ADVERTISEMENT

ಕೆರೆ ನೀರು ಹೊರ ಚೆಲ್ಲುತ್ತಿರುವ ಜಿಲ್ಲಾಡಳಿತ

ಬೇಸಿಗೆಯಲ್ಲಿ ಪಶು ಪಕ್ಷಿಗಳಿಗೆ ಎದುರಾಗಲಿದೆ ಸಂಕಷ್ಟ

ಚಂದ್ರಕಾಂತ ಮಸಾನಿ
Published 24 ಡಿಸೆಂಬರ್ 2018, 19:53 IST
Last Updated 24 ಡಿಸೆಂಬರ್ 2018, 19:53 IST
ಬೀದರ್‌ನ ಪಾಪನಾಶ ಕೆರೆ
ಬೀದರ್‌ನ ಪಾಪನಾಶ ಕೆರೆ   

ಬೀದರ್: ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಮಳೆ ಕಡಿಮೆಯಾಗಿದ್ದರೆ, ಹಿಂಗಾರು ಕೈಕೊಟ್ಟಿದೆ. ಬೀದರ್‌ ಸುತ್ತಮುತ್ತ ಇರುವ ಕೆರೆ ಕಟ್ಟೆಗಳು ಒಣಗಿವೆ. ನಗರದ ಕೇಂದ್ರ ಸ್ಥಾನದಲ್ಲಿರುವ ಪಾಪನಾಶ ಕೆರೆಯಲ್ಲಿ ಮಾತ್ರ ಈಗಲೂ ನೀರು ಇದೆ. ಪಶು, ಪಕ್ಷಿಗಳಿಗೆ ನೀರು ಉಳಿಸಿಕೊಳ್ಳಬೇಕಿದ್ದ ಜಿಲ್ಲಾ ಆಡಳಿತ ಕೆರೆಯ ನೀರನ್ನೇ ಖಾಲಿ ಮಾಡುತ್ತಿರುವುದಕ್ಕೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ.

ಕೆರೆಯಲ್ಲಿ ನೀರು ಇರುವ ಕಾರಣ ಸುತ್ತಮುತ್ತ ಒಂದಿಷ್ಟು ಹಸಿರು ಇದೆ. ಮರಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಿವೆ. ಬೇಸಿಗೆ ಮುನ್ನವೇ ಕೆರೆ ಖಾಲಿ ಮಾಡಿ ಬಿಟ್ಟರೆ ಮರಗಳು ಒಣಗಲಿವೆ. ಪಶು, ಪಕ್ಷಿಗಳು ಪ್ರಾಣ ಕಳೆದುಕೊಳ್ಳಲಿವೆ. ಶನಿವಾರ ಬೆಳಿಗ್ಗೆ ಪಾಪನಾಶ ಕೆರೆಯ ತೂಗು ತೆರೆಯಲಾಗಿದ್ದು, ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಇದರಿಂದ ಜಾನುವಾರು ಮಾಲೀಕರು ಆತಂಕಗೊಂಡಿದ್ದಾರೆ.

‘ದೇವಸ್ಥಾನಕ್ಕೆ ಬರುವ ಭಕ್ತರೇ ಕೆರೆಯಲ್ಲಿ ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ. ಜಿಲ್ಲಾ ಆಡಳಿತ ಕೆರೆಯ ಮಧ್ಯದಲ್ಲಿ ಶಿವನಮೂರ್ತಿ ಪ್ರತಿಷ್ಠಾಪನೆ ಮಾಡಿ ಅದರ ಸುತ್ತ ಕೊಳಚೆ ನೀರು ನಿಲ್ಲಿಸಿದರೆ ಏನು ಪ್ರಯೋಜನ. ಮೊದಲು ಕೊಳಚೆ ನೀರು ಹರಿದು ಬರುವುದನ್ನು ತಡೆಯಲು ಕ್ರಮ ಕೈಗೊಳ್ಳುವುದು ಒಳ್ಳೆಯದು’ ಎಂದು ಹವ್ಯಾಸಿ ಪಕ್ಷಿ ವೀಕ್ಷಕ ವಿವೇಕಾನಂದ ಹೇಳುತ್ತಾರೆ.

