ADVERTISEMENT

ಬೀದರ್: ಬಂದಿದೆ ವೈರಲ್‌ ಜ್ವರ, ಸಾರ್ವಜನಿಕರೇ ವಹಿಸಿ ಎಚ್ಚರ

ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿದ ರೋಗಿಗಳ ಸಂಖ್ಯೆ

ಚಂದ್ರಕಾಂತ ಮಸಾನಿ
Published 29 ಆಗಸ್ಟ್ 2022, 19:30 IST
Last Updated 29 ಆಗಸ್ಟ್ 2022, 19:30 IST
ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ಕಂಡು ಬಂದ ರೋಗಿಗಳ ದಟ್ಟಣೆ
ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ಕಂಡು ಬಂದ ರೋಗಿಗಳ ದಟ್ಟಣೆ   

ಬೀದರ್: ತಿಂಗಳ ಅವಧಿಯಲ್ಲಿ ಬದಲಾದ ವಾತಾವರಣ, ಹವಾಮಾನ ವೈಪರೀತ್ಯದ ಕಾರಣ ಜಿಲ್ಲೆಯಲ್ಲಿ ವೈರಲ್‌ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗಗಳು ಜ್ವರಪೀಡಿತರಿಂದ ಗಿಜಿಗೊಡುತ್ತಿವೆ.

ಬೆಳಿಗ್ಗೆ ಮಂಜಿನ ವಾತಾವರಣ, ಮಧ್ಯಾಹ್ನ ಸುಡು ಬಿಸಿಲು ಹಾಗೂ ರಾತ್ರಿ ತಣ್ಣನೆ ಗಾಳಿ ಬೀಸುತ್ತಿರುವ ಕಾರಣ ದೇಹದ ಉಷ್ಣಾಂಶದ ಮೇಲೂ ಪರಿಣಾಮ ಬೀರುತ್ತಿದೆ. ವೈರಲ್‌ ಜ್ವರ ಪೀಡಿತರಲ್ಲಿ ಮಕ್ಕಳು ಹಾಗೂ ವಯಸ್ಕರ ಸಂಖ್ಯೆಯೇ ಅಧಿಕ ಇದೆ.

ಜ್ವರ ಇರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುತ್ತಿದೆ. ಸೋಂಕು ಇರುವ ವ್ಯಕ್ತಿಗೆ ಸೊಳ್ಳೆ ಕಚ್ಚಿ ಆ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದಾಗ ತಗಲುತ್ತಿದೆ. ದೇಹದ ಬೆವರು ಅಥವಾ ರಕ್ತದ ಮೂಲಕವೂ ಹರಡುವ ಸಾಧ್ಯತೆ ಇದೆ. ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಅಧಿಕವಾಗಿದೆ. ಇದರಿಂದ ಶಂಕಿತ ಡೆಂಗೆ ರೋಗಿಗಳು ಸಹ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ.

ADVERTISEMENT

‘ನಗರದ ಬ್ರಿಮ್ಸ್‌ ಆಸ್ಪತ್ರೆಗೆ ನಿತ್ಯ ಸರಾಸರಿ 1 ಸಾವಿರದಿಂದ 1,200 ವರೆಗೆ ರೋಗಿಗಳು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಾರೆ. ಆದರೆ 20 ದಿನಗಳ ಅವಧಿಯಲ್ಲಿ ವೈರಲ್‌ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಹೊರ ರೋಗಿಗಳ ಸಂಖ್ಯೆ 1,500ಕ್ಕೆ ಏರಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಬಿರಾದಾರ ಹೇಳುತ್ತಾರೆ.

‘ವೈರಲ್‌ ಜ್ವರಕ್ಕೆ ಭಯಪಡುವ ಅಗತ್ಯವಿಲ್ಲ. ಆದರೆ, ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಕೆಮ್ಮಿದಾಗ, ಸೀನಿದಾಗ ರುಮಾಲ್‌ನಿಂದ ಮುಚ್ಚಿಕೊಳ್ಳಬೇಕು. ನಂತರ ಚೆನ್ನಾಗಿ ಕೈತೊಳೆದು ಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರೆಗಳು ಉಚಿತವಾಗಿ ದೊರೆಯುತ್ತಿವೆ. ಸೋಂಕು ಬರದಂತೆ ಸ್ವತಃ ನಾವೇ ಮುನ್ನೆಚ್ಚರಿಕೆ ವಹಿಸಬೇಕು’ ಎನ್ನುತ್ತಾರೆ.

‘ಒಂದು ತಿಂಗಳಿಂದ ಮಕ್ಕಳಲ್ಲಿ ವೈರಲ್‌ ಜ್ವರ ಕಾಣಿಸಿಕೊಂಡಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬರುವ ಮಕ್ಕಳ ಸಂಖ್ಯೆ ಶೇಕಡ 10 ರಷ್ಟು ಅಧಿಕವಾಗಿದೆ’ ಎಂದು ಓಲ್ಡ್‌ಸಿಟಿಯ ನೂರು ಹಾಸಿಗೆಗಳ ತಾಯಿ ಮತ್ತು ಮಗು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸೋಹೆಲ್‌ ಮಹಮ್ಮದ್‌ ವಿವರಿಸುತ್ತಾರೆ.

'ಒಪಿಡಿಯಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗಿದೆ. ಮಕ್ಕಳಿಗೆ ವೈರಲ್‌ ಜ್ವರ ಹೆಚ್ಚು ಬಾಧಿಸುತ್ತಿದೆ. ಆಸ್ಪತ್ರೆಗೆ ಬರುವ 10 ಮಕ್ಕಳ ಪೈಕಿ ಕನಿಷ್ಠ ನಾಲ್ವರಲ್ಲಿ ವೈರಲ್‌ ಜ್ವರ ಕಂಡು ಬಂದಿದೆ' ಎನ್ನುತ್ತಾರೆ.

‘ಮಕ್ಕಳಲ್ಲಿ ವೈರಲ್ ಜ್ವರ ಬೇಗ ಕಾಣಿಸಿಕೊಳ್ಳುತ್ತಿದೆ. ಜ್ವರ ಪೀಡಿತ ಮಕ್ಕಳು ಶಾಲೆಗೆ ಬಂದರೆ ಒಬ್ಬರಿಂದೊಬ್ಬರಿಗೆ ಹೆಚ್ಚು ವೇಗದಲ್ಲಿ ಹರಡುತ್ತದೆ. ಮಕ್ಕಳು ವೈದ್ಯರ ಬಳಿ ಚಿಕಿತ್ಸೆ ಪಡೆದು ನಾಲ್ಕು ದಿನ ವಿಶ್ರಾಂತಿ ಪಡೆದರೆ ಸಾಕು ಗುಣವಾಗುತ್ತದೆ’ ಎಂದು ಹೇಳುತ್ತಾರೆ.

‘ಪಾಲಕರು ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಜ್ವರ, ಕೆಮ್ಮು, ಶೀತ ಇದ್ದರೆ ಜನರ ಜತೆ ಬೆರೆಯುವುದಕ್ಕೆ ಬಿಡಬಾರದು. ನಿತ್ಯ ಶುದ್ಧ ಹಾಗೂ ಕುದಿಸಿ ಆರಿಸಿದ ನೀರು ಕೊಡಬೇಕು. ಕೋವಿಡ್ ಅವಧಿಯಲ್ಲಿ ಪಾಲಿಸಿದ ಬಹುತೇಕ ಎಲ್ಲ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.