ADVERTISEMENT

ಅಗ್ನಿಶಾಮಕ ಠಾಣೆಗಳಲ್ಲೇ ನೀರಿನ ಕೊರತೆ...

ಚಂದ್ರಕಾಂತ ಮಸಾನಿ
Published 9 ಮೇ 2022, 2:54 IST
Last Updated 9 ಮೇ 2022, 2:54 IST
ಬೀದರ್‌ನ ಅಗ್ನಿಶಾಮಕ ಠಾಣೆ
ಬೀದರ್‌ನ ಅಗ್ನಿಶಾಮಕ ಠಾಣೆ   

ಬೀದರ್‌: ಜಿಲ್ಲೆಯಲ್ಲಿ ಒಂದು ತಿಂಗಳಿಂದ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ಬಯಲು ಪ್ರದೇಶದಲ್ಲಿ ಬಿಸಿ ಗಾಳಿ ಬೀಸುತ್ತಿದೆ. ಅಲ್ಲಲ್ಲಿ ಬೆಂಕಿ ಅವಘಡಗಳು ಕಾಣಿಸಿಕೊಳ್ಳುತ್ತಿವೆ. ಅಗ್ನಿಶಾಮಕ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದರೂ ಕೆಲ ಅಗ್ನಿಶಾಮಕ ಠಾಣೆಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸಮಸ್ಯೆ ಗಂಭೀರವಾಗಿದ್ದರೂ ನಗರ ಸ್ಥಳೀಯ ಸಂಸ್ಥೆಗಳು ಸ್ಪಂದಿಸುತ್ತಿಲ್ಲ.

ಜಿಲ್ಲೆಯ ಎಂಟು ತಾಲ್ಲೂಕುಗಳ ಪೈಕಿ ಹೊಸ ಎರಡು ತಾಲ್ಲೂಕುಗಳಲ್ಲಿ ಅಗ್ನಿಶಾಮಕ ಠಾಣೆಯೇ ಇಲ್ಲ. ಅಗ್ನಿಶಾಮಕ ಮತ್ತು ತುರ್ತು ಸೇವಾಇಲಾಖೆ ಅಧಿಕಾರಿಗಳು ಜಾಗ ಕೊಡುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಆದರೆ, ಜಿಲ್ಲಾಡಳಿತ ಮೂರು ವರ್ಷಗಳಿಂದ ಕಚೇರಿಗೆ ಜಾಗ ಹುಡುಕುವುದರಲ್ಲೇ ಇದೆ.

ಚಿಟಗುಪ್ಪದಲ್ಲಿ ಈಗಾಗಲೇ ಒಂದು ಅಗ್ನಿಶಾಮಕ ಠಾಣೆ ಇದೆ. ತಾಲ್ಲೂಕಿನ ವ್ಯಾಪ್ತಿ ಹಾಗೂ ಅವಘಡಗಳ ಅಂಕಿ ಅಂಶಗಳ ಆಧಾರದ ಮೇಲೆ ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಜಾಗ ಕೇಳಲಾಗಿದೆ.

ADVERTISEMENT

ಸಾಮಾನ್ಯವಾಗಿ ಕೃಷಿ ಚಟುವಟಿಕೆ ಪೂರ್ಣಗೊಂಡ ನಂತರ ರೈತರು ಹೊಲಗಳಲ್ಲಿನ ಕಸಕ್ಕೆ ಬೆಂಕಿ ಇಡುತ್ತಾರೆ. ಇದರ ಒಂದು ಕಿಡಿ ಹಾರಿ ಬೇರೆ ಕಡೆಗೆ ಹೋದರೂ ಬೆಂಕಿ ಹೊತ್ತಿಕೊಳ್ಳುತ್ತದೆ. ಮನ್ನಾಎಖ್ಖೆಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿನ ಗದ್ದೆಗಳಲ್ಲಿ ಬೆಂಕಿ ಅನಾಹುತಗಳು ಹೆಚ್ಚು. ಬೀದರ್‌ ಇಲ್ಲವೆ ಹುಮನಾಬಾದ್‌ನಿಂದ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಕಬ್ಬಿನ ಹೊಲವೇ ಬೆಂಕಿಗೆ ಆಹುತಿಯಾಗುತ್ತಿದೆ. ಮನ್ನಾಎಖ್ಖೆಳ್ಳಿಯಲ್ಲಿ ಅಗ್ನಿಶಾಮಕ

ಠಾಣೆ ಸ್ಥಾಪಿಸಬೇಕು ಎನ್ನುವುದು ಬಹು ದಿನಗಳ ಬೇಡಿಕೆಯಾಗಿದೆ ಎಂದು ಬಾವಗಿಯ ಸಿದ್ಧಾರೂಢ ಭಾಲ್ಕೆ ಹೇಳುತ್ತಾರೆ.

