ಯಳಂದೂರು: ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯಲ್ಲಿ ಬೆಂಬಲ ಬೆಲೆಯ ಅರಿಸಿನ ಖರೀದಿ ಕೇಂದ್ರವನ್ನು ಶುಕ್ರವಾರ ಟಿಎಪಿಸಿಎಂಎಸ್ ಅಧ್ಯಕ್ಷ ಶಾಂತಮೂರ್ತಿ ಉದ್ಘಾಟಿಸಿದರು.ನಂತರ ಅವರು ಮಾತನಾಡಿ, ಸರ್ಕಾರ ರೈತರಿಂದ ನೇರವಾಗಿ ಅರಿಸಿನವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಗದಿ ಪಡಿಸಿರುವ ದಾಖಲೆಗಳನ್ನು ನೀಡಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವಂತೆ ಮನವಿ ಮಾಡಿದರು.
ಸಹಕಾರ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿ ವನಜಾಕ್ಷಿ ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರ ಬೆಂಬಲ ಬೆಲೆಯಲ್ಲಿ ಅರಿಸಿನ ಖರೀದಿ ಕೇಂದ್ರವನ್ನು ತೆರೆಯಲಾಗಿದೆ. ರೈತರು ಆರ್‌ಟಿಸಿ, ಗ್ರಾಮಲೆಕ್ಕಿಗರಿಂದ ಭಾವಚಿತ್ರವಿರುವ ಬೆಳೆ ದೃಢೀಕರಣ ಪತ್ರದೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಮೊದಲು ಬಂದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ನಂಜಯ್ಯ ಮಾತನಾಡಿ ತ್ಲ್ಲಾಲೂಕಿನಲ್ಲಿ ಈ ವರ್ಷ 200 ಹೆಕ್ಟೇರ್ ಪ್ರದೇಶದಲ್ಲಿ ಅರಿಸಿನವನ್ನು ಬೆಳೆಯಲಾಗಿದೆ. ರೈತರಿಗೆ ಸರ್ಕಾರ ಬೆಂಬಲ ಬೆಲೆಯಲ್ಲಿ ಅರಿಸಿನ ಖರೀದಿ ಕೇಂದ್ರ ತೆರೆದಿರುವ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ್ ಶಿವನಾಗಯ್ಯ, ಇಒ ಚಿಕ್ಕಲಿಂಗಯ್ಯ, ಟಿಎಪಿಸಿಎಂಎಸ್‌ನ ಕಾರ್ಯದರ್ಶಿ ಎಸ್. ಪ್ರಕಾಶ್‌ಕುಮಾರ್, ಸದಸ್ಯರಾದ ವಡಗೆರೆ ದಾಸ್, ಪುಟ್ಟಸುಬ್ಬಪ್ಪ, ಚಾಮರಾಜು. ಬಸವಣ್ಣ, ಸುರೇಶ್, ಕೆ.ಎಂ.ಶಿವಣ್ಣ, ಹೊನ್ನೂರು ರಾಜಪ್ಪ, ಆಹಾರ ನಿರೀಕ್ಷಕ ನಾಗರಾಜು ಇತರರು ಇದ್ದರು.
ನೋಂದಣಿಗೆ ಸೂಚನೆ
ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಅರಿಸಿನ ಕೇಂದ್ರ ತೆರೆದಿದ್ದು, ಏ.30 ರೊಳಗೆ ಅರಿಸಿನ ಬೆಳೆಗಾರರು ನೋಂದಾಯಿಸಿಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಣ್ಣೇಗೌಡ ಶುಕ್ರವಾರ ತಿಳಿಸಿದ್ದಾರೆ.
ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್. ಆವರಣದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ನೋಂದಣಿ ಮಾಡಿಸಿದ ರೈತರ ಅರಿಸಿನವನ್ನು ಮೇ 1 ರಿಂದ 31 ರೊಳಗೆ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಖರೀದಿ ಮಾಡಲಾಗುವುದು ಎಂದರು. ಪ್ರತಿ ಕ್ವಿಂಟಲ್‌ಗೆ ಕೇಂದ್ರ ಸರ್ಕಾರದ ರೂ.4,098 ಹಾಗೂ ರಾಜ್ಯ ಸರ್ಕಾರದ ಸಹಾಯ ಧನ 908 ಸೇರಿ ಒಟ್ಟು ರೂ.5 ಸಾವಿರ ನೀಡಲಾಗುವುದು.
ಆದರೆ ಅರಿಸಿನವು ಉತ್ತಮ ಗುಣಮಟ್ಟ್ದ್ದದಾಗಿದ್ದು ಪಾಲಿಶ್ ಮಾಡಿರಬೇಕು. ಜತೆಗೆ ರೈತರು ತೋಟಗಾರಿಕೆ ಇಲಾಖೆಯಿಂದ ಅರಿಸಿನ ಬೆಳೆದಿರುವುದಕ್ಕೆ ದೃಢೀಕರಣ ಪತ್ರ ನೀಡಬೇಕು ಮತ್ತು ಪ್ರತಿ ರೈತರಿಂದ 50 ಕ್ವಿಂಟಲ್ ವರೆಗೆ ಮಾತ್ರ ಖರೀದಿಸಲಾಗುವುದು. ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.