
ಬೀದರ್: ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶೇ 60ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಉಳಿದಿವೆ.
ಮಂಜೂರಾದ ಒಟ್ಟು 794 ಹುದ್ದೆಗಳಲ್ಲಿ 281 ಹುದ್ದೆಗಳಷ್ಟೇ ತುಂಬಲಾಗಿದೆ. 513 ಹುದ್ದೆಗಳನ್ನು ಇನ್ನಷ್ಟೇ ಭರ್ತಿ ಮಾಡಬೇಕಿದೆ. 72 ಜನ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಬೋಧಕ ಸಿಬ್ಬಂದಿಯ ಕೊರತೆ ಇರುವುದರಿಂದ ಬೋಧನೆ, ಸಂಶೋಧನೆ, ವಿಸ್ತರಣೆ, ಫಾರ್ಮ್ ಅಭಿವೃದ್ಧಿಯಂತಹ ವಿವಿಧ ಕೆಲಸ ನೆರವೇರಿಸಿಕೊಂಡು ಹೋಗಲು ಸಮಸ್ಯೆಯಾಗುತ್ತಿದೆ. ಹಾಗಂತ ಯಾವುದೇ ಸಂಶೋಧನೆಗಳು ನಿಂತಿಲ್ಲ. ಇರುವ ಸಿಬ್ಬಂದಿಯೇ ಹೆಚ್ಚಿನ ಕಾರ್ಯಭಾರದ ನಡುವೆ ಕೆಲಸ ಮಾಡುತ್ತಿದ್ದಾರೆ.
ಪಶು ವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ 18 ವಿಭಾಗಗಳಲ್ಲಿ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಮತ್ತು 14 ವಿಭಾಗಗಳಲ್ಲಿ ಡಾಕ್ಟರೇಟ್ ಪದವಿಗಳನ್ನೂ ನೀಡುತ್ತಿದೆ. ಹೈನು ವಿಜ್ಞಾನದಲ್ಲಿ 3 ವಿಭಾಗಗಳಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ. ಮೀನುಗಾರಿಕೆ ವಿಜ್ಞಾನದಲ್ಲಿ 6 ವಿಭಾಗಗಳಲ್ಲಿ ಸ್ನಾತಕೋತ್ತರ ಮತ್ತು 5 ವಿಭಾಗಗಳಲ್ಲಿ ಡಾಕ್ಟರೇಟ್ ಕೊಡಲಾಗುತ್ತಿದೆ. ಬೆಂಗಳೂರಿನಲ್ಲಿ ಫುಡ್ ಬಿಸಿನೆಸ್‌ಗಾಗಿ ಎಮ್‌ಬಿಎ ಪದವಿ ಕೋರ್ಸ್ ನಡೆಸಲಾಗುತ್ತಿದೆ. ಸ್ನಾತಕೋತ್ತರ ವಿಭಾಗದ ಎಲ್ಲಾ ವಿಷಯಗಳಿಗೆ ಬೇಡಿಕೆ ಇದೆ. ಆದರೆ, ವಿವಿಯಲ್ಲಿ ಬೋಧಕ ಸಿಬ್ಬಂದಿಯ ಕೊರತೆಯಿಂದ ಎಲ್ಲಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ನೀಡಲು ಸಾಧ್ಯವಾಗುತ್ತಿಲ್ಲ.
ವಿಶ್ವವಿದ್ಯಾಲಯವು ರಾಜ್ಯದ ಉದ್ದಗಲಕ್ಕೂ ಆರು ಪಶು ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ. ಬೀದರ್, ಬೆಂಗಳೂರು, ಶಿವಮೊಗ್ಗ, ಹಾಸನ, ಗದಗ ಹಾಗೂ ಅಥಣಿ ಸೇರಿವೆ. ಬೆಂಗಳೂರು ಮತ್ತು ಕಲಬುರಗಿಯ ಮಹಾಗಾಂವ್‌ನಲ್ಲಿ ಎರಡು ಹೈನು ವಿಜ್ಞಾನ ಕಾಲೇಜುಗಳಿವೆ. ರಾಜ್ಯದ ಉದ್ದಗಲಕ್ಕೂ 10 ಸಂಶೋಧನಾ ಕೇಂದ್ರಗಳನ್ನು ಹೊಂದಿದೆ. ಸದರಿ ಸಂಸ್ಥೆಗಳು ಜಾನುವಾರುಗಳ ತಳಿ ಸಂವರ್ಧನೆ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿವೆ.
