ADVERTISEMENT

ಕೃಷಿಕರ ಮಕ್ಕಳಿಗೆ ವಿವಿಧ ಕೋರ್ಸ್‌ಗಳು

ತ್ವರಿತ ಉದ್ಯೋಗ, ಸ್ವಾವಲಂಬನೆಗೆ ಸೂಕ್ತ ಶಿಕ್ಷಣ

ಚಂದ್ರಕಾಂತ ಮಸಾನಿ
Published 26 ಮೇ 2022, 12:56 IST
Last Updated 26 ಮೇ 2022, 12:56 IST
ಬೀದರ್‌ ತಾಲ್ಲೂಕಿನ ಜನವಾಡ ಸಮೀಪದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಇರುವ ಕೃಷಿ ಡಿಪ್ಲೊಮಾ ವಿದ್ಯಾಲಯ
ಬೀದರ್‌ ತಾಲ್ಲೂಕಿನ ಜನವಾಡ ಸಮೀಪದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಇರುವ ಕೃಷಿ ಡಿಪ್ಲೊಮಾ ವಿದ್ಯಾಲಯ   

ಬೀದರ್‌: ಕೃಷಿ ಪ್ರಧಾನವಾದ ಬೀದರ್‌ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ಮಾಡಲು ವಿಪುಲ ಅವಕಾಶಗಳು ಇವೆ. ಕೃಷಿ ಮೂಲಕವೇ ಕೋಟ್ಯಂತರ ರೂಪಾಯಿ ಆದಾಯ ಪಡೆಯುತ್ತಿರುವ ಅನೇಕ ಪ್ರಗತಿಪರ ರೈತರು ಜಿಲ್ಲೆಯಲ್ಲೇ ಇದ್ದಾರೆ. ಇದಕ್ಕೆ ಪೂರಕವಾಗಿ ಕೃಷಿ ಜಮೀನು ಹೊಂದಿದವರು ಹಾಗೂ ರೈತರ ಮಕ್ಕಳಿಗಾಗಿಯೇ ಸರ್ಕಾರ ಹೊಸ ಹೊಸ ಕೋರ್ಸ್‌ಗಳನ್ನು ಆರಂಭಿಸಿದೆ.

ಎಸ್ಸೆಸ್ಸೆಲ್ಸಿಯಲ್ಲಿ ಸಾಮಾನ್ಯ ದರ್ಜೆಯಲ್ಲಿ ಪಾಸಾದರೂ ಸಾಕು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ರಾಯಚೂರು ಕೃಷಿ ವಿಶ್ವವಿದ್ಯಾಲಯ, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯಗಳ ಅಂಗ ಸಂಸ್ಥೆಗಳಲ್ಲಿ ಆರಂಭಿಸಿರುವ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ ಡಿಪ್ಲೊಮಾ ಮಾಡಬಹುದಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ 45 ಅಂಕಗಳೊಂದಿಗೆ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ 50ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ.

ADVERTISEMENT

ಅರ್ಜಿ ಕರೆದ ತಕ್ಷಣ ಅರ್ಜಿ ಮತ್ತು ಮಾಹಿತಿ ಪುಸ್ತಕವನ್ನು ಆಯಾ ವಿಶ್ವವಿದ್ಯಾಲಯಗಳ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ.

ಬೀದರ್‌ ತಾಲ್ಲೂಕಿನ ಜನವಾಡ ಸಮೀಪದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ ನೀಡಲಾಗುತ್ತಿದೆ. ಸಾಮಾನ್ಯವಾಗಿ ಜೂನ್‌ನಲ್ಲಿ ಅರ್ಜಿ ಕರೆಲಾಗುತ್ತದೆ. ವಿದ್ಯಾರ್ಥಿಗಳು ವೈಬ್‌ಸೈಟ್‌ ಮೂಲಕ ಮಾಹಿತಿ ಪಡೆಯಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ ಹೇಳುತ್ತಾರೆ.

ತೋಟಗಾರಿಕೆ ಡಿಪ್ಲೊಮಾ:

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರತಿ ವರ್ಷ ಎರಡು ವರ್ಷದ ತೋಟಗಾರಿಕೆ ಡಿಪ್ಲೊಮಾ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸುತ್ತದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಅರಭಾವಿ ಹಾಗೂ ಕೋಲಾರ ಜಿಲ್ಲೆಯ ಹೊಗಳಗೆರೆಯಲ್ಲಿ ತೋಟಗಾರಿಕೆ ಡಿಪ್ಲೊಮಾ ಕಾಲೇಜುಗಳಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಹಾಗೂ ಮಾಹಿತಿ ಪುಸ್ತಕಗಳನ್ನು ತೋಟಗಾರಿಕೆ ವಿಶ್ವವಿದ್ಯಾಲಯದ ವೆಬ್‌ಸೈಟ್‌ ಮೂಲಕ ಡೌನ್‌ಲೋಡ್‌ ಮಾಡಿಕೊಂಡು ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹ 1,000 ಸ್ಟೈಫಂಡ್‌ ಸಹ ನೀಡಲಾಗುತ್ತದೆ.

ಪಶು ಸಂಗೋಪನೆ ಡಿಪ್ಲೊಮಾ:

ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪಶು ಸಂಗೋಪನೆಯಲ್ಲಿ ಎರಡು ವರ್ಷ ಅವಧಿಯ ಡಿಪ್ಲೊಮಾ ಕೋರ್ಸ್ ಆರಂಭಿಸಿ ರೈತರ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದೆ.

ಗದಗ ತಾಲ್ಲೂಕಿನ ಶಿಗ್ಗಾಂವ, ಯಾದಗರಿ ಜಿಲ್ಲೆಯ ಡೋರನಳ್ಳಿ, ತುಮಕೂರಿನ ಶಿರಾ ಹಾಗೂ ನಾಗಮಂಗಲದ ಪಶು ಮಹಾವಿದ್ಯಾಲಯದಲ್ಲಿ ಕೋರ್ ಇದೆ. ಪಶು ಸಂಗೋಪನೆ ಡಿಪ್ಲೊಮಾದ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲೇ ನಡೆಸಲಾಗುತ್ತದೆ. ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪಡೆಯಬಹುದು.

ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಅರ್ಜಿ ಕರೆಯಲಾಗುತ್ತದೆ. ಅಕ್ಟೋಬರ್‌ನಲ್ಲಿ ಕೌನ್ಸೆಲಿಂಗ್ ನಡೆಯುತ್ತದೆ. ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲೇ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಎನ್‌.ಎ. ಪಾಟೀಲ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.