ADVERTISEMENT

ವಿದ್ಯುತ್ ಸಮಸ್ಯೆ: ಕುಡಿಯಲು ನೀರಿಲ್ಲ!

ಎನ್.ನಾಗರಾಜ್
Published 18 ಜುಲೈ 2012, 4:00 IST
Last Updated 18 ಜುಲೈ 2012, 4:00 IST

ಗುಂಡ್ಲುಪೇಟೆ: ಕುಡಿಯುವ ನೀರಿನ ಸಮಸ್ಯೆ, ಶುಚಿತ್ವದ ಕೊರತೆ, ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿ, ಉರಿಯದ ಬೀದಿ ದೀಪಗಳು, ರಸ್ತೆಯೇ ಶೌಚಾಲಯವಾಗಿರುವುದು, ತಾಲ್ಲೂಕಿನ ಬೇಗೂರು ಹೋಬಳಿಯ ಕಾಳನಹುಂಡಿ ಗ್ರಾಮದ ಚಿತ್ರಣ.

ಈ ಗ್ರಾಮವು ಬೇಗೂರು ಗ್ರಾಮ ಪಂಚಾಯಿತಿಗೆ ಸೇರಿದ್ದು, 500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಗ್ರಾಮದಲ್ಲಿ ಕುರುಬ ಜನಾಂಗವು ಹೆಚ್ಚಾಗಿದ್ದು ಶಿಕ್ಷಣಕ್ಕೆ ಅಷ್ಟೇನು ಮಹತ್ವ ನೀಡದ ಕಾರಣ ಅವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಒಂದೇ ಕೊಳವೆ ಬಾವಿ ಇರುವುದರಿಂದ ಮಹಿಳೆಯರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನೀರು ಹಿಡಿಯುವ ಪರಿಸ್ಥಿತಿ ಇದೆ. ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಗ್ರಾಮದ ಚಿಕ್ಕೇಗೌಡ ಎಂಬುವವರ ಆರೋಪ.

ರಸ್ತೆಗಳ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಹಲವು ಬಡಾವಣೆಗಳಲ್ಲಿ ರಸ್ತೆ ಗುಂಡಿ ಬಿದ್ದಿದೆ. ಚರಂಡಿಯಲ್ಲಿ ಹೂಳು ತೆಗೆಯದ ಕಾರಣ ನೀರು ಹೋಗದೆ ಮಳೆಯಾದರೆ ರಸ್ತೆಯ ಮಧ್ಯ ಭಾಗದಲ್ಲಿಯೇ ಹರಿಯುತ್ತದೆ. ಇದರಿಂದ ಗ್ರಾಮಸ್ಥರಿಗೆ ಓಡಾಡಲು ತೊಂದರೆ. ಅಲ್ಲಲ್ಲಿ ಮಳೆ ನೀರು ನಿಲ್ಲುವುದರಿಂದ ಸೊಳ್ಳೆಗಳ ವಾಸ ಸ್ಥಾನವಾಗಿದೆ.

ಗ್ರಾಮದಲ್ಲಿ ಶುಚಿತ್ವ ಇಲ್ಲದೆ ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು ತಿಂಗಳುಗಳಾದರೂ ಅದನ್ನು ತೆಗೆದು ಸ್ವಚ್ಛಗೊಳಿಸುವುದಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಅನೇಕ ವರ್ಷಗಳು ಕಳೆದರೂ ಗ್ರಾಮದ ಒಳಭಾಗದಲ್ಲಿ ಡಾಂಬರೀಕರಣದ ರಸ್ತೆ ಇಲ್ಲ. ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲ. ಬಹುತೇಕ ಜನರು ಬಯಲು ಶೌಚಾಲಯದ ಮೊರೆ ಹೋಗ ಬೇಕಾದ ಅನಿವಾರ್ಯತೆ ಇದೆ. ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿಯೊಂದು ಮನೆಗೂ ಶೌಚಾಲಯ ನಿರ್ಮಿಸಲು ಸಹಾಯ ಧನ ನೀಡ ಬೇಕು ಹಾಗೂ ಗ್ರಾಮದಲ್ಲಿ ಒಂದು ಸಾರ್ವಜನಿಕ ಶೌಚಾಲಯ ನಿರ್ಮಿಸ ಬೇಕೆನ್ನುವುದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸ್ವಾಮಿ ಅವರ ಆಗ್ರಹ.

ಈ ಗ್ರಾಮದಲ್ಲಿನ ಮೂಲ ಸೌಕರ್ಯಗಳ ಬಗ್ಗೆ  ಜನಪ್ರತಿನಿಧಿಗಳು ಗಮನ ಹರಿಸುವುದಿಲ್ಲ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಈ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ತುರ್ತಾಗಿ ಒಂದೆರಡು ಕೊಳವೆ ಬಾವಿ ಕೊರೆಯಿಸಿ ತೊಂಬೆ ನಿರ್ಮಿಸಿ ಕೊಡ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮದ ಬಹುತೇಕ ಜನರು ವ್ಯವಸಾಯ ಮಾಡುತ್ತಿರುವುದರಿಂದ ಕೆಲವು ವೇಳೆ ನಿರಂತರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ತೊಂದರೆಯಾಗಿದೆ ಮತ್ತು ವೋಲ್ಟೆಜ್ ಕೊರತೆ ಇದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಫಲಾನುಭವಿಗಳ ಪಟ್ಟಿ ಮಾಡಿದ್ದರೂ ಹಲವು ಅರ್ಹ ಫಲಾನುಭವಿಗಳನ್ನು ಸೇರ್ಪಡೆಗೊಳಿಸದೇ ಇರುವುದರಿಂದ ಕೆಲವರಿಗೆ ಅನ್ಯಾಯವಾಗಿದೆ ಎನ್ನುವುದು ಯುವಕರ ಅಭಿಪ್ರಾಯ.

ಇನ್ನಾದರೂ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿ ವರ್ಗದವರು ಇತ್ತ ಗಮನಹರಿಸಿ ಗ್ರಾಮದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.