ಅವಿಭಜಿತ ಬಸವಕಲ್ಯಾಣ ತಾಲ್ಲೂಕಿನಲ್ಲಿ ಒಂದೇ ಅಗ್ನಿಶಾಮಕ ಠಾಣೆ ಇದೆ. ಬಸವಕಲ್ಯಾಣ ನಗರದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ 20 ಜನ ಸಿಬ್ಬಂದಿ ಹಾಗೂ ಎರಡು ವಾಹನಗಳಿವೆ. ಕೊಳವೆಬಾವಿಯ ನೀರನ್ನು ವಾಹನಗಳಿಗೆ ತುಂಬಿಸಲಾಗುತ್ತದೆ. ಬೇಸಿಗೆಯಲ್ಲಿ ಆಗಾಗ ಕೊಳವೆ ಬಾವಿ ಕೈಕೊಟ್ಟು ನೀರಿನ ಸಮಸ್ಯೆ ಆಗುತ್ತದೆ.

ಭಾಲ್ಕಿ ತಾಲ್ಲೂಕಿನಲ್ಲಿ 2022ರ ಜನವರಿಯಿಂದ ಇಲ್ಲಿಯ ವರೆಗೆ ಒಟ್ಟು 74 ಅಗ್ನಿ ಅವಘಡ ಸಂಭವಿಸಿವೆ. ಭಾಲ್ಕಿ ಅಗ್ನಿಶಾಮಕ ಠಾಣೆಯಲ್ಲಿ 27 ಸಿಬ್ಬಂದಿ ಬೇಕಿದ್ದರೂ 9 ಹುದ್ದೆಗಳು ಖಾಲಿ ಇವೆ. ಕೆಲಸದ ಒತ್ತಡ ಹೆಚ್ಚಿರುವ ಕಾರಣ ನಾಲ್ವರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

2021ರಲ್ಲಿ ಆಗ್ನಿಶಾಮಕ ಠಾಣೆಗೆ ಒಟ್ಟು 803 ಕರೆಗಳು ಬಂದಿದ್ದರೆ, 2022ರ ಮೇ ವರೆಗೆ 418 ಕರೆಗಳು ಬಂದಿವೆ. ಕಳೆದ ವರ್ಷ 22 ಹಾಗೂ ಈ ವರ್ಷ 14 ಜನರ ಜೀವ ರಕ್ಷಣೆ ಮಾಡಲಾಗಿದೆ. ಕಳೆದ ವರ್ಷ ₹ 8,22,88,000 ಮೌಲ್ಯದ ಆಸ್ತಿ ರಕ್ಷಣೆ ಮಾಡಿದರೆ, ಪ್ರಸಕ್ತ ವರ್ಷ ₹ 34,03,95,000 ಮೌಲ್ಯದ ಆಸ್ತಿ ರಕ್ಷಣೆ ಮಾಡಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ 74 ಜಾಗೃತಿ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರಿಗೆ ಅಗ್ನಿ ಅನಾಹುತಗಳ ತಿಳಿವಳಿಕೆ ನೀಡಲು ಪ್ರಯತ್ನಿಸಲಾಗಿದೆ ಎಂದು ಜಿಲ್ಲಾ ಅಗ್ನಿ ಶಾಮಕ ಆಧಿಕಾರಿ ಮುಜಮಿಲ್‌ ಹೇಳುತ್ತಾರೆ.

