ADVERTISEMENT

ಕಬೀರಾಬಾದವಾಡಿ: ಕುಡಿಯುವ ನೀರಿಗಾಗಿ ಪರದಾಟ

ಕೊಳವೆ ಬಾವಿಗಳಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ನೀರು

​ಪ್ರಜಾವಾಣಿ ವಾರ್ತೆ
Published 15 ಮೇ 2019, 20:00 IST
Last Updated 15 ಮೇ 2019, 20:00 IST
ಹುಮನಾಬಾದ್ ತಾಲ್ಲೂಕಿನ ಕಬೀರಾಬಾದವಾಡಿ ಗ್ರಾಮದಲ್ಲಿನ ಕುಡಿಯುವ ನೀರಿನ ಘಟಕದ ಮುಂಭಾಗದಲ್ಲಿ ಸರತಿ ಸಾಲಿನಲ್ಲಿ ಇಡಲಾದ ಖಾಲಿ ಕೊಡಗಳು
ಹುಮನಾಬಾದ್ ತಾಲ್ಲೂಕಿನ ಕಬೀರಾಬಾದವಾಡಿ ಗ್ರಾಮದಲ್ಲಿನ ಕುಡಿಯುವ ನೀರಿನ ಘಟಕದ ಮುಂಭಾಗದಲ್ಲಿ ಸರತಿ ಸಾಲಿನಲ್ಲಿ ಇಡಲಾದ ಖಾಲಿ ಕೊಡಗಳು   

ಬೀದರ್‌: ಹುಮನಾಬಾದ್ ತಾಲ್ಲೂಕಿನ ಬೆನಚಿಂಚೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬೀರಾಬಾದವಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಜನ ಬೆಳಗಾಗುತ್ತಲೇ ಕಿರು ನೀರು ಸರಬರಾಜು ಟ್ಯಾಂಕ್‌ ಮುಂಭಾಗದಲ್ಲಿ ಖಾಲಿ ಕೊಡಗಳನ್ನು ಇಟ್ಟು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಎರಡು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ನಾಲ್ಕು ಕೊಳವೆಬಾವಿಗಳಿದ್ದರೂ ಎರಡು ಕೊಳವೆ ಬಾವಿಗಳಲ್ಲಿ ಬಿಟ್ಟು ಬಿಟ್ಟು ನೀರು ಬರುತ್ತಿದೆ. ಗ್ರಾಮದಲ್ಲಿ ಕೆಲ ಕಡೆ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಒಡೆದಿರುವ ಕಾರಣ ಜನರಿಗೆ ಶುದ್ಧ ಕುಡಿಯುವ ನೀರು ದೊರಕುತ್ತಿಲ್ಲ.

ಕೊಳವೆಬಾವಿಯಿಂದ ಕಿರು ನೀರು ಸರಬರಾಜು ಟ್ಯಾಂಕ್‌ಗೆ ನೀರು ತುಂಬಿಸಲಾಗುತ್ತಿದೆ. ಈ ಟ್ಯಾಂಕ್‌ಗೆ ಮೂರು ಬದಿಗೆ ಮೂರು ನಲ್ಲಿಗಳಿವೆ. ಪ್ರತಿಯೊಂದು ನಲ್ಲಿ ಮುಂದೆ ನಿತ್ಯ ಬೆಳಗಿನ ಜಾವ 50 ಕೊಡಗಳಾದರೂ ಇರುತ್ತವೆ. ಟ್ಯಾಂಕ್‌ನಲ್ಲಿ ನೀರು ಬರುತ್ತಲೇ ಗ್ರಾಮದ ಜನ ನೀರಿಗಾಗಿ ಮುಗಿ ಬೀಳುವುದು ಸಾಮಾನ್ಯವಾಗಿದೆ.

ADVERTISEMENT

‘ಕೆಲವೊಮ್ಮೆ ದೈಹಿಕವಾಗಿ ಸದೃಢವಾಗಿರುವವರು ಮುಂದೆ ನುಗ್ಗಿ ನೀರು ತುಂಬಿಕೊಂಡು ಹೋಗುತ್ತಾರೆ. ರಟ್ಟೆಯಲ್ಲಿ ಬಲ ಇಲ್ಲದ ವೃದ್ಧರು ದೂರದಲ್ಲಿ ಮೂಕಪ್ರೇಕ್ಷಕರಾಗಿ ನಿಲ್ಲುವಂತಹ ಸ್ಥಿತಿ ಇದೆ. ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ನಿತ್ಯ ಜಗಳ ನಡೆಯುತ್ತಿದೆ’ ಎಂದು ಗ್ರಾಮದ ಮಹಿಳೆಯರು ಗೋಳು ತೋಡಿಕೊಳ್ಳುತ್ತಾರೆ.

‘ಹೊಲಗದ್ದೆಗಳಲ್ಲಿನ ಕೆಲಸದ ಮಧ್ಯೆ ನೀರು ಹೊತ್ತು ತರುವುದು ಕಷ್ಟವಾಗುತ್ತಿದೆ. ನೀರಿನ ಟ್ಯಾಂಕ್‌ನಿಂದ ಪ್ರತಿ ಮನೆಗೆ ನೀರು ಪೂರೈಕೆ ಮಾಡಿದರೆ ಅನುಕೂಲವಾಗಲಿದೆ. ಮಹಿಳೆಯರು ನಿತ್ಯ ತಲೆಯ ಮೇಲೆ ನೀರು ಹೊತ್ತು ತರುವ ಹಿಂಸೆ ಕಡಿಮೆಯಾಗಲಿದೆ’ ಎನ್ನುತ್ತಾರೆ.

ಗ್ರಾಮದಲ್ಲಿನ ಕೊಳವೆಬಾವಿಗಳನ್ನು ಪುನಃಶ್ಚೇತನಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಆಸಕ್ತಿ ತೋರಿಸಬೇಕು. ನೀರು ಹೊತ್ತು ತರಲಾಗದೆ ಕೆಲವರು ತಮ್ಮ ಮಕ್ಕಳನ್ನು ಸಂಬಂಧಿಕರ ಊರುಗಳಿಗೆ ಕಳಿಸಿಕೊಟ್ಟಿದ್ದಾರೆ’ ಎಂದು ನಾಗನಾಥ ಗೌಡಗಾಂವೆ ಹೇಳುತ್ತಾರೆ.

‘ಮನೆಯಲ್ಲಿ ನಡೆಯುವ ಕೌಟುಂಬಿಕ ಕಾರ್ಯಕ್ರಮಗಳು ಸಂಭ್ರಮ ಕಳೆದುಕೊಂಡಿವೆ. ನವಜಾತ ಶಿಶುವಿನ ನಾಮಕರಣ, ಶಾಲು ಕಿರಗುಣಿ ಕಾರ್ಯಕ್ರಮಗಳನ್ನು ಸರಳವಾಗಿ ಮಾಡುತ್ತಿದ್ದಾರೆ. ನೀರಿನ ಕೊರತೆ ಇರುವ ಕಾರಣ ಹೆಚ್ಚು ಜನರನ್ನು ಮನೆಯಲ್ಲಿನ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿಲ್ಲ’ ಎನ್ನುತ್ತಾರೆ ಗ್ರಾಮದ ಯುವಕ ಭ್ಯಾಗವಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.