ADVERTISEMENT

‘ಪಾಪನಾಶ ಕೆರೆಯ ಪರಿಸರದಲ್ಲಿ ಅನೇಕ ಬಗೆಯ ಗಿಡ ಮರಗಳು ಇವೆ. ನವಿಲು, ಕೊಕ್ಕರೆ, ಗ್ರೇಹಾರ್ನ್‌ ಬಿಲ್‌, ಬಡಿಗನ ಹಕ್ಕಿ, ಕರಿಭೀಮಾ, ಬೂದು ಕೊಕ್ಕರೆ, ಪೆರಾಡೈಸ್‌ ಫ್ಲೈಕ್ಯಾಚರ್, ಓರಿಯಂಟಲ್‌ ಡಾರ್ಟರ್, ರಿವರ್ಟನ್, ಪಿಟ್ಟಾ ಸೇರಿದಂತೆ 84 ಬಗೆಯ ಪಕ್ಷಿಗಳು ವಾಸವಾಗಿವೆ. ಫ್ಲೆಮಿಂಗೊ, ಹಿಮಾಲಯದ ಬ್ಲ್ಯೂಕ್ಯಾಪ್ ರಾಕ್‌ಥ್ರಸ್ ಸೇರಿ ಅನೇಕ ಹಕ್ಕಿಗಳು ಚಳಿಗಾಲದಲ್ಲಿ ಇಲ್ಲಿಗೆ ವಲಸೆ ಬರುತ್ತವೆ. ಮೊಲ, ಅಳಿಲು, ಮುಂಗುಸಿ, ಹಾವುಗಳು ಅಷ್ಟೇ ಅಲ್ಲ 100 ಬಗೆಯ ಚಿಟ್ಟೆಗಳೂ ಇಲ್ಲಿ ಕಾಣಸಿಗುತ್ತವೆ. ಕೆರೆಯ ನೀರು ಖಾಲಿ ಮಾಡಿದರೆ ಇವುಗಳ ಪ್ರಾಣಕ್ಕೆ ಕುತ್ತು ಬರಲಿದೆ’ ಎನ್ನುತ್ತಾರೆ ಅವರು.

ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಪಾಪನಾಶ ಕೆರೆಯನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಂಡು ನೈಸರ್ಗಿಕವಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದ್ದರು. ಕೆರೆಯ ಮೇಲ್ಭಾಗದಲ್ಲಿ ಚಿಕ್ಕದಾದ ಕೊಳಚೆ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ಸ್ಥಾಪನೆ ಮಾಡಿ ಸಂಸ್ಕರಿಸಿದ ನೀರು ಬಿಡಲು ನಿರ್ಧರಿಸಿದ್ದರು.

ಕೊಳಚೆ ನೀರಿಗೆ ಪ್ರತ್ಯೇಕ ಮಾರ್ಗ ನಿರ್ಮಿಸಲು ಕೆರೆಯ ಒಂದು ಬದಿಗೆ ಬೆಟ್ಟ ಕೊರೆದು ಅರ್ಧಕ್ಕೆ ಬಿಡಲಾಗಿದೆ. ಪೈಪ್‌ಲೈನ್‌ ಮೂಲಕ ನೀರು ಹೊರಗೆ ಹೋಗುವಂತೆ ಮಾಡುವ ಪ್ರಯತ್ನ ಯಶ ಕಂಡಿಲ್ಲ ಎನ್ನುತ್ತಾರೆ ಶಿವನಗರದ ನಿವಾಸಿಗಳು.

‘ಜಿಲ್ಲಾ ಆಡಳಿತ ಕೆರೆಯ ಒಡ್ಡು ಕಳಚಿ ಬೀಳದಂತೆ ಕಲ್ಲುಗಳನ್ನು ಜೋಡಿಸಬೇಕು. ಕೆರೆಯೊಳಗೆ ಕಸ ಎಸೆದಂತೆ ಒಬ್ಬ ಕಾವಲುಗಾರನನ್ನೂ ನೇಮಕ ಮಾಡಬೇಕು. ಪಕ್ಷಿ ವೀಕ್ಷಣೆಗೆ ದೋಣಿಗಳ ವ್ಯವಸ್ಥೆ ಮಾಡಬೇಕು. ಕೆರೆಯಲ್ಲಿ ನೀರು ಬತ್ತದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಪರಿಸರ ಪ್ರೇಮಿ ಪ್ರವೀಣಕುಮಾರ ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.