* * *

ಔರಾದ್: ವಾಹನ, ಸಿಬ್ಬಂದಿ ಕೊರತೆ
ಔರಾದ್: ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಬೆಂಕಿ ನಂದಿಸಲು ಬಳಸುವ ಎರಡು ಜಲವಾಹಕ ವಾಹನಗಳ ಪೈಕಿ ಒಂದು ಹಾಳಾಗಿದೆ. ಇನ್ನೊಂದು ಕೂಡ 30 ವರ್ಷ ಹಳೆಯದಾದ ಕಾರಣ ಸಮರ್ಪಕ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಔರಾದ್ ತಾಲ್ಲೂಕಿಗೆ ಎರಡು ವಾಹನಗಳ ಅಗತ್ಯವಿದೆ. ಹೀಗಾಗಿ ಸರ್ಕಾರ ಇನ್ನೂಂದು ವಾಹನ ಮಂಜೂರು ಮಾಡಿದರೆ ಅನುಕೂಲವಾಗಲಿದೆ ಎಂದು ಅಗ್ನಿಶಾಮಕ ಠಾಣೆ ಸಿಬ್ಬಂದಿ ಹೇಳುತ್ತಾರೆ.
ಇಲ್ಲಿ ಠಾಣಾಧಿಕಾರಿ ಹುದ್ದೆ ಸೇರಿದಂತೆ ಖಾಲಿ ಇರುವ ಎಂಟು ಹುದ್ದೆ ಭರ್ತಿ ಮಾಡಬೇಕಿದೆ. ಹೊಸದಾಗಿ ರಚನೆಯಾದ ಕಮಲನಗರ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸುವ ಅಗತ್ಯವಿದೆ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಅಶೋಕ ಶೆಂಬೆಳ್ಳಿ.

* * *

ಚಿಟಗುಪ್ಪ ಠಾಣೆ ದೂರವಾಣಿ ಸ್ಥಗಿತ

ಚಿಟಗುಪ್ಪ: ಇಲ್ಲಿಯ ಹುಮನಾಬಾದ್ ಮಾರ್ಗದಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸಿದ ನಂತರ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ. ಮೊದಲು ಅಗ್ನಿಶಾಮಕ ವಾಹನ ಹುಮನಾಬಾದ್‌ನಿಂದ ಚಿಟಗುಪ್ಪಗೆ ಬರುವಷ್ಟರಲ್ಲಿ ಬೆಂಕಿ ಹೊತ್ತಿಕೊಂಡ ಬಣಿವೆಗಳು ಹಾಗೂ ಹೊಲ ಗದ್ದೆಗಳಲ್ಲಿನ ಕಬ್ಬು ಸಂಪೂರ್ಣ ಭಸ್ಮವಾಗುತ್ತಿದ್ದವು. ಆದರೆ, ಈಗ ಅಗ್ನಿಶಾಮಕ ಠಾಣೆ ಹೊಸದೊಂದು ಸಮಸ್ಯೆಯಲ್ಲಿದೆ.

ಅಗ್ನಿಶಾಮಕ ಠಾಣೆಯ ದೂರವಾಣಿ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದೆ. ಬಿಎಸ್‌ಎನ್‌ಎಲ್‌ ಸಿಬ್ಬಂದಿ ಲೋಪ ಸರಿಪಡಿಸಿಕೊಡುತ್ತಿಲ್ಲ. ದೂರವಾಣಿ ಕರೆ ಮಾಡಿದರೂ ಠಾಣೆಯಲ್ಲಿ ರಿಂಗ್ ಆಗುತ್ತಿಲ್ಲ ಎಂದು ಠಾಣಾಧಿಕಾರಿ ನರೇಂದ್ರ‌ ಬೇಸರ ವ್ಯಕ್ತಪಡಿಸುತ್ತಾರೆ.

ಮಳೆಗಾಲದಲ್ಲಿ ನಾಲಾದ ನೀರು ಠಾಣೆಯೊಳಗೆ ಬರುತ್ತದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುವ ಸಿಬ್ಬಂದಿಗೆ ಸರ್ಕಾರ ಅಗತ್ಯ ಸೌಕರ್ಯ ಒದಗಿಸುತ್ತಿಲ್ಲ. ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಚಿಟಗುಪ್ಪ ನಿವಾಸಿಗಳು ಒತ್ತಾಯಿಸುತ್ತಾರೆ.

* * *

ಹುಮನಾಬಾದ್: ಕೊಳವೆಬಾವಿ ಹಾಳಾದರೂ ಕೇಳುವವರಿಲ್ಲ
ಹುಮನಾಬಾದ್ ತಾಲ್ಲೂಕಿನ ವ್ಯಾಪ್ತಿಯಲ್ಲಿ ಈ ವರ್ಷ 67 ಬೆಂಕಿ ಅವಘಡಗಳು ಸಂಭವಿಸಿವೆ. ಸಾಮಾನ್ಯವಾಗಿ ಇಲ್ಲಿಯ ಕೊಳವೆಬಾವಿಯ ನೀರನ್ನೇ ಬೆಂಕಿ ಆರಿಸಲು ಬಳಸಲಾಗುತ್ತದೆ. ಕೊಳವೆಬಾವಿ ಹಾಳಾಗಿ ಒಂದು ವರ್ಷ ಕಳೆದಿದೆ. ಠಾಣೆಯ ಅಧಿಕಾರಿಗಳು ಪುರಸಭೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ.

