ADVERTISEMENT

ನೀರಿನ ಸಮಸ್ಯೆ ಪರಿಹರಿಸಲು ವಿಳಂಬ ಸಲ್ಲ

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 6:19 IST
Last Updated 12 ಜುಲೈ 2013, 6:19 IST

ಚಾಮರಾಜನಗರ: `ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಅಭಾವ ತಲೆದೋರದಂತೆ ಲಭ್ಯವಿರುವ ಅನುದಾನ ಬಳಸಿಕೊಂಡು ತ್ವರಿತವಾಗಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕುಡಿಯುವ ನೀರು, ಬರ ಪರಿಹಾರ ಸೇರಿದಂತೆ ಇತರೇ ಕಾರ್ಯಕ್ರಮ ಕುರಿತು ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ಪಟ್ಟಣದ ವ್ಯಾಪ್ತಿ ಲಭ್ಯವಿರುವ ಅನುದಾನ ಹೊಂದಾಣಿಕೆ ಮಾಡಿಕೊಂಡು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ಜಿಲ್ಲಾ ಕೇಂದ್ರಕ್ಕೆ ನೀರು ಪೂರೈಸುವ ಮೋಟಾರ್ ವ್ಯವಸ್ಥೆಗೆ ಲಭ್ಯವಿರುವ ರೂ 40 ಲಕ್ಷ ಅನುದಾನ ಬಳಸಬೇಕು. ನೀರು ನಿರ್ವಹಣೆ ಕಾಮಗಾರಿಯನ್ನು ಜಲಮಂಡಳಿಗೆ ವಹಿಸಬೇಕು. ಶಾಶ್ವತ ಕುಡಿಯುವ ನೀರು ಪೂರೈಕೆಗೆ ಪೈಪ್‌ಲೈನ್, ಜಾಕ್‌ವೆಲ್ ಪರಿಶೀಲಿಸಿ ಸಮಗ್ರ ಪ್ರಸ್ತಾವ ಸಲ್ಲಿಸಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ್‌ರಾಜ್ ಇಲಾಖೆ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಬೇಕು. ಗ್ರಾಮೀಣರಿಗೆ ನೀರು ಪೂರೈಸುವ ವಿಷಯವನ್ನು ಆದ್ಯತೆಯಾಗಿ ಪರಿಗಣಿಸಬೇಕು. ವಿಳಂಬ ಧೋರಣೆ ಸಲ್ಲದು ಎಂದು ಹೇಳಿದರು.

ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ. ಚಂದ್ರಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಜೂನ್ 3ರ ನಂತರ ಉತ್ತಮ ಮಳೆಯಾಗಿಲ್ಲ. ಮುಂದೆ ಮಳೆಯಾಗಬಹುದೆಂಬ ನಿರೀಕ್ಷೆಯಿದೆ. ಬಿತ್ತನೆ ಚಟುವಟಿಕೆ ಪ್ರಮಾಣ ಕೊಂಚ ಕಡಿಮೆಯಾಗಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಹದೇವಪ್ರಸಾದ್, ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಅಭಾವಪೀಡಿತ ಪರಿಸ್ಥಿತಿ ನಿರ್ವಹಣೆಗೆ ಬೇಕಾದ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲು ಜಿಲ್ಲಾಧಿಕಾರಿ ಕ್ರಮವಹಿಸಬೇಕು ಎಂದು ಸೂಚಿಸಿದರು.

ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ಈ ಹಿಂದೆ ಬರ ಪರಿಹಾರ ಕಾಮಗಾರಿ ಪೂರ್ಣಗೊಳಿಸಿರುವವರಿಗೆ ಬಾಕಿ ಇರುವ ಹಣವನ್ನು ವಿಳಂಬ ಮಾಡದೆ ಪಾವತಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಮರಳು ವಿತರಣೆ ಕುರಿತು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ರಿಂದ ಮಾಹಿತಿ ಪಡೆದ ಸಚಿವರು, ಮರಳು ವಿತರಣೆಯನ್ನು ಇಲಾಖೆ ಮೂಲಕವೇ ಯಾವುದೇ ಲೋಪವಾಗದಂತೆ ವಿತರಿಸಬೇಕು. ಜಿಲ್ಲೆಯ ಕಾಮಗಾರಿಗೆ ಎಷ್ಟು ಪ್ರಮಾಣದ ಮರಳು ಅಗತ್ಯವಿದೆ ಎಂಬ ಬಗ್ಗೆ ಅಂದಾಜಿಸಬೇಕು. ನಿಯಮಾನುಸಾರ ಮರಳು ಮಾರಾಟ ಮಾಡಿ ರಾಜಸ್ವ ಸಂಗ್ರಹ ಮಾಡಬೇಕು. ಅಕ್ರಮ ಮರಳು ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಮಾತನಾಡಿ, ಮರಳು ಸಾಗಣೆ ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗುತ್ತಿದೆ. ಸತ್ತೇಗಾಲ ಚೆಕ್‌ಪೋಸ್ಟ್‌ನಲ್ಲಿ ಸಿಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಅಕ್ರಮ ಮರಳು ಸಾಗಣೆ ಮೇಲೆ ಸಂಪೂರ್ಣ ನಿಗಾವಹಿಸಲಾಗಿದೆ ಎಂದರು.

ಸಭೆಯಲ್ಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎಸ್. ಜಯಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಉಪ ವಿಭಾಗಾಧಿಕಾರಿ ಎಚ್.ಎಸ್. ಸತೀಶ್‌ಬಾಬು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎ.ಪಿ. ಶಂಕರರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿ ಶಿವಾನಂದ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.