ADVERTISEMENT

ಬೀದರ್‌| ಮಹಿಳೆಯರು ಬಸವ ತತ್ವದ ಅಂತಃಶಕ್ತಿ: ಬಸವರಾಜ ಬಲ್ಲೂರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 7:02 IST
Last Updated 7 ಡಿಸೆಂಬರ್ 2025, 7:02 IST
ಕಾರ್ಯಕ್ರಮದಲ್ಲಿ ‘ಜಗನ್ಮಾತೆ ಅಕ್ಕಮಹಾದೇವಿ’ ಚಲನಚಿತ್ರದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ‘ಜಗನ್ಮಾತೆ ಅಕ್ಕಮಹಾದೇವಿ’ ಚಲನಚಿತ್ರದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು   

ಬೀದರ್‌: ‘12ನೇ ಶತಮಾನದ ಬಸವ ಚಳವಳಿಯ ಅಂತಃಶಕ್ತಿ ಎಂದರೆ ಮಹಿಳೆಯರು ಮತ್ತು ದಲಿತರು’ ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ ಹೇಳಿದರು.

ಜಿಲ್ಲಾ ಬಸವ ಕೇಂದ್ರದಿಂದ ನಗರದಲ್ಲಿ ಆಯೋಜಿಸಿದ್ದ ಶರಣ ಸಂಗಮ ಹಾಗೂ 12ನೇ ಶತಮಾನದ ಅಕ್ಕಮಹಾದೇವಿ ಜೀವನ ಆಧಾರಿತ ‘ಜಗನ್ಮಾತೆ ಅಕ್ಕಮಹಾದೇವಿ’ ಚಲನಚಿತ್ರದ ಭಿತ್ತಿಪತ್ರ ಬಿಡುಗಡೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಮಹಿಳೆ ಅಬಲೆ ಅಲ್ಲ ಏಕೆಂದರೆ ಹೆಣ್ಣು ಹುಟ್ಟುವುದಿಲ್ಲ ಸೃಷ್ಟಿಯಾಗುತ್ತಾಳೆ. ಸಾಮಾಜಿಕ ನಿರ್ಬಂಧನೆಗಳೆ ಅವಳನ್ನು ಅಬಲೆಯಾಗಿಸುತ್ತದೆ. ಅದನ್ನು ಶರಣರು ನಿರಾಕರಿಸಿ ಲಿಂಗ ಸಮಾನತೆ ತಂದರು. ವರ್ಗ, ವರ್ಣ, ಜಾತಿ ಭೇದ ಅಳಿಸಿದರು. ಆ ಪ್ರಭಾವವೇ ಅಕ್ಕ ಮಹಾದೇವಿಯನ್ನು ರೂಪಿಸಿತು. ಜಗತ್ತಿನ ಮೊದಲ ಕವಯತ್ರಿ ಅಕ್ಕ ನೋಡಲು ಹೆಣ್ಣು ರೂಪಾದರೇನು ಭಾವಿಸಲು ಗಂಡು ನೋಡಾ ಎಂದು ಹೇಳಿದ್ದರು. ಆಕೆಯ ಸ್ವ ರಕ್ಷಣೆಯ ಗಣಾಚಾರ ತತ್ವ ಸ್ವಾಭಿಮಾನಿ ಜೀವನ, ದೈವನಿಷ್ಠೆಯ ನಿಲುವು ಇಂದಿಗೂ ಮಾದರಿ ಎಂದು ತಿಳಿಸಿದರು.

ADVERTISEMENT

ಅಕ್ಕಮಹಾದೇವಿಯ ಆತ್ಮಸ್ಥೈರ್ಯ ಪ್ರತಿ ಹೆಣ್ಣಿನಲ್ಲಿದ್ದರೆ ಆತ್ಯಾಚಾರ ಪ್ರಕರಣಗಳೇ ನಡೆಯುವುದಿಲ್ಲ. ಪ್ರತಿ ಹೆಣ್ಣಲ್ಲಿ ಒಬ್ಬ ಅಕ್ಕಮಹಾದೇವಿ ರೂಪುಗೊಳ್ಳಬೇಕು. ಇಂತಹ ಅಕ್ಕನ ಬಗ್ಗೆ ನಿರ್ಮಾಪಕ ಬಿ.ಜೆ ವಿಷ್ಣುಕಾಂತ ಅವರು ಚಲನಚಿತ್ರ ಮಾಡಿರುವುದು ಶ್ಲಾಘನಾರ್ಹ. ಡಿ. 19ರಂದು ತೆರೆಗೆ ಬರಲಿರುವ ಈ ಸಿನಿಮಾದಲ್ಲಿ ಹಲವು ಕಲಾವಿದರು ಬೀದರನವರಿರುವುದು ವಿಶೇಷ ಸಂಗತಿ ಎಂದರು.

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ನಿರ್ಮಾಪಕ ಬಿ.ಜೆ. ವಿಷ್ಣುಕಾಂತ, ಶ್ರೀಗೌರಿ, ನಟಿ ಸುಲಕ್ಷಾ ಕೈರಾ, ಬಸವ ಕೇಂದ್ರ ಟ್ರಸ್ಟ್ ಅಧ್ಯಕ್ಷ ಪ್ರಭುರಾವ್‌ ವಸ್ಮತೆ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಮಣಗೇರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ಶಿವಶಂಕರ ಟೋಕರೆ, ರಾಜಮತಿ ಚಿಕ್ಕಪೇಟೆ, ಅಶ್ವಿನಿ ರಾಜಕುಮಾರ ಸ್ವಾಮಿ ಬಂಪಳ್ಳಿ, ರೇವಣಪ್ಪ ಮೂಲಗೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.