ಪುರಸಭೆಯವರು ಒಂದು ಪೈಪ್‌ ಜೋಡಿಸಿ ಕೊಟ್ಟಿದ್ದಾರೆ. ಅದರಲ್ಲೂ ಸರಿಯಾಗಿ ನೀರು ಬರುತ್ತಿಲ್ಲ. ಅಗ್ನಿ ದುರಂತ ಸಂಭವಿಸಿದಾಗ ಅಗ್ನಿಶಾಮಕ ದಳದ ಸಿಬ್ಬಂದಿ ನೀರಿಗಾಗಿ ಪರದಾಡುವ ಸ್ಥಿತಿ ಇದೆ. ಅಧಿಕಾರಿಗಳೇ ಸ್ಪಂದಿಸದಿದ್ದರೆ ಕೆಲಸ ಹೇಗೆ ಮಾಡಬೇಕು ಎಂದು ಠಾಣಾಧಿಕಾರಿ ಶಿವರಾಜ್ ಕಂಗಟೆ ಪ್ರಶ್ನಿಸುತ್ತಾರೆ.

* * *

ನೆರೆಯ ತಾಲ್ಲೂಕಿನ ಠಾಣೆಗಳೇ ಗತಿ

ಕಮಲನಗರ ತಾಲ್ಲೂಕು ರಚನೆಯಾಗಿ ಮೂರು ವರ್ಷ ಕಳೆದರೂ ಅಗ್ನಿಶಾಮಕ ಠಾಣೆ ಆರಂಭವಾಗಿಲ್ಲ. ತಾಲ್ಲೂಕಿನ ಜನತೆಗೆ ಕೃಷಿ ಹಾಗೂ ಜಾನುವಾರು ಪಾಲನೆಯೇ ಮುಖ್ಯ ಕಸಬು ಆಗಿದೆ. ಬಣಿವೆಗಳಿಗೆ ಬೆಂಕಿ ಹೊತ್ತಿ ಕೊಂಡಾಗ 30 ಕಿ.ಮೀ ಅಂತರದಲ್ಲಿರುವ ಔರಾದ್‌ ಹಾಗೂ ಭಾಲ್ಕಿಯಿಂದ ಅಗ್ನಿಶಾಮಕ ವಾಹನಗಳು ಬರುವಷ್ಟರಲ್ಲಿ ಎಲ್ಲವೂ ಸುಟ್ಟು ಹೋಗಿರುತ್ತದೆ.

ಈ ವರ್ಷ ಸೋಯಾ ಹಾಗೂ ಕಬ್ಬು ಹೆಚ್ಚು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ಠಾಣೆ ಆರಂಭಿಸುವಂತೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಸರ್ಕಾರ ಸ್ಪಂದಿಸದ ಕಾರಣ ಹೈಕೋರ್ಟ್‌ ಮೊರೆ ಹೋಗಲಾಗಿದೆ ಎಂದು ಭವಾನಿ ಬಿಜ್ಜಳಗಾಂವದ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಹೇಳುತ್ತಾರೆ.

ತಾಲ್ಲೂಕಿಗೆ ಅಗ್ನಿಶಾಮಕ ಠಾಣೆ ಮಂಜೂರಾಗಿದೆ. ಆದರೆ, ಠಾಣೆಯ ಕಟ್ಟಡ ನಿರ್ಮಾಣಕ್ಕೆ ಜಾಗ ದೊರಕುತ್ತಿಲ್ಲ. ತಹಶೀಲ್ದಾರ್‌ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ವಿವರಿಸುತ್ತಾರೆ.


ಸಹಕಾರ: ಮನ್ಮಥ ಸ್ವಾಮಿ, ಬಸವರಾಜ ಪ್ರಭಾ, ಗುಂಡು ಅತಿವಾಳ, ವೀರೇಶ ಮಠಪತಿ, ಮಾಣಿಕ ಭುರೆ, ಬಸವಕುಮಾರ ಕವಟೆ, ನಾಗೇಶ ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.