ಲಿ ಸಂದೇಹವಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.