ADVERTISEMENT

ಜಾನಪದ ಸಂಸ್ಕೃತಿಗೆ ಮಹಿಳೆ ಕೊಡುಗೆ ಅನನ್ಯ: ಮಹೇಶ್ವರಿ ಹೇಡೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 1:30 IST
Last Updated 9 ಫೆಬ್ರುವರಿ 2021, 1:30 IST
ಬೀದರ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ದ್ವಿತೀಯ ಜಾನಪದ ಸಾಹಿತ್ಯ ಸಮ್ಮೇಳನದ ಮೊದಲನೆಯ ಗೋಷ್ಠಿಯಲ್ಲಿ ಸುನೀತಾ ಕೂಡ್ಲಿಕರ್, ಪಾರ್ವತಿ ಸೋನಾರೆ, ವಿ.ಎಂ.ಡಾಕುಳಗಿ, ಸಮ್ಮೇಳನದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ, ಸುರೇಶ ಸ್ವಾಮಿ, ಸಂಜೀವ್‌ ರೆಡ್ಡಿ ಉಪಸ್ಥಿತರಿದ್ದರು
ಬೀದರ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ದ್ವಿತೀಯ ಜಾನಪದ ಸಾಹಿತ್ಯ ಸಮ್ಮೇಳನದ ಮೊದಲನೆಯ ಗೋಷ್ಠಿಯಲ್ಲಿ ಸುನೀತಾ ಕೂಡ್ಲಿಕರ್, ಪಾರ್ವತಿ ಸೋನಾರೆ, ವಿ.ಎಂ.ಡಾಕುಳಗಿ, ಸಮ್ಮೇಳನದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ, ಸುರೇಶ ಸ್ವಾಮಿ, ಸಂಜೀವ್‌ ರೆಡ್ಡಿ ಉಪಸ್ಥಿತರಿದ್ದರು   

ಬೀದರ್‌: ‘ಜಾನಪದ ಕಲೆ ಹಾಗೂ ಸಂಸ್ಕೃತಿಯ ಶ್ರೀಮಂತಿಕೆಗೆ ಮಹಿಳೆಯರ ಕೊಡುಗೆ ಅನನ್ಯವಾಗಿದೆ’ ಎಂದು ಯುವ ಸಾಹಿತಿ ಮಹೇಶ್ವರಿ ಹೇಡೆ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಾಹಿತ್ಯದ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ದ್ವಿತೀಯ ಜಾನಪದ ಸಾಹಿತ್ಯ ಸಮ್ಮೇಳನದ ಮೊದಲನೆಯ ಗೋಷ್ಠಿಯಲ್ಲಿ ‘ಜನಪದ ಸಂಸ್ಕೃತಿ ಹಾಗೂ ಮಹಿಳೆ’ ಕುರಿತು ಮಾತನಾಡಿದರು.

‘ಮಹಿಳೆ ತನ್ನ ಮನೆ ಕೆಲಸದ ಜತೆಗೆ ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದಾಳೆ. ಕೆಲಸದ ಒತ್ತಡದ ಮಧ್ಯೆಯೂ
ಜನಪದ ಹಾಡುಗಳನ್ನು ಹಾಡಿ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದಾಳೆ’ ಎಂದು ಹೇಳಿದರು.

ADVERTISEMENT

‘ಜನಪದ ಬಿತ್ತಿ ಬೆಳೆಸುವಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಅಧಿಕವಾಗಿದೆ. ನಗರ ಹಾಗೂ ಪಟ್ಟಣ ವಾಸಿಗಳು ಗ್ರಾಮೀಣರನ್ನು ಮಾದರಿಯಾಗಿಸಿಕೊಂಡು ತಾವು ಸಹ ನಿಜವಾದ ಜನಪದ ಬದುಕು ರೂಪಿಸಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಾಹಿತಿ ಪಾರ್ವತಿ ಸೋನಾರೆ ಮಾತನಾಡಿ, ‘ಭಾರತವು ಜಾನಪದ ಸಂಸ್ಕೃತಿಯ ತವರಾಗಿದೆ. ನಮ್ಮ ಹಿರಿಯರು ಜನಪದ ಸಂಸ್ಕೃತಿ ಅಳವಡಿಸಿಕೊಂಡು ನೂರಾರು ವರ್ಷ ಬದುಕಿ ಬಾಳಿದ್ದಾರೆ. ಆದರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಅನೇಕ ಸೌಲಭ್ಯಗಳು ಹೊಂದಿದ್ದರೂ ಯಾಂತ್ರಿಕ ಜೀವನದಿಂದ ಮನುಷ್ಯನ ಆಯುಷ್ಯ ಕ್ಷೀಣಿಸುತ್ತಿದೆ. ಇದಕ್ಕೆ ಜಾನಪದ ಬದುಕಿನಿಂದ ವಿಮುಖರಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ’ ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ವಿ.ಎಂ.ಡಾಕುಳಗಿ ಮಾತನಾಡಿ, ‘ಜಾನಪದ ಶೈಲಿಯಿಂದ ದೂರ ಸರಿದ ನಮಗೆ ಇಂದು ಅನೇಕ ಭೀಕರ ಕಾಯಿಲೆಗಳು ಅವರಿಸಿ ನೆಮ್ಮದಿಯನ್ನು ಹಾಳು ಮಾಡುತ್ತಿವೆ. ನಿತ್ಯ ಭಜನೆ, ಕೀರ್ತನೆ, ಕೋಲಾಟ, ಕುಟ್ಟುವ, ಬೀಸುವ, ಭುಲಾಯಿ, ಹಂತಿ, ಲಾವಣಿ, ಸೋಬಾನ ಪದಗಳನ್ನು ಹಾಡುವ ಮೂಲಕ ಇತ್ಯಾದಿಗಳನ್ನು ರೂಢಿಸಿಕೊಂಡಲ್ಲಿ ಕಳೆದು ಹೋದ ನೆಮ್ಮದಿ ಮತ್ತೆ ಮರುಕಳಿಸಲಿದೆ’ ಎಂದರು.

ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ, ಸಂಸ್ಕೃತಿ ಚಿಂತಕ ಸಂಜೀವ್ ರೆಡ್ಡಿ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚನ್ನಪ್ಪ ಸಂಗೊಳಗಿ, ಮದರ್ ತೆರೆಸಾ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಸಂಜೀವಕುಮಾರ ಸ್ವಾಮಿ ಇದ್ದರು.

ಉಪನ್ಯಾಸಕಿ ಡಾ.ಮಹಾನಂದಾ ಮಡಕಿ ಸ್ವಾಗತಿಸಿದರು. ಡಾ.ಸುನಿತಾ ಕೂಡ್ಲಿಕರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.