ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ಕೊಹಿನೂರನಲ್ಲಿ ಗುರುಬಸವೇಶ್ವರ ಲಿಂಗಾಯತ ಮಹಾಮಠದಿಂದ ಭಾನುವಾರ ಸಂಜೆ ಪ್ರಥಮ ವಚನ ರಥೋತ್ಸವ ಜರುಗಿತು. ಮಹಿಳೆಯರೇ ಹಗ್ಗ ಹಿಡಿದು ತೇರು ಎಳೆದದರು.
ಹತ್ತರ್ಗಾ- ಕೊಹಿನೂರ ಮಹಾಮಠದ ಗೋಣಿರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ವಚನ ಗ್ರಂಥಗಳನ್ನು ಇಟ್ಟಿದ್ದ ತೇರು ಎಳೆಯಲಾಯಿತು. ತಳೀರು ತೋರಣ ಹಾಗೂ ಪುಷ್ಪಗಳಿಂದ ಸಿಂಗರಿಸಿದ್ದ ತೇರು ಎಳೆಯುವಾಗ ವಿವಿಧೆಡೆಯ ಮಠಾಧೀಶರು ಅದರ ಮುಂದೆ ಮುಂದೆ ಸಾಗಿದರು. ಭಕ್ತರು ಬಸವೇಶ್ವರ ಮಹಾರಾಜ ಕೀ ಜೈ ಎಂಬಿತ್ಯಾದಿ ಘೊಷಣೆಗಳನ್ನು ಕೂಗಿ ನಾಣ್ಯ ಮತ್ತು ಹಣ್ಣುಗಳನ್ನು ತೇರಿನ ಮೇಲೆ ಎಸೆದು ನಮಿಸಿದರು. ಬಳಿಕ ವೇದಿಕೆಯ ಮೇಲೆ ’ಬಸವ ಭಾರತದ ಬೆಳಕು' ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.
ಬೈಲೂರು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ’ಮೂಢನಂಬಿಕೆ ಎಂಬ ಕತ್ತಲು ತೊರೆದು ಬಸವತತ್ವ ಎಂಬ ಬೆಳಕಿನೆಡೆಗೆ ಸಾಗಬೇಕು. ಗುರು ಬಸವಣ್ಣನವರು ಸಮಾನತೆ, ಕಾಯಕ, ದಾಸೋಹ ತತ್ವ ಸಾರಿ ವೈಚಾರಿಕತೆ ಮತ್ತು ವೈಜ್ಞಾನಿಕ ತಳಹದಿಯ ಲಿಂಗಾಯತ ಧರ್ಮ ನೀಡಿದ್ದಾರೆ. ಅದರ ಪಾಲನೆ ಅಗತ್ಯವಾಗಿದೆ' ಎಂದರು.
ಗೋಣಿರುದ್ರೇಶ್ವರ ಸ್ವಾಮೀಜಿ ಮಾತನಾಡಿ, `ಕೆಲ ವರ್ಷಗಳಿಂದ ಇಲ್ಲಿ ಮಹಾಮಠ ಸ್ಥಾಪಿಸಿದ್ದು ಇದೇ ಪ್ರಥಮ ಸಲ ತೇರು ಎಳೆಯಲಾಗುತ್ತಿದೆ. ವಚನಗಳು ಅರಿವಿನ ಮೂಲವಾಗಿದ್ದು ಅವುಗಳನ್ನು ಮತ್ತು ಬಸವಣ್ಣನವರ ಪ್ರತಿಮೆಯನ್ನಿಟ್ಟು ರಥೋತ್ಸವ ನಡೆಸಲಾಗಿದೆ. ಇಂಥ ವಿಶಿಷ್ಟ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ದೊರೆತ ಸಹಾಯ, ಸಹಕಾರ ಮರೆಯಲಾಗದು' ಎಂದರು.
ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅನುಭವ ಮಂಟಪ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ, ಉಸ್ತೂರಿ ಕೋರಣೇಶ್ವರ ಸ್ವಾಮೀಜಿ, ಶರಣೆ ಪ್ರಭುಶ್ರೀ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಮುಖಂಡರಾದ ರತಿಕಾಂತ ಕೊಹಿನೂರ, ಶಿವಶರಣಪ್ಪ ಸಂತಾಜಿ ಪಾಟೀಲ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಕುಮಾರ ಶಿರಗಾಪುರ, ಮಲ್ಲಿನಾಥ ಹಿರೇಮಠ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲು ಗ್ರಾಮದಲ್ಲಿ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.