ADVERTISEMENT

`ಕಾನೂನು ಅರಿವು ಅನಿವಾರ್ಯ'

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 9:31 IST
Last Updated 18 ಜುಲೈ 2013, 9:31 IST

ಯಳಂದೂರು: `ಪ್ರಸಕ್ತ ದಿನಗಳಲ್ಲಿ ಪ್ರತಿಯೊಬ್ಬ ನಾಗರಿಕನು ಸಂವಿಧಾನ ನೀಡಿರುವ ಕಾನೂನುಗಳ ಬಗ್ಗೆ ಪ್ರಾಥಮಿಕವಾಗಿ ತಿಳಿದುಕೊಳ್ಳುವ ಅಗತ್ಯ ಹೆಚ್ಚಾಗಿದೆ' ಎಂದು ಸಿವಿಲ್ ನ್ಯಾಯಾಧೀಶರಾದ ಎಚ್.ಆರ್. ರವಿಕುಮಾರ್ ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನ್ಯಾಯ ಪಡೆದುಕೊಳ್ಳುವುದು ವ್ಯಕ್ತಿಯ ಮೂಲಭೂತ ಹಕ್ಕು. ದೇಶದ ಪ್ರತಿಪ್ರಜೆಗೂ ನ್ಯಾಯ ಸಿಗಲು ಹೋರಾಟ ಅನಿವಾರ್ಯ. ಅನಾದಿ ಕಾಲದಿಂದಲೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ಆಗುತ್ತಿವೆ. ಸಾಕ್ರೆಟಿಸ್ ಎಂಬ ತತ್ವಜ್ಞಾನಿಯ ಬರಹಗಳು ಇಂದಿಗೂ ಪ್ರಸ್ತುತವಾಗಿದೆ.

ಪ್ರತಿಯೊಬ್ಬ ನ್ಯಾಯಾಧೀಶರೂ ಹಾಗೂ ವಕೀಲರು ಇದನ್ನು ಓದಬೇಕು. ಯಾವುದಾದರೂ ಇಲಾಖೆಯಿಂದ ಸಾರ್ವಜನಿಕರಿಗೆ ದೌರ್ಜನ್ಯವಾದರೆ ಇದನ್ನು ಖಂಡಿಸುವ ಅಗತ್ಯತೆ ಹೆಚ್ಚಾಗಿರುತ್ತದೆ. ಈ ಜ್ಞಾನ ಸಂಪಾದನೆಗೆ ಕಾನೂನಿನ ಅರಿವು ಅಗತ್ಯ ಎಂದರು.

ವಕೀಲ ಮಾದೇಶ್ ಮಾತನಾಡಿ, ಸಾರ್ವಜನಿಕರು ತಮ್ಮ ಹಕ್ಕಿಗೆ ಚ್ಯುತಿ ಬಂದಾಗ ಎಚ್ಚೆತ್ತುಕೊಳ್ಳಬೇಕು. ಆದಿ ಮಾನವನಿಂದ ಹಿಡಿದು ಇಲ್ಲಿಯ ತನಕ ನ್ಯಾಯದ ಇತಿಹಾಸದಲ್ಲಿ ಅನೇಕ ಮಾರ್ಪಾಡುಗಳಾಗಿವೆ. ದೌರ್ಜನ್ಯ ನಿಯಂತ್ರಣಕ್ಕೆ ಕಾನೂನುಗಳ ರಚನೆಯಾಗಿವೆ. ಇದರ ರಕ್ಷಣೆ, ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ತಾಲ್ಲೂಕು ವಕೀಲ ಸಂಘದ ಅಧ್ಯಕ್ಷ ಸಿ.ಸಿದ್ದರಾಜು, ವಕೀಲರಾದ ಮಂಜುನಾಥ್, ಚಿನ್ನಸ್ವಾಮಿ ಮಾತನಾಡಿದರು. ಚೇತನ್,ಸಂತೋಷ್, ಮಧುರನಾಥ್, ಲೋಕೇಶ್, ನವೀನ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.