ADVERTISEMENT

ಬೀದರ್‌ ಮಾರುಕಟ್ಟೆ: ಹಿರೇತನ ಕಳೆದುಕೊಂಡ ಹಿರೇಕಾಯಿ, ಬಳಲಿ ಬೆಂಡಾದ ಬೆಂಡೆಕಾಯಿ

ಚಂದ್ರಕಾಂತ ಮಸಾನಿ
Published 29 ಆಗಸ್ಟ್ 2020, 19:30 IST
Last Updated 29 ಆಗಸ್ಟ್ 2020, 19:30 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ಹಿರೇಕಾಯಿ, ಬದನೆಕಾಯಿ
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ಹಿರೇಕಾಯಿ, ಬದನೆಕಾಯಿ   

ಬೀದರ್‌: ಭಕ್ತರ ಮನೆಗಳಲ್ಲಿ ಐದು ಹಾಗೂ ಏಳು ದಿನಗಳ ಆತಿಥ್ಯ ಸ್ವೀಕರಿಸಿ ಗಣೇಶ ಮರಳಿದ ನಂತರ ತರಕಾರಿ ರಾಜ ಬದನೆ ಮಾರುಕಟ್ಟೆಯಲ್ಲಿ ಹಿರೇತನ ವಹಿಸಿಕೊಂಡಿದ್ದ ಹಿರೇಕಾಯಿ ಸೇರಿದಂತೆ ಬಹುತೇಕ ತರಕಾರಿಗಳು ಬೆಲೆ ಇಳಿಕೆಯಿಂದ ಸೊರಗಿವೆ. ಗ್ರಾಹಕರು ಸಂತುಷ್ಟರಾದರೂ ರೈತರು ಕೊಂಚ ನಷ್ಟ ಅನುಭವಿಸಿದ್ದಾರೆ.

ಈರುಳ್ಳಿ, ಗ್ರಾಹಕರಿಗೆ ಸ್ವಲ್ಪ ಕಣ್ಣೀರು ತರಿಸಿದೆ. ಹಸಿ ಮೆಣಸಿನ ಕಾಯಿ ಖಾರ ಹೆಚ್ಚಿಸಿದೆ. ಈ ಎರಡೂ ತರಕಾರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500 ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಹೂಕೋಸಿನ ಬೆಲೆ ಮಾತ್ರ ಸ್ಥಿರವಾಗಿದೆ. ಪ್ರತಿ ಕ್ವಿಂಟಲ್‌ಗೆ ಬೀನ್ಸ್‌ಬೆಲೆ ₹ 2,500 ರಿಂದ ₹ 3 ಸಾವಿರ ವರೆಗೆ ಕುಸಿದರೆ, ನುಗ್ಗೆಕಾಯಿ, ಗಜ್ಜರಿ, ಬೀಟ್‌ರೂಟ್ ಬೆಲೆ ₹ 2,500 ಇಳಿದಿದೆ.

ಬೆಂಡೆಕಾಯಿ ಬೆಲೆ ₹ 2 ಸಾವಿರ ಕಡಿಮೆಯಾಗಿದೆ. ಹಿರೇಕಾಯಿ ಹಾಗೂ ಬದನೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1,500 ಕಡಿಮೆಯಾಗಿದ್ದು, ಹಿರೇತನ ವಹಿಸಿಕೊಳ್ಳುವಲ್ಲಿ ವಿಫಲವಾಗಿವೆ. ಆಲೂಗಡ್ಡೆ, ಬೆಳ್ಳುಳ್ಳಿ, ಟೊಮೆಟೊ, ಬೆಂಡೆಕಾಯಿ, ಪಾಲಕ್‌ ಹಾಗೂ ಕರಿಬೇವು ಬೆಲೆ ಸಹ ₹ 500 ಕಡಿಮೆಯಾಗಿದೆ.

ADVERTISEMENT

ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ, ಸೋಲಾಪುರದಿಂದ ಬೆಳ್ಳುಳ್ಳಿ, ತೆಲಂಗಾಣದ ಹೈದರಾಬಾದ್‌ನಿಂದ ಹಸಿ ಮೆಣಸಿನಕಾಯಿ, ಆಲೂಗಡ್ಡೆ, ಬೀನ್ಸ್‌, ಬೀಟ್‌ರೂಟ್, ಬೆಂಡೆಕಾಯಿ, ತೊಂಡೆಕಾಯಿ, ಬೆಳಗಾವಿಯಿಂದ ಗಜ್ಜರಿ, ನುಗ್ಗೆಕಾಯಿ, ಬೆಂಗಳೂರು ಗ್ರಾಮೀಣ ಪ್ರದೇಶದಿಂದ ಟೊಮೆಟೊ ಮಾರುಕಟ್ಟೆಗೆ ಆವಕವಾಗಿದೆ.

ಬೀದರ್‌ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಎಲೆಕೋಸು, ಹೂಕೋಸು, ಹಿರೇಕಾಯಿ, ಬದನೆಕಾಯಿ, ಮೆಂತೆ, ಸಬ್ಬಸಗಿ, ಪಾಲಕ್, ಕರಿಬೇವು, ಕೊತಂಬರಿ ಬಂದಿದೆ.

‘ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ತರಕಾರಿ ಚೆನ್ನಾಗಿ ಬೆಳೆದಿದೆ. ಮಹಾರಾಷ್ಟ್ರದ ಗಡಿಯಲ್ಲಿ ನಿರ್ಬಂಧ ಇರುವ ಕಾರಣ ಮಹಾರಾಷ್ಟ್ರದ ಮೊದಲಿನಷ್ಟು ವಾಹನಗಳು ಜಿಲ್ಲೆಗೆ ಬರುತ್ತಿಲ್ಲ. ಸಾಗಣೆ ವೆಚ್ಚವೂ ಅಧಿಕವಾಗಿರುವ ಕಾರಣ ಸ್ಥಳೀಯವಾಗಿ ಬೆಳೆದ ತರಕಾರಿಗೆ ಹೆಚ್ಚಿನ ಬೇಡಿಕೆ ಬಂದಿದೆ’ ಎಂದು ತರಕಾರಿ ವ್ಯಾಪಾರಿ ಪ್ರಶಾಂತ ತಪಸಾಳೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.