
ಬೀದರ್: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಮನ್ನಳ್ಳಿ ರಸ್ತೆಯ ಹೇಮ ವೇಮ ಸಮುದಾಯ ಭವನದಲ್ಲಿ ಸೋಮವಾರ ಮಹಾಯೋಗಿ ವೇಮನರ 614ನೇ ಜಯಂತಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಸಸಿಗೆ ನೀರೆರೆದು ಉದ್ಘಾಟಿಸಿ, ಮಹಾಯೋಗಿ ವೇಮನರು ದಕ್ಷಿಣ ಭಾರತದ ಪ್ರಮುಖ ತತ್ವಜ್ಞಾನಿ, ಸಮಾಜ ಸುಧಾರಕ ಹಾಗೂ ಕವಿ. ಸರಳ ಭಾಷೆಯಲ್ಲಿ ಆಳವಾದ ತತ್ವಗಳನ್ನು ಹೇಳಿದ ವೇಮನರು, ಅಜ್ಞಾನ, ಅಂಧಶ್ರದ್ಧೆ ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ಧ ಧ್ವನಿ ಎತ್ತಿದರು ಎಂದರು.
ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತಿದ್ದ ಅವರ ವಚನಗಳು, ಮಾನವೀಯ ಮೌಲ್ಯ, ಸತ್ಯ, ನೀತಿ ಮತ್ತು ಆತ್ಮಜ್ಞಾನವೇ ಜೀವನದ ಮೂಲ ಅಂಶಗಳೆಂಬ ಸಂದೇಶ ಸಾರುತ್ತವೆ ಎಂದು ಹೇಳಿದರು.
ಜಾತಿ, ಧರ್ಮ ಮತ್ತು ವರ್ಗಭೇದಗಳನ್ನು ತಿರಸ್ಕರಿಸಿದ ವೇಮನರು ಸಮಾನತೆಯ ಸಮಾಜದ ಪರವಾಗಿ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಿದರು. ವೇಮನರ ಕಾವ್ಯ ಮತ್ತು ತತ್ತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಅವರ ವಿಚಾರಧಾರೆಗಳು ಸಾರ್ವಕಾಲಿಕ. ಅವುಗಳು ಇಂದಿನ ಯುವಜನತೆಗೆ ಆತ್ಮಪರಿಶೀಲನೆ ಮತ್ತು ನೈತಿಕ ಬದುಕಿನ ಮಹತ್ವವನ್ನು ನೆನಪಿಸುತ್ತವೆ. ವೈಯಕ್ತಿಕ ಶುದ್ಧತೆ ಮತ್ತು ಸಮಾಜದ ಒಟ್ಟಾರೆ ಹಿತವೇ ನಿಜವಾದ ಯೋಗ ಎಂದು ಬೋಧಿಸಿದ ಮಹಾಯೋಗಿ ವೇಮನರು, ಭಾರತೀಯ ತತ್ತ್ವಚಿಂತನೆಯ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದಿದ್ದಾರೆ ಎಂದರು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ರೆಡ್ಡಿ ಸಮಾಜವು ಯಾವಾಗಲೂ ಮಾತು ತಪ್ಪುವುದಿಲ್ಲ. ಜನರು ವೇಮನರ ತತ್ವ ಆದರ್ಶವನ್ನು ತಪ್ಪದೆ ಪಾಲಿಸಬೇಕು. ಮೂಢನಂಬಿಕೆ, ಅಸಮಾನತೆಯನ್ನು ಹೋಗಲಾಡಿಸಬೇಕು. ವೇಮನರ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ರೆಡ್ಡಿ ಸಮಾಜದ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು, ಬೀದರ್ ಮಹಾನಗರ ಪಾಲಿಕೆಯ ಅಧ್ಯಕ್ಷ ಮುಹಮ್ಮದ್ ಗೌಸ್, ಸದಸ್ಯ ರಾಜು ಚಿಂತಾಮಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ, ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಶಂಕರರೆಡ್ಡಿ, ಬಾಬುರೆಡ್ಡಿ, ಮಾಣಿಕ್ ರೆಡ್ಡಿ, ಪತ್ರಕರ್ತ ರಮೇಶ್ ರೆಡ್ಡಿ, ಸಂಗ್ರಾಮ ರೆಡ್ಡಿ, ಸಂಜೀವ್ ರೆಡ್ಡಿ, ಶ್ರೀನಿವಾಸ ರೆಡ್ಡಿ, ಸೂರ್ಯಕಾಂತ್ ಬಿರಾದಾರ, ಸಂಗೀತಾ ರೆಡ್ಡಿ, ರೆಡ್ಡಿ ಸಮಾಜದ ಭಾಲ್ಕಿ ತಾಲ್ಲೂಕು ಅಧ್ಯಕ್ಷ ವಿಜಯ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಚರಣೆ ಬೀದರ್‌ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಾಯೋಗಿ ವೇಮನ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪುಷ್ಪನಮನ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ ಮತ್ತಿತರರು ಪಾಲ್ಗೊಂಡಿದ್ದರು.
ಸುಖದಿಂದ ಬೈರಾಗಿ..: ವೇಮನರ ಕುರಿತು ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ ಶಿವಶರಣಪ್ಪ ಹುಗ್ಗಿ ಪಾಟೀಲ್ ಬಾಲ್ಯದಿಂದಲೂ ಸುಖದಲ್ಲಿ ಬೆಳೆದ ವೇಮನರು ಕೊನೆಗಾಲದಲ್ಲಿ ಬೈರಾಗಿಯಾಗಿ ಅಲೆದಾಡುವವರೆಗಿನ ಪ್ರಯಾಣ ಒಂದು ಪ್ರೇರಣಾದಾಯಿ ಇತಿಹಾಸ ವಾಗಿದೆ. ವೇಮನರು ಕನ್ನಡದ ಸರ್ವಜ್ಞ ತಮಿಳಿನ ತಿರುವಳ್ಳುವರ್ ರಂತೆ ತೆಲುಗಿಗೆ ವೇಮನರು ಶೇಷ್ಠ ವಚನಕಾರರು ಎಂದು ಹೇಳಿದರು. ವೇಮನ ಹೆತ್ತವರಿಂದ ಒಡಹುಟ್ಟಿದವರಿಂದ ಸಂಬಂಧಿಕರಿಂದ ತಿರಸ್ಕಾರಕ್ಕೆ ಗುರಿಯಾಗಿ ದುಶ್ಚಟಗಳ ದಾಸನಾಗುತ್ತಾನೆ. ಪರಸ್ತ್ರೀ ಸಂಗದಲ್ಲಿ ವಿಷಯಾಸಕ್ತನಾದ ವೇಮನ ಭೋಗಾಸಕ್ತನಾಗುತ್ತಾನೆ. ವೇಶ್ಯಾಸ್ತ್ರೀಯೊಬ್ಬಳ ಸಹವಾಸ ಮಾಡಿ ಮನೆಯ ಸಂಪತ್ತನ್ನೆಲ್ಲಾ ಹಾಳುಗೆಡವುತ್ತಾನೆ. ತನ್ನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮರಿಂದ ಪ್ರಭಾವಿತರಾಗಿ ಬೈರಾಗಿಯಾಗಿ ಮಹಾಯೋಗಿ ಬದಲಾಗುತ್ತಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.