ಪ್ರಮುಖವಾಗಿ ದೇವಣಿ ತಳಿ, ಮುಧೋಳ ಶ್ವಾನ ತಳಿ, ಬನ್ನೂರು ಕುರಿ ತಳಿ, ಅಮೃತಮಹಲ್ ತಳಿ ಹಾಗೂ ವಿವಿಧ ರೀತಿಯ ಮೀನುಗಳ ತಳಿಗಳ ಬಗ್ಗೆ ಅಧ್ಯಯನವನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯು ಜಾನುವಾರುಗಳ ಸುಮಾರು 15 ರೋಗಗಳಿಗೆ ಏಳು ಲಕ್ಷಕ್ಕಿಂತ ಹೆಚ್ಚು ಲಸಿಕೆಗಳನ್ನು ಉತ್ಪಾದಿಸುತ್ತಿರುವುದು ವಿಶೇಷ. ವಿವಿ ಅಡಿಯಲ್ಲಿ ವನ್ಯಜೀವಿ ಪಶು ವೈದ್ಯಕೀಯ ಸಂಶೋಧನಾ ಕೇಂದ್ರವು ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಿಗ್ಗಾಂವ, ಕೊನೆಹಳ್ಳಿ, ಕೊರವಂಗಲ, ಗುಂಡ್ಲುಪೇಟೆ, ಶಹಾಪುರದಲ್ಲಿ ಪಶು ಸಂಗೋಪನಾ ಪಾಲಿಟೆಕ್ನಿಕ್‌ಗಳನ್ನು ಹೊಂದಿದೆ.
ಮೂಲಸೌಕರ್ಯ ಕೊರತೆ
ವಿಶ್ವವಿದ್ಯಾಲಯಕ್ಕೆ ಸೇರಿದ ಬೀದರ್ ಬೆಂಗಳೂರು ಮತ್ತು ಮಂಗಳೂರು ಆವರಣಗಳು ಅತ್ಯಂತ ಹಳೆಯ ಆವರಣಗಳಾಗಿದ್ದು ಅಲ್ಲಿರುವ ಕಟ್ಟಡಗಳನ್ನು ದುರಸ್ತಿ ಮಾಡಬೇಕಾಗಿದೆ. ಅಲ್ಲಿರುವ ರಸ್ತೆಗಳಿಗೆ ಕಾಂಕ್ರೀಟ್ ಸೇರಿದಂತೆ ಇತರೆ ಸೌಕರ್ಯ ಕಲ್ಪಿಸಬೇಕಿದೆ. ವಿಶ್ವವಿದ್ಯಾಲಯವು ಪ್ರಾರಂಭವಾಗಿ 20 ವರ್ಷ ಕಳೆದರೂ ತನ್ನದೇ ಆದ ಆಡಳಿತ ಕಟ್ಟಡ ಹೊಂದಿಲ್ಲ. ಗ್ರಂಥಾಲಯ ಕಟ್ಟಡದಲ್ಲಿಯೇ ಆಡಳಿತ ಕಟ್ಟಡ ನಡೆಸಲಾಗುತ್ತಿದೆ. ವಿಶ್ವವಿದ್ಯಾಲಯದ 10 ಸಂಶೋಧನಾ ಕೇಂದ್ರಗಳಲ್ಲಿ ಇನ್ನೂ ರಸ್ತೆಗಳು ನಿರ್ಮಾಣವಾಗಬೇಕಿದೆ. ಕೆಲವು ಆವರಣಗಳಲ್ಲಿ ಸುಸಜ್ಜಿತ ರಸ್ತೆಗಳು ಹಾಗೂ ಹೊಸ ಕಟ್ಟಡಗಳ ಅವಶ್ಯಕತೆ ಇದೆ. ಐದು ಪಾಲಿಟೆಕ್ನಿಕ್‌ಗಳಲ್ಲೂ ಇದೇ ಸಮಸ್ಯೆ ಇದೆ. ವಿಶ್ವವಿದ್ಯಾಲಯದ ನಿರ್ವಹಣೆಗೆ ಪ್ರತಿ ವರ್ಷ ಸರ್ಕಾರದಿಂದ ₹1.50 ಕೋಟಿ ಬಿಡುಗಡೆಯಾಗುತ್ತದೆ. ಆದರೆ ವಿಶ್ವವಿದ್ಯಾಲಯದ ನಿರ್ವಹಣೆಗೆ ₹4 ಕೋಟಿಗೂ ಅಧಿಕ ಅನುದಾನ ಬೇಕು. ವಿವಿ ಆಂತರಿಕ ಸಂಪನ್ಮೂಲದಿಂದ ನಿರ್ವಹಿಸುವುದು ಬಹಳ ಕಷ್ಟಕರವಾಗಿದೆ ಎಂದು ತಿಳಿದು ಬಂದಿದೆ.
ಬೋಧಕ ಮತ್ತು ಬೋಧಕತೇರ ಸಿಬ್ಬಂದಿಯ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಿಕ್ಕರೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.–ಪಿ.ಟಿ. ರಮೇಶ, ಕುಲಸಚಿವ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.